ಕನ್ನಡ ಸಾಹಿತ್ಯದಿಂದ ಉತ್ತಮ ಸಮಾಜದ ನಿರ್ಮಾಣ ಸಾಧ್ಯ

(ಸಂಜೆವಾಣಿ ವಾರ್ತೆ)
ಹುಮನಾಬಾದ್ :ಮಾ.7:ಪ್ರಸ್ತುತ ದಿನಗಳಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದಿಂದ ಉತ್ತಮ ಸಮಾಜದ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಹೊಸಪೇಟೆಯ ಹಿರಿಯ ಸಾಹಿತಿ ಬಿ. ಪೀರ್ ಬಾಷ್ ಹೇಳಿದರು.
ಪಟ್ಟಣದ ಐತಿಹಾಸಿಕ ವೀರಭದ್ರೇಶ್ವರ ರಥ ಮೈದಾನದಲ್ಲಿ ಜಿಲ್ಲಾ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸೋಮವಾರ ಆಯೋಜಿಸಿದ್ದ 8ನೇ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶ್ರೀಮಂತ ಕನ್ನಡ ಭಾಷೆಗೆ ಶರಣರು ನೀಡಿರುವ ಕೊಡುಗೆ ಅಪಾರವಾಗಿದೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಕನ್ನಡ ಇಷ್ಟು ಶ್ರೀಮಂತಗೊಂಡಿದೆ ಎಂದರೆ 12ನೇ ಶತಮಾನದ ಶರಣರ ಹೋರಾಟವೇ ಮೂಲ ಕಾರಣ. ಬಸವಣ್ಣನವರ ಸಮಕಾಲಿನ ಶರಣರು ವಚನ ಸಾಹಿತ್ಯದ ಮೂಲಕ ಸಮಾಜ ಸುಧಾರಣೆ ಮಾಡಿದ್ದಾರೆ. ಜತೆಯಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗೆ ಶರಣರು ತಮ್ಮ ಪ್ರಾಣವನ್ನು ಮುಡಿಪಾಗಿಟ್ಟಿದ್ದರು ಎಂದು ತಿಳಿಸಿದರು.
ಸ್ವಯಂ ಘೋಷಿಸಿತ ದೇಶ ಪ್ರೇಮಿಗಳಿಂದ ದೇಶದ ಸಂಸ್ಕøತಿ ಹಾಳಾಗಿದೆ. ನಾಗರಿಕ ಜಗತ್ತಿನಲ್ಲಿ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸಿದ್ದ ಎಂ.ಎಂ. ಕಲಬುರ್ಗಿ, ಪತ್ರಕರ್ತರಾಗಿದ್ದ ಗೌರಿ ಲಂಕೇಶ್ ಅವರನ್ನು ಕೊಲೆ ಮಾಡಿದ್ದಾರೆ. ಹೀಗಾಗಿ ಇಂದಿನ ಯುವ ಯುವ ಸಾಹಿತಿಗಳು ಹಾಗೂ ಬರಹಗಾರರು ಸಮಾಜದ ಮೇಲೆ ಬೆಳಕು ಚೆಲ್ಲುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಹುಲಸೂರ ಸಂಸ್ಥಾನದ ಡಾ. ಶಿವಾನಂದ ಶಿವಾಚಾರ್ಯರು, ಹುಮನಾಬಾದ್ ಹಿರೇಮಠ ಸಂಸ್ಥಾನದ ರೇಣುಕವೀರ ಗಂಗಾಧರ ಶಿವಾಚಾರ್ಯರು, ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್, ಪುರಸಭೆ ಅಧ್ಯಕ್ಷೆ ನೀತು ಶರ್ಮಾ, ಪುರಸಭೆ ಸದಸ್ಯ ರಮೇಶ ಕಲ್ಲೂರ, ಪುರಸಭೆ ಸದಸ್ಯ ವಿಜಯಕುಮಾರ ದುರ್ಗದ್, ಕಸಾಪ ತಾಲೂಕ ಅಧ್ಯಕ್ಷ ಸಿದ್ದು ನಿರ್ಣಾ, ಮಾಣಿಕಪ್ಪ ಬಕ್ಕಣ, ರವೀಂದ್ರರೆಡ್ಡಿ ಮಾಲಿಪಾಟೀಲ್, ಎಸ್.ಎಸ್. ದೊಡ್ಡಮನಿ, ವಿಜಯಕುಮಾರ ಚಟ್ಟಿ, ನಿವೃತ್ತ ಪ್ರಾಚಾರ್ಯ ಉಪ್ಪಿನ್, ಅಂಬಿಕಾ ಚಳಕಾಪೂರೆ, ಸಂಗಮ್ಮ ಬಮ್ಮಣಿ, ಅಮಿತ ಚಿಂಚೋಳಿಕರ್, ಮನೋಜಕುಮಾರ ಸೀತಾಳೆ, ಲಕ್ಷ್ಮಿಕಾಂತ ಹಿಂದೊಡ್ಡಿ ಸೇರಿ ಅನೇಕರಿದ್ದರು.
ಕನ್ನಡ ಕಾರ್ಯಕ್ಕೆ ಸಹಕಾರ ಕನ್ನಡ ನಾಡು-ನುಡಿ ಉಳಿಸಿ ಬೆಳೆಸುವುದು ಈ ನೆಲದ
ಪ್ರತಿಯೊಬ್ಬರ ಆದ್ಯ ಕರ್ತವ್ಯ. ಎಲ್ಲರೂ ಸೇರಿ ಕನ್ನಡ ತಾಯಿ ತೇರು ಎಳೆಯೋಣ ಎಂದು ಅಧ್ಯಕ್ಷತೆ ವಹಿಸಿದ್ದ ಅವರು, ಕನ್ನಡದ ಜತೆಗೆ ಎಲ್ಲ ಭಾಷೆಗಳನ್ನು ತಿಳಿದುಕೊಳ್ಳಬೇಕು. ಆದರೆ ಮಾತೃಭಾಷೆ ಕನ್ನಡಕ್ಕೆ ಪ್ರಥಮಾದ್ಯತೆ ನೀಡಬೇಕು. ಶತ ಶತಮಾನಗಳಿಂದ ಕನ್ನಡ ಭಾಷೆ ತನ್ನದೇ ಆದ ಸಂಸ್ಕೃತಿ, ವೈಶಿಷ್ಟ್ಯವನ್ನು ಹೊಂದಿದೆ. ತಾಲೂಕಿನಲ್ಲಿ ನಿರಂತರ ಕಾರ್ಯ ಚಟುವಟಿಕೆಯಲ್ಲಿ ತೊಡಗಿರುವ ಕಸಾಪಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ ಎಂದರು.
ಸ್ವಾಗತ ಸಮಿತಿ ಅಧ್ಯಕ್ಷರಾದ ಶಾಸಕ ರಾಜಶೇಖರ ಪಾಟೀಲ್ ಹೇಳಿದರು.