ಕನ್ನಡ ಶಾಲೆಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚಿಸಬೇಕು

ಚಿತ್ರದುರ್ಗ. ನ.೬;  ಕನ್ನಡ ರಾಜ್ಯೋತ್ಸವದ ಅಂಗವಾಗಿ ಗ್ರಾಮೀಣ ಪ್ರದೇಶದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿಯ ಬಗ್ಗೆ ಜನರು ಸಹಕಾರ ನೀಡಬೇಕು. ಅಲ್ಲಿರುವ ಮಕ್ಕಳಿಗೆ ಉತ್ತಮ ಸೌಕರ್ಯಗಳನ್ನ ಕಲ್ಪಿಸಲು ಸಿರಿವಂತರು ಸಹಾಯ ಹಸ್ತ ಚಾಚಬೇಕು. ಮೂಲ ಸೌಲಭ್ಯದ ಕೊರತೆ ಇಲ್ಲದಂತೆ ನೋಡಿಕೊಂಡು ಸಾಂಸ್ಕೃತಿಕ ಕೇಂದ್ರಗಳನ್ನಾಗಿಸಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷರಾದ ಡಾಕ್ಟರ್ ಎಚ್. ಕೆ. ಎಸ್. ಸ್ವಾಮಿ ತಿಳಿಸಿದರು.ಅವರು ನಗರದ ಬಳಿ ಇರುವ ಗುಡ್ಡದರಂಗವ್ವನ ಹಳ್ಳಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಮತ್ತು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿದ್ದ “ಕನ್ನಡ ಶಾಲೆಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು” ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಮುಂದಿನ ರಾಷ್ಟçದ ಭವಿಷ್ಯ ಮಕ್ಕಳ ಶಿಕ್ಷಣದ ಮೇಲೆ ಅವಲಂಬಿತವಾಗಿದೆ. ಶಿಕ್ಷಣದಲ್ಲಿ ಹಣದ ಕೊರತೆಯನ್ನು ನೀಗಿಸುವ ಮಟ್ಟಿಗೆ ಸರ್ಕಾರಗಳು ಯೋಜನೆಗಳನ್ನು ರೂಪಿಸಿಕೊಳ್ಳಬೇಕು, ಶಾಲೆಗಳಲ್ಲಿ ಕೊಠಡಿಗಳ ಕೊರತೆ, ಶಿಕ್ಷಕರ ಕೊರತೆ, ಕಲಿಕಾ ಸಾಮಗ್ರಿಗಳ ಕೊರತೆ, ಗ್ರಂಥಾಲಯದ ಸಮಸ್ಯೆ, ಆಟದ ಮೈದಾನದ ಸಮಸ್ಯೆ ಇಲ್ಲದಂತೆ ನೋಡಿಕೊಳ್ಳಬೇಕು, ಸಮಸ್ಯೆಗಳಿದ್ದರೆ. ಅವುಗಳ ನಿವಾರಣೆಗೆ ಪ್ರಯತ್ನವಾಗಬೇಕು ಎಂದರು.ಮಕ್ಕಳಿಗೆ ಸೃಜನಾತ್ಮಕ ಕಲೆಗಳನ್ನು ಹೆಚ್ಚಿಸಲು ಗಾಯನ, ಹಾಡುಗಾರಿಕೆ, ಸಂಗೀತ, ನೃತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನ ಪ್ರೋತ್ಸಾಹಿಸಬೇಕು. ನಮ್ಮ ರಾಜ್ಯದಲ್ಲಿ ಏಕ ಶಿಕ್ಷಕರಿರುವ ಸಾಕಷ್ಟು ಕನ್ನಡ ಶಾಲೆಗಳಿವೆ. ಶೀಘ್ರವಾಗಿ ಅಂತಹ ಕಡೆ ಶಿಕ್ಷಕರ ನೇಮಕ ಮಾಡಿ ಕನ್ನಡ ಮಾಧ್ಯಮ ಮಕ್ಕಳ ಉತ್ತಮ ಭವಿಷ್ಯವನ್ನು ರೂಪಿಸಬೇಕು. ಗ್ರಾಮೀಣ ಮಟ್ಟದಲ್ಲಿ ಮಕ್ಕಳಲ್ಲಿ ಶೈಕ್ಷಣಿಕ ಬದಲಾವಣೆ ತರಲು ಸಾಕಷ್ಟು ಪ್ರಯತ್ನಗಳಾಗಬೇಕು ಎಂದರು.ಕನ್ನಡ ಶಾಲೆಗಳ ಬಗ್ಗೆ ಹೆಚ್ಚಿನ ಗಮನ ಹರಿಸದೆ ನಾವು ಕನ್ನಡ ಉಳಿಸಲಾರೆವು. ಮುಂದಿನ ರಾಷ್ಟçದ ಭವಿಷ್ಯ ಮಕ್ಕಳ ಶಿಕ್ಷಣದ ಮೇಲೆ ಅವಲಂಬಿತವಾಗಿದೆ. ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ದೀಪದ ವ್ಯವಸ್ಥೆ, ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಿಕೊಟ್ಟರೆ ಮಕ್ಕಳು ಗ್ರಾಮದಲ್ಲೆ ತಮ್ಮ ಶಿಕ್ಷಣವನ್ನ ಪೂರ್ಣಗೊಳಿಸುತ್ತಾರೆ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ, ಅವರನ್ನ ಆತ್ಮವಿಶ್ವಾಸಕ್ಕೆ ತೆಗೆದುಕೊಂಡರೆ ಅವರಿಂದ ಅತ್ಯುತ್ತಮ ಕೆಲಸವಾಗುತ್ತದೆ ಎಂದರು.ಶಿಕ್ಷಕರಾದ ಚನ್ನಕೇಶವಮೂರ್ತಿ ಮಾತನಾಡುತ್ತಾ ಶಾಲೆಗಳೆಂದರೆ ಬರೀ 4 ಗೋಡೆಗಳ ಮಧ್ಯೆ ಕುಳಿತು ಶಿಕ್ಷಣ ಪಡೆಯುವುದಷ್ಟೇ ಅಲ್ಲ, ಹೊರಗಿನ ಪ್ರಪಂಚದ ಪರಿಚಯವಾಗಬೇಕು. ಸಮಾಜದಲ್ಲೂ ಸಹ ಮಕ್ಕಳನ್ನ ಗುರುತಿಸಿ ಅವರಿಗೆ ಬದುಕಿನ ಶಿಕ್ಷಣವನ್ನು ನೀಡಬೇಕಾಗಿದೆ. ಮಕ್ಕಳ ಬದುಕಿಗೆ ಹತ್ತಿರವಾದ ಹಾಡು, ನೃತ್ಯ, ಸಾಹಿತ್ಯ ಕಲಿಸಿಕೊಟ್ಟು ಅವರನ್ನ ಸ್ವಂತ ಕಾಲಮೇಲೆ ನಿಲ್ಲುವಂತೆ ಮಾಡಬೇಕಾಗಿದೆ ಎಂದರು.ಕಾರ್ಯಕ್ರಮದಲ್ಲಿ ರೊರ‍್ಯಾಕ್ಟ್ ಎಚ್. ಎಸ್. ರಚನ ಮತ್ತು ಎಚ್. ಎಸ್. ಪ್ರೇರಣಾ ಕನ್ನಡ ಗೀತೆಗಳನ್ನ, ಕುವೆಂಪು ರಚಿತ ಗೀತೆಗಳನ್ನ ಹಾಡಿದರು ಹಾಗೂ ಮಕ್ಕಳಿಗೆ ಕೋಲಾಟವನ್ನ ಸಹ ಹೇಳಿಕೊಟ್ಟರು.ಕಾರ್ಯಕ್ರಮದಲ್ಲಿ ಮು.ಶಿ. ಕೆ. ಟಿ. ನೇತ್ರಾವತಿ, ಶಿಕ್ಷಕರಾದ ಉಮಾ, ನಿರ್ಮಲ, ಆರ್ ಎಂ. ಗಿರಿಜಮ್ಮ, ಶ್ರೀಮತಿ ಸುಮ ಕೆಂಚರೆಡ್ಡಿ, ಕಲ್ಪವೃಕ್ಷ ಚಾರಿಟೇಬಲ್ ಟ್ರಸ್ಟ್ನ ವೇಣುಗೋಪಾಲ್, ಗೋವಿಂದರಾಜು ಹಾಜರಿದ್ದರು.