ಕನ್ನಡ ಸಾಹಿತ್ಯಕ್ಕೆ ಚಿ.ನಾ.ಹಳ್ಳಿ ಸಾಹಿತಿಗಳ ಕೊಡುಗೆ ಅಪಾರ

ಹುಳಿಯಾರು, ಆ. ೩- ಭೌಗೋಳಿಕ ಹಾಗೂ ಪ್ರಾಕೃತಿಕ ವಿಭಿನ್ನತೆ ಸಾಹಿತ್ಯದಲ್ಲಿ ವೈವಿಧ್ಯತೆ ತಂದು ಕೊಡುತ್ತದೆ. ಕನ್ನಡ ಸಾಹಿತ್ಯಕ್ಕೆ ಎಡ, ಬಲ ಹಾಗೂ ಮಧ್ಯಮ ಚಿಂತನೆಯ ಬರಹಗಾರರು ತಮ್ಮ ಕೊಡುಗೆಯನ್ನು ನೀಡಿದ್ದಾರೆ ಮತ್ತು ನೀಡುತ್ತಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತುಮಕೂರು ಜಿಲ್ಲೆ ಅದರಲ್ಲೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಹಿತ್ಯ ಪರಂಪರೆ ಬಹಳ ದೊಡ್ಡದು ಎಂದು ಸಾಹಿತಿ ಗುರುಪ್ರಸಾದ್ ಕಂಟಲಗೆರೆ ಹೇಳಿದರು.
ಹುಳಿಯಾರು ಹೋಬಳಿ ಗುರುವಾಪುರದಲ್ಲಿ ನಡೆಯುತ್ತಿರುವ ಹುಳಿಯಾರು-ಕೆಂಕೆರೆ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಪರಿಸರ ಶ್ರೇಷ್ಠ ಸಾಹಿತಿಗಳು ಮತ್ತು ಅವರ ಕೃತಿಗಳನ್ನು ಪರಿಚಯಿಸಿದರು. ನಮ್ಮ ನಾಡಿನ ಶ್ರೇಷ್ಠ ಸಾಹಿತಿಗಳಾದ ತೀ.ನಂ. ಶ್ರೀಕಂಠಯ್ಯ ಅವರ ಕೃತಿ “ಭಾರತೀಯ ಕಾವ್ಯ ಮೀಮಾಂಸೆ” ಹಾಗೂ ಬರವಣಿಗೆಯ ಪ್ರಕಾರಗಳಿಂದ ಆರಂಭಿಸಿ, ಸಾ. ಶಿ. ಮರುಳಯ್ಯ, ಮಾಸ್ಟರ್ ಹಿರಣ್ಣಯ್ಯ ಹಾಗೂ ಈ ಪ್ರದೇಶದ ಹಿರಿಮೆಯನ್ನು ತಮ್ಮ ಕೃತಿಯ ರೂಪದಲ್ಲಿ ಪ್ರಚುರಪಡಿಸಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕುರಿತು ವಿವರಿಸಿದರು.
ಎಸ್. ಜಿ. ಸಿದ್ದರಾಮಯ್ಯ, ನಟರಾಜ್ ಹುಳಿಯಾರು, ಎಸ್ ಗಂಗಾಧರಯ್ಯ, ಆರ್ ಬಸವರಾಜ್ ಹಾಗೂ ಅವರ ಸಾಹಿತ್ಯದ ಕುರಿತು ಮಾತನಾಡಿದರು.
ಬಾಳೆಕಾಯಿ ಶಿವನಂಜಯ್ಯ, ಪ್ರೊ. ಕೃಷ್ಣಮೂರ್ತಿ ಬಿಳಿಗೆರೆ ಅವರ ಕೃಷಿ ಸಾಹಿತ್ಯದ ವಿಚಾರವಾಗಿ ಮಾತನಾಡಿದರು. ಅಷ್ಟೇ ಅಲ್ಲದೆ ಪ್ರಕಟಣೆಯಲ್ಲಿ ಮುಂಚೂಣಿಯಲ್ಲಿರುವ ’ಶೃಂಗಾರ ಪ್ರಕಾಶನ’ ಹಾಗೂ ಪ್ರಕಾಶಕರ ಕುರಿತು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗುರುವಾಪುರದ ಜಿ. ಎನ್. ದೇವರಾಜು ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪ್ರಜ್ಞೆ ಮುಂತಾದ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಸಹಕಾರಿ. ಇದು ಸೋದರತ್ವ ಭಾವನೆ, ಮಾತುಗಾರಿಕೆ ಹಾಗೂ ಸಭಾ ಕಂಪನ ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಪ್ರೊ. ಶಿವಯ್ಯ ಮಾತನಾಡಿ, ಶಿಬಿರಾಧಿಕಾರಿಗಳ ಜವಾಬ್ದಾರಿ ಬಹಳ ದೊಡ್ಡದು. ಶಿಬಿರದಲ್ಲಿ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜ್ಞಾನ ಪಡೆದುಕೊಳ್ಳಬೇಕು. ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಪರಿಸರದ ಕುರಿತು ಕಾಳಜಿ ವ್ಯಕ್ತಪಡಿಸಿ, ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಸಂಗೀತಾ ಪಿ. ಮಾತನಾಡಿ, ಇಂತಹ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಬಹಳಷ್ಟು ಓದಿನೊಂದಿಗೆ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ರಕ್ಷಿತ ಪ್ರಾರ್ಥಿಸಿದರು. ರಘು ಆರ್. ಸ್ವಾಗತಿಸಿದರು. ಶ್ರೀದೇವಿ ವಂದಿಸಿದರು. ಪುಷ್ಪ ಕೆ.ಯು. ಕಾರ್ಯಕ್ರಮದ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿ ಡಾ. ಮೋಹನ್‌ಕುಮಾರ್, ಸಹ ಶಿಬಿರಾಧಿಕಾರಿಗಳು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.