ಕನ್ನಡ ಸಾಹಿತ್ಯ ಸಮ್ಮೇಳನ ಸಿದ್ಧತೆಗೆ ಬೊಮ್ಮಾಯಿ ಸಲಹೆ

ಹಾವೇರಿ:ಡಿ.19- ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವ್ಯವಸ್ಥಿತವಾಗಿ ಆಯೋಜಿಸಬೇಕು. ಯಾವುದೇ ಲೋಪವಾಗಬಾರದು. ಭಿನ್ನಾಭಿಪ್ರಾಯಗಳನ್ನು ಬಿಟ್ಟು ಸಮನ್ವಯತೆಯಿಂದ ಅತ್ಯಂತ ವಿಭಿನ್ನವಾಗಿ ಉತ್ಕøಷ್ಟವಾದ ಸಾಹಿತ್ಯ ಚರ್ಚೆಗಳಿಗೆ ಆದ್ಯತೆ ನೀಡಿ ಕಾರ್ಯಕ್ರಮ ಸಿದ್ಧತೆಯನ್ನು ಕೈಗೊಳ್ಳುವಂತೆ ಗೃಹ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಸಲಹೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಸಿದ್ಧತೆ ಕುರಿತಂತೆ ಜರುಗಿದ ಮೊದಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದೇ 2021ರ ಫೆಬ್ರುವರಿ 26, 27 ಹಾಗೂ 28 ರಂದು ಸಮ್ಮೇಳನ ನಡೆಸುವ ಕುರಿತಂತೆ ಈಗಾಗಲೇ ದಿನಾಂಕ ಘೋಷಣೆಯಾಗಿದೆ. ಸಮ್ಮೇಳನ ನಡೆಸುವ ಹೊತ್ತಿನಲ್ಲಿ ಕೋವಿಡ್ ವೈರಾಣು ಕಡಿಮೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ. ಜನವರಿ ಅಂತ್ಯದೊಳಗೆ ಕೋವಿಡ್ ಇಳಿಮುಖಗೊಳ್ಳಬಹುದು. ಪರಿಸ್ಥಿತಿಯನ್ನು ನೋಡಿಕೊಂಡು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಮ್ಮೇಳನದ ಸ್ವರೂಪ ಕುರಿತಂತೆ ಕ್ರಮವಹಿಸಲಾಗುವುದು. ಆರ್ಥಿಕ ಸಂಕಷ್ಟವಿದ್ದರೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಮ್ಮೇಳನ ನಡೆಸಲು ಬೇಕಾದ ಅನುದಾನವನ್ನು ಒದಗಿಸಲಾಗುವುದು ಎಂದು ಹೇಳಿದರು.
ಸಿದ್ಧತೆಗಳಿಗೆ ಕಾಲಾವಕಾಶ ಕಡಿಮೆ ಇದ್ದರೂ ವ್ಯವಸ್ಥಿತವಾಗಿ ಸಮ್ಮೇಳನ ನಡೆಸಲು ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕು. ಕೋವಿಡ್-19 ವೈರಾಣು ಮಧ್ಯೆಯೂ ಸಮ್ಮೇಳನಕ್ಕೆ ಸಿದ್ಧತೆ ಮಾಡಿಕೊಳ್ಳವಬೇಕಾಗಿದೆ. ಮುಂದಿನ ದಿನಗಳಲ್ಲಿ ಕೋವಿಡ್ ಸೋಂಕಿನ ಪ್ರಮಾಣವನ್ನು ಆಧರಿಸಿ ಸಮ್ಮೇಳನದ ಸ್ವರೂಪ ಕುರಿತಂತೆ ಆರೋಗ್ಯ ಇಲಾಖೆಯ ಮಾರ್ಗದರ್ಶನ ಪಡೆದು ನಿರ್ಧರಿಸಬೇಕಾಗುತ್ತದೆ. ಸಮಿತಿಗಳ ರಚನೆ, ಸ್ಥಳಗಳ ಆಯ್ಕೆ, ಸಾಹಿತ್ಯಗೋಷ್ಠಿ, ವಸತಿ, ಸಾರಿಗೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವಂತೆ ಸಲಹೆ ನೀಡಿದರು.
ಕೋವಿಡ್‍ನಂತಹ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಸಮ್ಮೇಳನಕ್ಕೆ ಎಲ್ಲ ತರದ ನೆರವನ್ನು ಒದಗಿಸಲಿದೆ. ತ್ವರಿತವಾಗಿ ಸಮಿತಿಗಳನ್ನು ರಚಿಸಿಕೊಂಡು ಅಂದಾಜು ವೆಚ್ಚದ ವಿವರವನ್ನು ಸಲ್ಲಿಸಿವಂತೆ ಸೂಚಿಸಿದರು.
ಕೃಷಿ ಸಚಿವರಾದ ಬಿ.ಸಿ.ಪಾಟೀಲ ಅವರು ಮಾತನಾಡಿ, ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೆ ಹೆಸರಾಗಿರುವ ಹಾವೇರಿ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಿಕ್ಕಿರುವ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ನಾಡಿಗೆ ಈ ಸಮ್ಮೇಳನದ ಮೂಲಕ ಹೊಸ ಸಂದೇಶವನ್ನು ನೀಡೋಣ. ದಾಸಶ್ರೇಷ್ಠರು, ಸಂಗೀತ ಶ್ರೇಷ್ಠರು, ತತ್ವಪದಕಾರರ ಈ ನೆಲದಲ್ಲಿ ಸಮ್ಮೇಳನ ನಡೆಸಲು ಅವಕಾಶ ಸಿಕ್ಕಿರುವುದು ಸಂತೋಷದ ವಿಷಯವಾಗಿದೆ. ಕನ್ನಡ ಭಾಷೆಗೆ ಯಾವುದೇ ಪಕ್ಷ ಇಲ್ಲ. ಪಕ್ಷಾತೀತವಾಗಿ ಎಲ್ಲರೂ ಒಟ್ಟಾಗಿ ತನು-ಮನ-ಧನದ ನೆರವಿನಿಂದ ಸಮ್ಮೇಳವನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷರಾದ ಮನು ಬಳಿಗಾರ ಅವರು ಮಾತನಾಡಿ, ಒಳ್ಳೆಯ ಮನಸ್ಸು, ಉತ್ಸಾಹ, ಸಹಕಾರವಿದ್ದರೆ ಸಮ್ಮೇಳನ ಯಶಸ್ಸು ಕಾಣಲು ಸಾಧ್ಯ. ಹಾವೇರಿ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಎಲ್ಲರ ಸಹಕಾರವಿದೆ. ಈಗಾಗಲೇ ಸಾಹಿತ್ಯ ಸಮ್ಮೇಳನದ ದಿನಾಂಕ ಘೋಷಣೆಯಾಗಿದೆ. ಜನವರಿ ಮೊದಲವಾರದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರನ್ನು ಆಯ್ಕೆಮಾಡಲಾಗುವುದು. ಸಮ್ಮೇಳನಕ್ಕೆ ಹಾವೇರಿಯಲ್ಲಿ ಈಗಾಗಲೇ 29 ಜಾಗ ಗುರುತಿಸಲಾಗಿದೆ. ಸಮ್ಮೇಳನದಲ್ಲಿ ಒಂದು ದಿನಕ್ಕೆ ಕನಿಷ್ಠ ಎರಡರಿಂದ ಮೂರು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಜಿಲ್ಲೆ ರಚನೆಯಾಗಿ 24 ವರ್ಷ ಕಳೆದರೂ ಇಲ್ಲಿ ಸಮ್ಮೇಳವಾಗಿಲ್ಲ. ಈ ಸಮ್ಮೇಳನ ಐತಿಹಾಸಿಕವಾಗಲಿದೆ. ದೇಶ, ವಿದೇಶದಿಂದ ಸಮ್ಮೇಳನಕ್ಕೆ ಬರಲು ಸಿದ್ಧತೆಮಾಡಿಕೊಂಡಿದ್ದಾರೆ. 15 ಸಾವಿರ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಬಹುದು. ಆಹ್ವಾನಿತರು, ಗೋಷ್ಠಿಗಳ ವಿದ್ವಾಂಸರು, ಗಣ್ಯರು, ಕವಿಗಳು ಸೇರಿದಂತೆ ವಸತಿಗಾಗಿ ಒಂದುವರೆಸಾವಿರ ಕೊಠಡಿಗಳ ಅವಶ್ಯಕತೆ ಇದೆ. ಕೋವಿಡ್ ಹಿನ್ನೆಲೆಯಲ್ಲಿ ಯಾವ ರೀತಿ ಸಮ್ಮೇಳನ ನಡೆಸಬೇಕು ಎಂಬುದನ್ನು ಚರ್ಚಿಸಲಾಗುವುದು. ಉಳಿದಂತೆ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.