ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಅಲೆ ಸೃಷ್ಟಿಸಿದ ತೇಜಸ್ವಿ

ಕಲಬುರಗಿ:ಸೆ.8: ಪರಿಸರ ಹಾಗೂ ವೈಚಾರಿಕತೆ ಪರ ಬರಹಗಳ ಮೂಲಕ ಅಸಂಖ್ಯಾತ ವ್ಯಕ್ತಿಗಳನ್ನು ಪ್ರಭಾವಿಸಿದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು, ನಾಡು-ನುಡಿ ಏಳಿಗೆಗೆ ತಮ್ಮದೇ ಆದ ವಿಶಿಷ್ಟ ಬರಹಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಅಲೆ ಸೃಷ್ಟಿಸಿದ ಮೇರು ಸಾಹಿತಿಯಾಗಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಹೇಳಿದರು.

ನಗರದ ಆಳಂದ ರಸ್ತೆಯ ಜೆ.ಆರ್. ನಗರದಲ್ಲಿರುವ ‘ಕೊಹಿನೂರ ಕಂಪ್ಯೂಟರ್ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಜರುಗಿದ ‘ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ 84ನೇ ಜನ್ಮದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತಿದ್ದರು.

ತೇಜಸ್ವಿಯವರು ನವ್ಯ ಸಾಹಿತ್ಯ ಉತ್ಕರ್ಷ ಸ್ಥಿತಿಯಲ್ಲಿದ್ದ ಕಾಲದಿಂದ ಬಂಡಾಯದ ಕಾಲಾವಧಿಯಲ್ಲಿ ಔಧ್ಯಮಿಕ ಆವಿಷ್ಕಾರ, ಪ್ರಗತಿಗಳ ಆಸ್ಪೋಟನೆಯ ಹಿನ್ನಲೆಯಲ್ಲಿ ಸಮಾಜದ ನಿರ್ವೀರ್ಯ ಮೌಲ್ಯಗಳ ಪರಿಸರದಲ್ಲಿ ಅನನ್ಯ ಸಾಹಿತ್ಯ ಕಲೆಗಾರರಾಗಿ ಬೆಳೆದರು. ಅವರು ರಚಿಸಿರುವ ಕೃತಿಗಳಲ್ಲಿ ಆಳ ಮತ್ತು ಸಂಕೀರ್ಣತೆಯನ್ನು ಕಾಣಬಹುದಾಗಿದೆ. ಮೂಢನಂಬಿಕೆಗಳು, ಶೋಷಣೆಗಳು, ಸಭ್ಯತೆ ಸೋಗಿನ ಬಗೆಗೆ ಬಂಡಾಯದ ಅಂಶಗಳನ್ನು ಅವರು ರಚಿಸಿದ ನಾಟಕ ಹಾಗೂ ಕಥಾ ಸಾಹಿತ್ಯ ಕೃತಿಗಳಲ್ಲಿ ಕಂಡುಬರುತ್ತವೆ ಎಂದರು.

ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗಣಮುಖಿ ಮಾತನಾಡುತ್ತಾ, ನಿಸರ್ಗ, ನಾಗರೀಕತೆ, ಮಾನವೀಯ ಮೌಲ್ಯಗಳು, ತತ್ವಜ್ಞಾನದ ಚಿಂತನೆಗಳುಳ್ಳ ತೇಜಸ್ವಿಯವರ ಬರಹಗಳ ಅಧ್ಯಯನ ಅಗತ್ಯವಾಗಿದೆ ಎಂದು ನುಡಿದರು.

ಪ್ರಮುಖರಾದ ಸತೀಶ ಟಿ.ಸಣಮನಿ, ದತ್ತು ಹಡಪದ, ರಾಹುಲ್, ಆದರ್ಶ, ಸಿದ್ದರಾಮ, ಪ್ರದೀಪ, ಪರಮಾನಂದ, ಶ್ರೀಶೈಲ್, ಅನಿತ್ ಸೇರಿದಂತೆ ಇನ್ನಿತರರು ಇದ್ದರು.