ಕನ್ನಡ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಪಾರ: ಎಂ.ಎಸ್.ದಿವಾಕರ್


ಸಂಜೆವಾಣಿ ವಾರ್ತೆ
ಹೊಸಪೇಟೆ ಡಿ1: ಕನ್ನಡ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹೊಸಪೇಟೆ ನಗರಸಭೆ ಸಹಯೋಗದಲ್ಲಿ ಗುರುವಾರ ನಗರದ ಕನಕದಾಸ ವೃತ್ತದಲ್ಲಿ ಆಯೋಜಿಸಲಾದ ದಾಸ ಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಕನಕದಾಸರು ಹೋರಾಟದ ಜೊತೆಗೆ ದೇವರಲ್ಲಿ ನಂಬಿಕೆ ಇಟ್ಟವರು. ಹಾಗಾಗಿ ಭಕ್ತಿ ಪಂಥದಲ್ಲಿ ಬಂದ ದಾಸ ಶ್ರೇಷ್ಠರು. ಒಂದು ಕಡೆ ಜಾತಿ ಪದ್ಧತಿಯನ್ನು ವಿರೋಧಿಸಿದರೆ, ಮತ್ತೊಂದು ಕಡೆ ದೇವರ ಬಗ್ಗೆ ಅಪಾರ ಭಕ್ತಿ ಇತ್ತು. ಯುದ್ಧದಲ್ಲಿ ಗಾಯಗೊಂಡ ಸಂದರ್ಭದಲ್ಲಿ ಅವರು ನಿರಂತರವಾಗಿ ದೇವರ ಸ್ಮರಣೆ ಮಾಡುತ್ತಿದ್ದರು. ಅಶ್ವಿನಿ ದೇವತೆಗಳ ಬಗ್ಗೆ ಕನಕದಾಸರು ತಿಳಿಸಿಕೊಟ್ಟಿದ್ದಾರೆ. ಉತ್ತಮ ಸಮಾಜಕ್ಕಾಗಿ ಕನಕದಾಸರು ಒಬ್ಬ ಸಾಮಾನ್ಯ ಮನುಷ್ಯರಾಗಿ, ತತ್ವಜ್ಞಾನಿಗಳಾಗಿ, ದಾರ್ಶನಿಕರಾಗಿ, ಕೀರ್ತನಕರಾರರಾಗಿ, ತಮ್ಮ ಸಂದೇಶಗಳನ್ನು ನೀಡಿದರು. ಪ್ರತಿಯೊಬ್ಬರಿಗೂ ಓದಲು ಅನುಕೂಲವಾಗಲು ಸರಳ ಕನ್ನಡ ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸಿ, ಕನ್ನಡ ಸಾಹಿತ್ಯವನ್ನು ಧೀಮಂತಗೊಳಿಸಿದ ಶ್ರೇಯಸ್ಸು ಕನಕದಾಸರಿಗೆ ಸಲ್ಲುತ್ತದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ.ಎಲ್ ಅವರು ಮಾತನಾಡಿ, ಕನಕದಾಸರು ವಿಶ್ವ ಮಾನವರು. ಪದ್ಯ, ಕೀರ್ತನೆಗಳನ್ನು ರಚಿಸುವುದರ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಶ್ರೇಷ್ಠ ದಾರ್ಶನಿಕರಾಗಿದ್ದಾರೆ. ಇಂತಹ ಮಹನೀಯರನ್ನು ಒಂದು ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸಬಾರದು. ಕನಕದಾಸರು ಎಲ್ಲರಿಗೂ ಆದರ್ಶವಾಗಿದ್ದಾರೆ ಎಂದು ಹೇಳಿದರು.
ಸಮಾಜಿಕ ಚಿಂತಕ ವೈ.ಎನ್. ಗೌಡರ್ ಅವರು ವಿಶೇಷ ಉಪನ್ಯಾಸ ನೀಡಿ, ಕನಕದಾಸರು ಕವಿ, ದಾರ್ಶನಿಕ ಅಷ್ಟೇ ಅಲ್ಲ ಭಕ್ತ, ಸಂತ, ಕಲಾವಿದ ಸಮಾಜ ಸುಧಾರಕ ಹೀಗೆ ಬಹುರೂಪಿಗಳಾಗಿದ್ದರು. ಕನಕದಾಸರ ಭಕ್ತಿಯನ್ನು ಕೇವಲ ದಂತಕಥೆಗಳ ಮೂಲಕ ನಂಬುವುದು ಸರಿಯಲ್ಲ. ಮೂಢ ನಂಬಿಕೆಯನ್ನು, ಕೆಟ್ಟ ಜಾತಿ ವ್ಯವಸ್ಥೆಯನ್ನು ವಿರೋಧಿಸಬೇಕು ಎನ್ನುವುದು ಅವರ ಕೀರ್ತನೆಗಳಲ್ಲಿ ಅಭಿವ್ಯಕ್ತವಾಗಿವೆ ಎಂದು ವಿವರವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಸಮಾಜದ ಮುಖಂಡರು ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.

One attachment • Scanned by Gmail