ಕನ್ನಡ ವಿವಿಯಲ್ಲಿ ವಾರದ ಮಾತು


ಸಂಜೆವಾಣಿ ವಾರ್ತೆ
ಹೊಸಪೇಟೆ ಏ20: ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಧ್ಯಯನ ವಿಭಾಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ 249ನೇ ಆನ್‍ಲೈನ್ ವಾರದ ಮಾತು ಕಾರ್ಯಕ್ರಮದಲ್ಲಿ ಬಂಜಾರ ಸಮುದಾಯದ ಸಂಬೋಧನೆಯಲ್ಲಿ ಸಂಬಂಧವಾಚಕಗಳ ಪರ್ಯಾಯ ರೂಪಗಳು ಕುರಿತು ವಿಷಯ ಮಂಡಿಸಲಾಯಿತು.
ವಿಷಯ ಮಂಡಿಸಿ ಮಾತನಾಡಿದ ಸಂಶೋಧನಾರ್ಥಿ ಉಮ್ಲಾರ್ ಗೋಪಿನಾಯ್ಕ್ ಅವರು, ಸಂಬಂಧವಾಚಕ ರೂಪಗಳು ಒಂದೇ ರೀತಿಯಲ್ಲಿದ್ದರೂ ಸಂಬೋಧಿಸುವ ಕ್ರಮಗಳು ಮಾತ್ರ ಆಯಾ ಭಾಷಾ ಸಮುದಾಯದ ಮೇಲೆ ನಿರ್ಧಾರಿತವಾಗಿರುತ್ತವೆ.
ಬಂಧುತ್ವವು ವಯಸ್ಸು, ಲಿಂಗ, ಜಾತಿ ಹಾಗೂ ಸಾಮಾಜಿಕ ವರ್ಗಗಳನ್ನು ಅವಲಂಬಿಸಿರುತ್ತದೆ. ಬಂಧುವಾಚಕಗಳು ಅಥವಾ ಸಂಬಂಧವಾಚಕಗಳು ಭಾಷಿಕರು ನಿರ್ವಹಿಸುವ ಸಾಮಾಜಿಕ ಕಾರ್ಯವನ್ನು ನಿರ್ವಹಿಸುವುದರ ಜೊತೆಗೆ ಸಾಮಾಜಿಕ ಸಂಬಂಧವನ್ನು ಸಹ ಬೆಸೆಯಲಿವೆ ಎಂದರು.
ಅಲ್ಲದೇ ಕನ್ನಡ ಪರಿಸರ ಹಾಗೂ ಬಂಜಾರ ಪರಿಸರದಲ್ಲಿಯೂ ಬಂಧುತ್ವ ರೂಪಗಳು ಒಂದೇ ರೀತಿಯಲ್ಲಿದ್ದರೂ ಅದಕ್ಕಿಂತ ಭಿನ್ನವಾಗಿ ಪರ್ಯಾಯ ರೂಪಗಳನ್ನು ಬಳಸುವುದನ್ನು ಬಳ್ಳಾರಿ ಮತ್ತು ಕೊಪ್ಪಳ ಪರಿಸರದಲ್ಲಿ ಕಂಡು ಬರುವ ಸಂಬಂಧವಾಚಕಗಳ ಸಂಬೋಧಿಸುವ ಮಾದರಿಯನ್ನು ಉದಾಹರಣೆ ಸಹಿತ ವಿವರಿಸಿದರು. ಕನ್ನಡದಲ್ಲಿ ತಂದೆ, ಯಪ್ಪ, ಅಪ್ಪಾ, ಅಪ್ಪಾಜಿ, ಅಪ್ಪಯ್ಯ ಎಂಬ ರೂಪಗಳಿಗೆ ಕ್ರಮವಾಗಿ ಬಾ, ಬಾಪ, ಬಾಪು, ಮಾರೋಬಾ, ಬಾಬಾ ಎಂದು ಕರೆಯುವುದನ್ನು ಅವರು ವಿವರಿಸಿದರು.
ಕನ್ನಡ ಭಾಷಾಧ್ಯಯನ ವಿಭಾಗದ ಮುಖ್ಯಸ್ಥ  ಡಾ. ಪಿ ಮಹಾದೇವಯ್ಯ, ಸಂಶೋಧನಾರ್ಥಿ ದೀಪಾ ಜಿ  ಪ್ರತಿಕ್ರಿಯಿಸಿದರು. ಕಾರ್ಯಕ್ರಮದ ಸಂಚಾಲಕ ಚೌಡಪ್ಪ ಪಿ., ಅಂಬಿಕಾ, ಚೆಂದಸ್ವಾಮಿ ವಿ ಹಾಜರಿದ್ದರು.