ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಯಾರೇ ಆದರೂ ಕನ್ನಡಿಗರ ಬದುಕು ಕಟ್ಟಿಕೊಡಲಿ: ತೆಗನೂರ ಮನವಿ

ಕಲಬುರಗಿ:ಎ.4: ಕೆಲವೇ ಸಮಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿದ್ದು , ಬಹುತೇಕ ಮಂದಿ ತಮ್ಮ ಪ್ರಣಾಳಿಕೆಯಲ್ಲಿ ಹಲವಾರು ವಿಚಾರಗಳನ್ನು ಮಂಡಿಸಲಿದ್ದಾರೆ. ಪ್ರತಿ ವರ್ಷ ಸಾಹಿತ್ಯ ಸಮ್ಮೇಳನ ಮಾಡುವುದು. ಒಂದಷ್ಟು ವಿಚಾರ ಸಂಕೀರ್ಣ ಮಾಡುವುದು, ದತ್ತಿ ಪ್ರಶ್ನಸ್ತಿಗಳನ್ನು ವಿತರಣೆ ಮಾಡುವುದು ಮಾಮೂಲಿಯಾಗಿರುತ್ತದೆ. ಇದನ್ನು ಹೊರತುಪಡಿಸಿ ಕನ್ನಡಿಗರ ಬದುಕನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಪ್ರಗತಿಪರವಾಗಿ ಅಲೋಚಿಸಬೇಕಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ( ಕನ್ನಡಿಗರ ಬಣ) ದ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ‌ಅನೇಕ ವರ್ಷಗಳಿಂದ ರಾಷ್ಟ್ರೀಯ ಉದ್ಯೋಗ ನೀತಿಗೆ ಬೇಡಿಕೆ ಇದೆ. ಅಧ್ಯಕ್ಷರಾದವರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ದೇಶದ ಎಲ್ಲಾ ಸಂಸತ್ ಸದಸ್ಯರಿಗೆ, ಮುಖ್ಯಮಂತ್ರಿಗಳಿಗೆ, ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷದ ಅಧ್ಯಕ್ಷರುಗಳಿಗೆ ಪತ್ರವನ್ನು ಬರೆದು ಸಿ ಮತ್ತು ಡಿ ದರ್ಜೆಯ ಹುದ್ದೆಗಳು ಆಯಾ‌ ರಾಜ್ಯದಲ್ಲಿ ಆಯಾ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದವರಿಗೆ ಮೀಸಲಿಡಬೇಕೆಂಬ ಕಾನೂನನ್ನು ಮಾಡುವಂತೆ ಒತ್ತಡ ಹೇರಬೇಕು ಎಂದು ಅವರು ಒತ್ತಾಯಿಸಿದ್ದಾರು. ಅನೇಕ ಪ್ರಾದೇಶಿಕ ಭಾಷೆಗಳು ಹಿಂದಿ ಮತ್ತು ಇಂಗ್ಲಿಷ್ ಅಬ್ಬರದ ಮುಂದೆ ಅಪಾಯದ ಅಂಚಿಗೆ ತಲುಪಿದೆ ಎಂದರು. ವಿಶೇಷವಾಗಿ ಶಿಕ್ಷಣ ಶಿಕ್ಷಣ ಮಾಧ್ಯಮದಲ್ಲಿ ಕನ್ನಡದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ರಾಷ್ಟ್ರಕವಿ ಹುದ್ದೆ ಯಾವುದೇ ಕಾರಣಕ್ಕೂ ಖಾಲಿ ಇರದಂತೆ ಸರಕಾರ ಜೊತೆ ಸಂಪರ್ಕವನ್ನು ಸಾಧಿಸಿ ತುಂಬಬೇಕು. ಅನೇಕ ಹಿರಿಯ ಸಾಹಿತಿಗಳು, ‌ಹೋರಾಟಗಾರರು, ಪತ್ರಕರ್ತರು, ಆರೋಗ್ಯ ಸಮಸ್ಯೆ ಆರ್ಥಿಕವಾಗಿ ತೊಂದರೆಯಲ್ಲಿರುತ್ತಾರೆ. ಇಂತಹವರ ಹಿತಕ್ಕಾಗಿ ಸಾಹಿತ್ಯ ಪರಿಷತ್ತಿನಲ್ಲಿ ವಿಶೇಷವಾದ ನಿಧಿಯನ್ನು ಸ್ಥಾಪಿಸಬೇಕು ಎಂದು ತಿಳಿಸಿದರು.ಭಾಷೆ ಮತ್ತು ಬದುಕಿನ ಬಗ್ಗೆ ಯಾವುದೇ ಸರಕಾರವಿರಲಿ , ಯಾವುದೇ ಪಕ್ಷದವರಾಗಲಿ, ಧರ್ಮದವಾಗಿರಲಿ, ಜಾತಿಯವರಾಗಿರಲಿ ಅಪಸ್ವರ ತೆಗೆದರೆ ಅದನ್ನು ಖಂಡಿಸುವ ನೈತಿಕತೆಯನ್ನು ಸಾಹಿತ್ಯ ಪರಿಷತ್ತ್ ಚುನಾವಣೆಯಲ್ಲಿ ಸ್ಪರ್ದಿಸುತ್ತಿರುವ ಅಭ್ಯರ್ಥಿಗಳು ಉಳಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.