ಕನ್ನಡ ಶಾಲೆಗಳ ವಿಲೀನಕ್ಕೆ ತೀವ್ರ ವಿರೋಧ

ವಿಜಯಪುರ, ಜು.23-ರಾಜ್ಯ ಸರಕಾರ ಮಾದರಿ ಶಾಲೆಗಳ ಹೆಸರಿನಲ್ಲಿ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ವಿಲೀನಕ್ಕೆ ಮುಂದಾಗಿರುವದನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾಗಿ ವಿರೋಧಿಸಿದೆ.
ಇದು ಕನ್ನಡಕ್ಕೆ ಮಾಡುವ ಘೋರ ಅನ್ಯಾಯ ಅಲ್ಲದೆ ಕನ್ನಡದ ಅಸ್ಮಿತೆಗೆ ಧಕ್ಕೆ ತರುವ ಕಾರ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕನ್ನಡ ಉಳಿಸಿಕೊಳ್ಳುವ ಕಾರ್ಯ ಆಗಬೇಕಿದ್ದು ಕಡ್ಡಾಯವಾಗಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ನಮಗಿದೆ. ಅಲ್ಲದೇ ಕನ್ನಡ ಶಾಲೆಗಳಿಗೆ ಮಕ್ಕಳ ಸಂಖ್ಯೆ ಕಡಿಮೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರ ಮತ್ತು ನಾಗರಿಕ ಸಮಾಜಕ್ಕೆ ಬೇಕಿದೆ. ಮಕ್ಕಳು ಇಲ್ಲವೆಂಬ ನೆಪವೊಡ್ಡಿ ಶಾಲೆಗಳ ವಿಲೀನ ಕ್ರಮ ಸರಿ ಅಲ್ಲ. ಇದರಿಂದ ಕನ್ನಡ ಶಾಲೆಗಳ ಭವಿಷ್ಯ ಹಾಳಾಗದಂತೆ ಸರಕಾರ ನೋಡಿಕೊಳ್ಳಬೇಕು. ಶಾಲೆಗಳ ವಿಲೀನಕರಣದಿಂದ ಸಾವಿರಾರು ಹುದ್ದೆಗಳು ಕಡಿಮೆಯಾಗಿ ನಿರುದ್ಯೋಗಕ್ಕೆ ಕಾರಣವಾಗುತ್ತದೆ. ಆದ್ದರಿಂದ ಕನ್ನಡ ಶಾಲೆಗಲನ್ನು ಉಳಿಸಿಕೊಳ್ಳುವ ಹಾಗೂ ಅಭಿವೃದ್ದಿ ಪಡಿಸುವ ಕಡೆಗೆ ಸರಕಾರ ಎಚ್ಚರಿಕೆ ವಹಿಸಬೇಕೆ ಹೊರತು ಕನ್ನಡ ಶಾಲೆಗಳನ್ನು ವಿಲೀನಕರಣಗೊಳಿಸಿ ಕನ್ನಡದ ಕಗ್ಗೊಲೆ ಮಾಡುವ ಸರಕಾರ ಕ್ರಮಕ್ಕೆ ತೀವ್ರ ಕಳವಳ ವ್ಯಕ್ತಿಸಿದ್ದಾರೆ. ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಡಾ. ಮಹೇಶ ಜೋಶಿ ಅವರ ನೇತೃತ್ವದಲ್ಲಿ ಕನ್ನಡ ಉಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡ ಸಾಹಿತ್ಯ ಪರಿಷತ್ತು ಹೋರಾಟ ಮಾಡಲಿದೆ ಎಂದರು.