ಕನ್ನಡ ಸಂಸ್ಕೃತಿ, ಪರಂಪರೆ ಉಳಿಸಲು ಕರೆ

ಚಿಕ್ಕನಾಯಕನಹಳ್ಳಿ, ನ. ೪- ಕನ್ನಡ ಸಂಸ್ಕೃತಿಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಲು ಮಕ್ಕಳನ್ನು ಕನ್ನಡ ಮಾಧ್ಯಮದಿಂದ ದೂರ ಮಾಡಬಾರದು ಎಂದು ಕುಪ್ಪೂರು ಗದ್ದಿಗೆ ಮಠಾಧ್ಯಕ್ಷರಾದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಕನ್ನಡ ಸಂಘದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರಿಗೆ ನುಡಿ ನಮನ ಎಸ್.ಪಿ.ಬಿ ಗಾನಸುಧೆ ಮತ್ತು ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನ ಹಾಗೂ ಕನ್ನಡ ಸಂಘದ ಸದಸ್ಯ ದಿ. ಸಿ.ಎಸ್. ನಟರಾಜುರವರ ಪುಣ್ಯಸ್ಮರಣಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಾತೃಭಾಷೆಯಾದ ಕನ್ನಡವು ಶ್ರೇಷ್ಠತೆಯನ್ನು ಹೊಂದಿದೆ. ನಾಡಿನಲ್ಲಿ ಕಲೆ ಸಾಹಿತ್ಯ ಸಂಸ್ಕೃತಿ, ಆಧ್ಯಾತ್ಮ ಹಾಗೂ ವಚನಕಾರ ಶರಣ ಸಾಹಿತ್ಯಗಳು ಕನ್ನಡದಲ್ಲೇ ಹೊರಹೊಮ್ಮಿ ಜಗತ್ತಿನಲ್ಲಿ ಮೆರೆದಿದೆ ಎಂದರು.
ಸಮಾಜದಲ್ಲಿ ಉನ್ನತ ಉದ್ಯೋಗಕ್ಕೋಸ್ಕರವಾಗಿ ಇಂಗ್ಲೀಷ್ ವ್ಯಾಮೋಹಕ್ಕೆ ಜನರು ಮಾರು ಹೋಗುತ್ತಿದ್ದಾರೆ. ಗ್ರಾಮೀಣ ಭಾಗವನ್ನು ಹೊರತುಪಡಿಸಿ ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಮಾತೃ ಭಾಷೆಯ ಬಳಕೆಯು ಕಡಿಮೆಯಾಗುತ್ತಿದೆ. ಜತೆಗೆ ಈಗಿನ ಪೀಳಿಗೆಯಲ್ಲೇ ಕನ್ನಡ ಮಾಧ್ಯಮ ಶಿಕ್ಷಣದ ಮೇಲೆ ಪರಿಣಾಮ ಶುರುವಾಗಿದೆ. ಮಕ್ಕಳು ಪ್ರಾಪಂಚಿಕ ಜ್ಞಾನಕ್ಕೋಸ್ಕರ ಯಾವ ಭಾಷೆಯನ್ನು ಕಲಿಯಲಿ. ಆದರೆ ಕನ್ನಡವನ್ನು ಮರೆಯಬಾರದು. ಈ ನಿಟ್ಟಿನಲ್ಲಿ ಪ್ರತಿ ವರ್ಷ ಕನ್ನಡ ಸಂಘದ ಮೂಲಕ ಕುಪ್ಪೂರು ಮಠದಿಂದ ಎಸ್.ಎಸ್.ಎಲ್.ಸಿ. ಪರೀಕ್ಷೇಯಲ್ಲಿ ಕನ್ನಡ ಭಾಷೆಯಲ್ಲಿ ಅತಿಹೆಚ್ಚು ಅಂಕ ಪಡೆಯುವ ತಾಲ್ಲೂಕಿನ ೧೧ ಜನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ ಸನ್ಮಾನಿಸಲಾಗುವುದು ಎಂದರು.
ಮಾಮರವೆಲ್ಲೋ ಕೋಗಿಲೆ ಎಲ್ಲೊ ಎನ್ನುವ ಹಾಗೆ ಎಸ್.ಬಿ.ಬಾಲಸುಬ್ರಹ್ಮಣ್ಯಂರವರು ಆಂಧ್ರದಲ್ಲಿ ಜನಿಸಿದ್ದರೂ ವಿವಿಧ ಭಾಷೆಗಳಲ್ಲಿ ಹಾಡಿದ್ದರೂ ಕನ್ನಡ ಭಾಷೆಗೆ ವಿಶೇಷ ಸ್ಥಾನ ಮತ್ತು ಮೌಲ್ಯವನ್ನು ನೀಡಿ ಭಕ್ತಿಗೀತೆಗಳು ಚಲನಚಿತ್ರ ಗೀತೆಗಳು ಮತ್ತು ಎಲ್ಲ ಸಿನಿಮಾ ನಟರುಗಳಿಗೆ ಹಿನ್ನೆಲೆ ಗಾಯಕರಾಗಿ ಕನ್ನಡದ ಹಾಡುಗಳನ್ನು ಹಾಡಿ ಅಪಾರವಾದ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅಂತಹ ಮಹಾ ಪುರಷರಿಗೆ ಕನ್ನಡ ನಾಡಿನಲ್ಲಿ ನುಡಿ ನಮನ ಸಲ್ಲಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಭಗವಂತ ಕರುಣಿಸಲಿ ಎಂದರು.
ಸಿ.ಎಸ್.ನಟರಾಜುರವರು ಇತ್ತೀಚಿಗೆ ಅಕಾಲಿಕ ಮರಣಕ್ಕೆ ತುತ್ತಾಗಿದ್ದು, ಮನಸ್ಸಿಗೆ ನೋವುಂಟಾಗಿದೆ. ಅವರ ಆತ್ಮಕ್ಕೆ ಶ್ರೀ ಗುರುಮರುಳಸಿದ್ದರು ಶಾಂತಿಯನ್ನು ಕರುಣಿಸಲಿ ಎಂದರು.
ಕನ್ನಡ ಸಂಘದ ಸದಸ್ಯರಾಗಿ ಹಾಗೂ ವಿವಿಧ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ದಿ. ಸಿ.ಎಸ್.ಎನ್. ಅವರು ಮಡಿವಾಳ ಸಮುದಾಯದವರಾದರು ಕುಪ್ಪೂರು ಗದ್ದಿಗೆ ಮಠದಲ್ಲಿ ಒಡನಾಡಿಯಾಗಿದ್ದರು. ಜನಸಾಮಾನ್ಯರಲ್ಲಿ ಬೆರೆತು ಸಮಾಜ ಸೇವೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದರು ಎಂದು ಸ್ಮರಿಸಿಕೊಂಡರು.
ಕನ್ನಡ ಸಂಘದ ಅಧ್ಯಕ್ಷ ಸಿ.ಬಿ. ರೇಣುಕಸ್ವಾಮಿ ಮಾತನಾಡಿ, ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಕೊರೊನಾ ಮಹಾಮಾರಿಯು ಅಡ್ಡಿಯುಂಟು ಮಾಡಿದ ಕೋವಿಡ್-೧೯ ನೀತಿ ನಿಯಮಗಳನ್ನು ಕನ್ನಡ ಸಂಘವು ಪಾಲಿಸಿ ಸರಳ ರೀತಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದೆ ಎಂದರು.
ಕೊರೊನಾ ವೈರಸನ್ನು ತಡೆಗಟ್ಟಲು ಜನರು ಜಾಗೃತಿಯಿಂದ ಇರಬೇಕು. ಆರೋಗ್ಯ ಇಲಾಖೆಯು ಕೋವಿಡ್ ಪರೀಕ್ಷೆ ಮಾಡಲು ಪ್ರದೇಶ ವಾರುಗಳಲ್ಲಿ ಸಂಚಾರ ಮಾಡುತ್ತಿದೆ. ಜನರು ತಪ್ಪದೆ ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಲು ಹಿಂಜರಿಯಬಾರದು ಎಂದು ಜನರಲ್ಲಿ ಆತ್ಮಸ್ಥೈರ್ಯ ತುಂಬಿದರು.
ಕಸಾಪ ತಾಲ್ಲೂಕು ಅಧ್ಯಕ್ಷೆ ಎಂ.ಇಂದಿರಮ್ಮ, ಕಸಾಪ ನಿಕಟ ಪೂರ್ವ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸ್ಥಳಿಯ ಗಾಯಕರಾದ ಹಾರ್ಮೋನಿಯಂ ಗಂಗಾಧರ್, ಎಂ.ಸಿ.ಕಲ್ಲೇಶ್, ಮಹಾಲಿಂಗಯ್ಯ, ಲೋಕೇಶ್, ಕೊರೊನಾ ವಾರಿಯರ್ಸ್‌ಗಳಾದ ಆರೋಗ್ಯ ಇಲಾಖೆಯ ವಿಶಾಲಾಕ್ಷಮ್ಮ, ಮರುಳಸಿದ್ದನಗೌಡ, ಮುರುಳಿ, ಪೌರ ಕಾರ್ಮಿಕರಾದ ದುರ್ಗಮ್ಮ, ಮುನಿಕುಮಾರ್ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜೆ.ಕೃಷ್ಣೇಗೌಡ, ಪದಾಧಿಕಾರಿಗಳಾದ ಖಲಂದರ್, ಲ್ಯಾಂಡ್ರಿ ಚಂದ್ರು, ಮೈಕ್ ರಾಜು, ಕುಂಚಾಕುರ ಗಂಗಾಧರ್, ಎಲೆಕ್ಟ್ರಿಕಲ್ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.
ಸೀಮೆಎಣ್ಣೆ ವಿನಯ್ ಸ್ವಾಗತಿಸಿದರು. ಸಿ.ಹೆಚ್.ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.