ಕನ್ನಡ ಸಾಹಿತ್ಯಕ್ಕೆ ಜೈನ ಸಾಹಿತಿಗಳ ಕೊಡುಗೆ ಅಪಾರ

ಕಲಬುರಗಿ,ಏ.11: ಪ್ರಾಚೀನ ಕಾಲದಿಂದಲೂ ಕನ್ನಡ ಸಾಹಿತ್ಯಕ್ಕೆ ಜೈನ ಸಮುದಾಯದ ಸಾಹಿತಿಗಳು ನೀಡಿದ ಕೊಡುಗೆ ಅಪಾರವಾಗಿದ್ದು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಜೈನ ಸಾಹಿತ್ಯ ಕಾಣಬಹುದೆಂದು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ: ಬಸವರಾಜ ಪಿ.ಡೋಣೂರ ನುಡಿದರು.
ಕಲಬುರಗಿ ಜಿಲ್ಲಾ ಜೈನ ಯುವ ವೇದಿಕೆ ವತಿಯಿಂದ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ ಜೈನ ಧರ್ಮ ಮತ್ತು ವರ್ತಮಾನದ ತವಕ-ತಲ್ಲಣಗಳು ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಭಗವಾನ ಶ್ರೀ ಮಹಾವೀರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಸಂಪದ್ಭರಿತ ಮತ್ತು ಶ್ರೀಮಂತವಾಗಿರುವ ಹಿನ್ನೆಲೆಯಲ್ಲಿ ಆದಿಕಾಲದಿಂದಲೂ ಜೈನ ಸಾಹಿತಿಗಳು ಅತ್ಯಂತ ಶ್ರೇಷ್ಠವಾದ ಸಾಹಿತ್ಯವನ್ನು ಕಟ್ಟಿಕೊಟ್ಟಿದ್ದು ಎಂದಿಗೂ ಮರೆಯುವಂತಿಲ್ಲ ಎಂದು ಮಾರ್ಮಿಕವಾಗಿ ನುಡಿದ ಅವರು ಪಂಪ ಮಹಾಕವಿ ವಿಶ್ವದರ್ಜೆಯ ಶ್ರೇಷ್ಠವಾದ ಸಾಹಿತ್ಯ ನೀಡಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು. ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ 10 ಜನ ಸಾಹಿತಿಗಳ ಪಟ್ಟಿಯಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನ ನಮ್ಮ ನಾಡಿನ ಹೆಮ್ಮೆಯ ಪಂಪ ಮಹಾಕವಿಗೆ ಸಲ್ಲುತ್ತದೆ ಎಂದು ನುಡಿದ ಅವರು ಅಹಿಂಸೆ, ಪ್ರೇಮ ಈ ಧರ್ಮದ ಮೂಲ ಲಕ್ಷಣಗಳಾಗಿದ್ದು ಮನುಷ್ಯ ಜನಾಂಗದ ಉನ್ನತ ಬದುಕಿಗೆ ಆದರ್ಶ ಮೌಲ್ಯಗಳನ್ನು ತೀರ್ಥಂಕರರು ನೀಡಿದ್ದಾರೆ ಎಂದು ಹೇಳಿದರು.
ಇತಿಹಾಸದ ವೈಭವವನ್ನು ನೆನಪು ಮಾಡಿಕೊಂಡು ವರ್ತಮಾನದಲ್ಲಿ ಭವಿಷ್ಯ ರೂಪಿಸಿಕೊಂಡು ನಾಳಿನ ಸಮಾಜಕ್ಕಾಗಿ ನಾಡು ಕಟ್ಟಬೇಕಾಗಿದೆಂದು ನಾಡಿನ ಖ್ಯಾತ ಸಾಹಿತಿಗಳಾದ ಡಾ: ಬಾಳಾಸಾಹೇಬ ಲೋಕಾಪೂರ ನುಡಿದರು. ಭಗವಾನ್ ಶ್ರೀ ಮಹಾವೀರ ಪ್ರಶಸ್ತಿ ಸ್ವೀಕರಿಸಿ ಉಪನ್ಯಾಸ ನೀಡಿದ ಅವರು ಜೈನ ಸಮುದಾಯ ಎಲ್ಲರೂ ನನ್ನವರೆಂದು ಅಪ್ಪಿಕೊಂಡು, ಒಪ್ಪಿಕೊಂಡು ಮುನ್ನಡೆಯುವ ಸಮಾಜವಾಗಿದ್ದು ವರ್ತಮಾನದಲ್ಲಿ ಅನೇಕ ತವಕ-ತಲ್ಲಣಗಳನ್ನು ಎದುರಿಸುತ್ತಿದ್ದು ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ವ್ಯಕ್ತಿಗಳಿಗೆ ಪ್ರೋತ್ಸಾಹ ಮಾಡುವ ಮೂಲಕ ಸಮುದಾಯದವರು ಪರಸ್ಪರ ಕೈಗೂಡಿಸಿಕೊಂಡು ಬೆಳವಣಿಗೆ ಆಗುವಂತೆ ಕರೆ ನೀಡಿದರು.
ಜಗತ್ತಿನ ಅತ್ಯಂತ ಅವಶ್ಯಕತೆಗಳಲ್ಲಿ ನೆಮ್ಮದಿ, ಶಾಂತಿ ಕೂಡಾ ಅಗತ್ಯವಾಗಿ ಬೇಕಾಗುತ್ತಿದ್ದು ಈ ದಿಶೆಯಲ್ಲಿ ಪೂರ್ವದಿಂದಲೂ ಅಹಿಂಸೆಯ ಸಂದೇಶವನ್ನು ವಿಶ್ವಕ್ಕೆ ಸಾರಿದ ಜೈನ ಸಮುದಾಯ ಇಂದಿನ ಎಲ್ಲ ಕಲುಶಿತ ವಾತಾವರಣ ತಿಳಿಗೊಳಿಸಿ ಪ್ರಶಾಂತತೆಯ ಪರಿಸರ ನಿರ್ಮಿಸುವ ಶಕ್ತಿ ಜೈನ ಧರ್ಮದ ವಿಚಾರಗಳಿಗೆ ಇದೆ ಎಂದು ಹೇಳಿದರು.
ಸಮುದಾಯದ ಜನ ಸಂಘಟನೆಯಾಗುವ ಮೂಲಕ ಸರಕಾರದ ಯೋಜನೆಗಳನ್ನು ಪಡೆದುಕೊಳ್ಳುವುದು ಅಗತ್ಯವಾಗಿದ್ದು ಜೈನ ಧರ್ಮದ ಆಚಾರ ವಿಚಾರಗಳನ್ನು ಪಾಲಿಸಿಕೊಂಡು ವರ್ತಮಾನದಲ್ಲಿ ರಾಜಕೀಯದ ಕ್ಷೇತ್ರ ಪ್ರವೇಶಿಸುವುದು ಅತ್ಯಗತ್ಯವಾಗಿದ್ದು ಈ ದಿಶೆಯಲ್ಲಿ ರಾಜ್ಯದಲ್ಲಿ ಪ್ರತಿಭಾವಂತರನ್ನು ಗುರುತಿಸಿ ಶಕ್ತಿ ತುಂಬುವ ಕಾರ್ಯ ಜೈನ ಧರ್ಮದ ಮಠಗಳು ಮತ್ತು ಜೈನ ಬಾಂಧವರು ಮಾಡಬೇಕೆಂದು ಹೊಂಬುಜ ಜೈನ ಪೀಠದ ಜಗದ್ಗುರು ಸ್ವಸ್ತಿಶ್ರೀ ಡಾ: ದೇವೆಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಕರೆ ನೀಡಿದರು. ಇಂದು ಸಣ್ಣ ಸಣ್ಣ ಸಮುದಾಯಗಳು ಅಭಿವೃದ್ಧಿಗೊಳ್ಳುತ್ತಿದ್ದು ಜೈನ ಸಮುದಾಯ ಸಹ ಅಲ್ಪ ಸಮುದಯವಾಗಿದ್ದು ಆದರೆ ಸಮುದಾಯಕ್ಕೆ ರಾಜಕೀಯದ ಆಶ್ರಯ ಮತ್ತು ಸ್ಥಾನಮಾನ ಸಿಗದೇ ಇರುವುದು ನೋವಿನ ಸಂಗತಿಯಾಗಿದ್ದು ಈ ದಿಶೆಯಲ್ಲಿ ಆಲೋಚನೆ ಅತ್ಯಗತ್ಯವಾಗಿದೆ ಎಂದು ಹೇಳಿದರು.
ವೇದಿಕೆ ಮೇಲೆ ಜೈನ ಸೋಶಿಯಲ್ ಗ್ರೂಪ್ ಅಧ್ಯಕ್ಷರಾದ ಬ್ರಹ್ಮ ಜಗಶೆಟ್ಟಿ ಉಪಸ್ಥಿತರಿದ್ದರು. ವೇದಿಕೆ ಅಧ್ಯಕ್ಷ ಸುರೇಶ ತಂಗಾ ಸ್ವಾಗತಿಸಿದರು. ಶ್ರೀಮತಿ ರೇಖಾ ವಿನೋದ ಬಬಲಾದ ನಿರೂಪಿಸಿದರು. ನಾಗಲಿಂಗಯ್ಯ ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಅನೀಲ ಭಸ್ಮೆ ವಂದಿಸಿದರು. ಕಲಬುರಗಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.
ಸಮಾರಂಭದಲ್ಲಿ ಜೈನ ಸಮಾಜದ ಗಣ್ಯರು, ಹಿರಿಯರು, ಮಹಿಳೆಯರು, ಯುವಕರು, ವೇದಿಕೆಯ ಸಮಸ್ತ ಪದಾಧಿಕಾರಿಗಳು ಉಪಸ್ಥಿತರಿದ್ದರು.