ಕನ್ನಡ ಸಂಪದ್ಭರಿತ ಭಾಷೆ

ಅರಸೀಕೆರೆ, ನ. ೫- ಕನ್ನಡ ಭಾಷೆ ಐತಿಹಾಸಿಕ, ಸಾಹಿತ್ಯಿಕ, ಸಾಂಸ್ಕೃತಿಕ ಭವ್ಯ ಪರಂಪರೆಯನ್ನು ಹೊಂದಿರುವ ಸಂಪದ್ಭರಿತ ಭಾಷೆ ಕನ್ನಡ ಸೇರಿ ಪ್ರಾದೇಶಿಕ ಭಾಷೆಗಳ ಮೇಲೆ ದಬ್ಬಾಳಿಕೆಯಿಂದ ಹಿಂದಿ ಹೇರುವ ಪ್ರಯತ್ನ ಎಂದೂ ಸಹಿಸುವುದಿಲ್ಲ ಎಂದು ಕರವೇ ತಾಲ್ಲೂಕು ಅಧ್ಯಕ್ಷ ಹೇಮಂತ್‌ಕುಮಾರ್ ಹೇಳಿದರು.
ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಕರವೇ ಘಟಕದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹೆಚ್ಚು ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಸೇರಿಸಿ ೧೯೫೬ ರ ನವೆಂಬರ್ ೧ ರಂದು ಮೈಸೂರು ರಾಜ್ಯವೆಂದು ನಾಮಕರಣ ಮಾಡಲಾಗಿತ್ತು. ನಂತರ ೧೯೭೩ ರ ನವೆಂಬರ್ ೧ರಂದು ಮುಖ್ಯಮಂತ್ರಿ ದೇವರಾಜ ಅರಸುರವರು ಇದಕ್ಕೆ ಕರ್ನಾಟಕ ಎಂದು ಮರು ನಾಮಕರಣ ಮಾಡಿದರು ಅಂದಿನಿಂದ ಈ ರಾಜ್ಯೋತ್ಸವನ್ನು ಆಚರಿಸುತ್ತಿದ್ದು ಕಳೆದ ಏಳೆಂಟು ತಿಂಗಳಿಂದ ಕೊರೊನಾ ಎಂಬ ಮಹಾಮಾರಿ ಸಾಂಕ್ರಾಮಿಕ ರೋಗ ನಮ್ಮನ್ನು ಕಾಡುತ್ತಿದ್ದು ಈ ಬಾರಿಯ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ನಗರಾಧ್ಯಕ್ಷ ಕಿರಣ್‌ಕುಮಾರ್ ಮಾತನಾಡಿ, ಕನ್ನಡನಾಡು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅನೇಕ ಚರ್ಚೆ ಮಂಥನ ಸಮಾಲೋಚನೆಗಳು ನಡೆಯಬೇಕಿದೆ. ಇಂದು ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿದ್ದು ಅನ್ಯಭಾಷೆಗಳ ವ್ಯಾಮೋಹ ಹೆಚ್ಚಾಗುತ್ತಿದೆ.
ಬೆಂಗಳೂರಿನಂತಹ ನಗರಗಳಲ್ಲಿ ಕನ್ನಡವೇ ಅಪರೂಪವಾಗಿದೆ. ನಮ್ಮ ಮಕ್ಕಳ ಬಾಯಲ್ಲಿ ನಾವು ಕನ್ನಡ ಭಾಷೆಯನ್ನು ಕೇಳದೆ ಇಂಗ್ಲೀಷ್ ಭಾಷೆಗೆ ಆದ್ಯತೆ ನೀಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ರುಕ್ಮಿಣಿ ಜಯಕುಮಾರ್,ತಾಲ್ಲೂಕು ರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಲಕ್ಷ್ಮೀಶ್, ಕಾರ್ಯದರ್ಶಿ ರವಿಶಂಕರ್ ಮುಖಂಡರಾದ ಲೋಕೇಶ್, ರಾಘವೇಂದ್ರ, ದಿಲೀಪ್‌ಕುಮಾರ್, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಕಮಲಮ್ಮ ಮತ್ತಿತರರು ಪಾಲ್ಗೊಂಡಿದ್ದರು.