ಕನ್ನಡ ಸಂಪದ್ಭರಿತ ಭಾಷೆ

ಚಿಕ್ಕನಾಯಕನಹಳ್ಳಿ, ನ. ೩- ಕನ್ನಡ ಭಾಷೆಗೆ ಸುಮಾರು ೨ ಸಾವಿರ ವರ್ಷಗಳ ಇತಿಹಾಸವಿದ್ದು ಐತಿಹಾಸಿಕ, ಸಾಹಿತ್ಯಿಕ, ಸಾಂಸ್ಕೃತಿಕ ಭವ್ಯ ಪರಂಪರೆಯನ್ನು ಹೊಂದಿರುವ ಸಂಪದ್ಬರಿತ ಭಾಷೆ ಇದಾಗಿದ್ದು, ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಕರ್ನಾಟಕ ಎಂದು ನಾಮಕರಣ ಮಾಡಿದ ದಿನವನ್ನು ನಾವು ನಮ್ಮ ರಾಜ್ಯೋತ್ಸವವನ್ನಾಗಿ ಆಚರಿಸುತ್ತಿದ್ದೇವೆ ಎಂದು ತಹಶೀಲ್ದಾರ್ ತೇಜಸ್ವಿನಿ ಹೇಳಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ೬೫ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜ ಹಾಗೂ ನಾಡಧ್ವಜ ನೆರವೇರಿಸಿ ಅವರು ಮಾತನಾಡಿದರು.
ಹೆಚ್ಚು ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಸೇರಿಸಿ ೧೯೫೬ರ ನವೆಂಬರ್ ೧ ರಂದು ಮೈಸೂರು ರಾಜ್ಯವೆಂದು ನಾಮಕರಣ ಮಾಡಲಾಗಿತ್ತು. ನಂತರ ೧೯೭೩ರ ನವೆಂಬರ್ ೧ ರಂದು ಮುಖ್ಯಮಂತ್ರಿ ದೇವರಾಜ ಅರಸು ರವರು ಇದಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದರು. ಅಂದಿನಿಂದ ಈ ರಾಜ್ಯೋತ್ಸವವನ್ನು ಆಚರಿಸುತ್ತಿದ್ದು, ಕಳೆದ ಏಳೆಂಟು ತಿಂಗಳಿಂದ ಕೋವಿಡ್-೧೯ ಎಂಬ ಸಾಂಕ್ರಾಮಿಕ ರೋಗ ನಮ್ಮನ್ನು ಕಾಡುತ್ತಿದ್ದು, ಈ ಬಾರಿಯ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.
ಕನ್ನಡನಾಡು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅನೇಕ ಚರ್ಚೆ, ಮಂಥನ, ಸಮಾಲೋಚನೆಗಳು ನಡೆಯಬೇಕಿದೆ. ಅದರಲ್ಲೂ ಇಂದು ಈ ಕೊರೊನಾ ಎದುರಿಸುವಲ್ಲಿ ನಾವೆಲ್ಲರೂ ಸರ್ಕಾರದ ಸಲಹೆ-ಸೂಚನೆಗಳನ್ನು ಪಾಲಿಸಬೇಕಾಗಿದ್ದು, ನಮ್ಮ ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡುವುದು ಸಾಧ್ಯವಾದಷ್ಟು ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್‍ನ್ನು ಬಳಸುವುದು, ಜತೆಗೆ ರೋಗ ನಿಯಂತ್ರಣಕ್ಕೆ ಶ್ರಮಿಸುತ್ತಿರುವಂತಹ ಕೊರೊನಾ ವಾರಿಯರ್ಸ್‌ಗೆ ಸಹಕಾರ ನೀಡುವುದು, ನಾವೆಲ್ಲರೂ ಜವಾಬ್ದಾರಿಯಿಂದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಈ ರೋಗವನ್ನು ತಡೆಗಟ್ಟಬಹುದಾಗಿದೆ ಎಂದರು.
ತಾಲ್ಲೂಕು ಕಸಾಪ ಅಧ್ಯಕ್ಷೆ ಎನ್. ಇಂದಿರಮ್ಮ ಮಾತನಾಡಿ, ಇಂದು ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿದ್ದು, ಅನ್ಯಭಾಷೆಗಳ ವ್ಯಾಮೋಹ ಹೆಚ್ಚಾಗುತ್ತಿದೆ. ಬೆಂಗಳೂರಿನಂತಹ ನಗರಗಳಲ್ಲಿ ಕನ್ನಡವೇ ಅಪರೂಪವಾಗಿದೆ. ನಮ್ಮ ಮಕ್ಕಳ ಬಾಯಲ್ಲಿ ನಾವು ಕನ್ನಡ ಭಾಷೆಯನ್ನು ಕೇಳದೆ ಇಂಗ್ಲೀಷ್‌ಗೆ ಆದ್ಯತೆ ನೀಡುತ್ತಿದ್ದೇವೆ.
ಆದ್ದರಿಂದ ನಮ್ಮ ಭಾಷೆಯನ್ನು ಉಳಿಸಬೇಕಾದರೆ ನಾವು ಮಕ್ಕಳಲ್ಲಿ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭಾ ಮುಖ್ಯಾಧಿಕಾರಿ ಶ್ರೀನಿವಾಸ್, ಕನ್ನಡ ಸಂಘದ ಅಧ್ಯಕ್ಷ ಸಿ.ಬಿ. ರೇಣುಕಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಜಿ. ಕೃಷ್ಣೇಗೌಡ, ನಿರ್ದೇಶಕ ಸಿ.ಹೆಚ್. ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.