ಕನ್ನಡ ವಿವಿಯಲ್ಲಿ ಪಿಎಚ್‍ಡಿ ಪ್ರವೇಶ ಶುಲ್ಕ ಹೆಚ್ಚಳಬಡ ವಿದ್ಯಾರ್ಥಿಗಳಿಗೆ ಪಿಎಚ್‍ಡಿ ಭಾರ


ಸಂಜೆವಾಣಿ ವಾರ್ತೆ
ಹೊಸಪೇಟೆ ಆ16: ಕನ್ನಡ ವಿಶ್ವವಿದ್ಯಾಲಯದ ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಪಿಎಚ್‍ಡಿ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಿದ್ದು, ಇದು ಸಂಶೋಧನೆ ಕೈಗೊಳ್ಳುವ ಬಡ ವಿದ್ಯಾರ್ಥಿಗಳಿಗೆ ಹೊರೆಯಾಗಲಿದ್ದು ಸ್ವಲ್ಪ ಭಾರವಾಗಲಿದೆ.
ಬಹುತೇಕ ಶುಲ್ಕ ಹೆಚ್ಚಳ
ಆರ್ಥಿಕ ಸಮಸ್ಯೆಯನ್ನು ತಕ್ಕಮಟ್ಟಿಗೆ ನೀಗಿಸಲು ಪಿಎಚ್‍ಡಿ ಪ್ರವೇಶ ಮತ್ತಿತರೆ ಶುಲ್ಕಗಳನ್ನು ಬಹುತೇಕ ದುಪ್ಪಟ್ಟುಗೊಳಿಸಿದೆ. ಸ್ಥಾಯಿ ನಿಧಿ, ಕ್ರೀಡೆ ಮತ್ತು ವೈದ್ಯಕೀಯ ಶುಲ್ಕವನ್ನು ತಲಾ ಒಂದು ಸಾವಿರ ರೂ. ಹೊಸದಾಗಿ ಸೇರ್ಪಡೆಗೊಳಿಸಿದೆ. ಅದರೊಂದಿಗೆ ಪ್ರವೇಶ ಶುಲ್ಕ, ತಾತ್ಕಾಲಿಕ ಪ್ರವೇಶ ಶುಲ್ಕ, ಕೋರ್ಸ್‍ವರ್ಕ್ ಶುಲ್ಕ, ಅರ್ಧ ವಾರ್ಷಿಕ ಶುಲ್ಕ, ಪ್ರಬಂಧ ಮಂಡನೆ, ಗ್ರಂಥಾಲಯ, ಘಟಿಕೋತ್ಸವ ಹಾಗೂ ಮಾರ್ಗದರ್ಶಿಗಳ ಬದಲಾವಣೆ, ಅಂಕಪಟ್ಟಿ, ಅಧಿಸೂಚನೆ, ಪ್ರಮಾಣ ಪತ್ರಗಳ ತಿದ್ದುಪಡಿ ಸೇರಿದಂತೆ ಬಹುತೇಕ ಶುಲ್ಕಗಳು ಎರಡರಷ್ಟು ಹೆಚ್ಚಿಸಿದೆ. ಪರಿಣಾಮ 36 ಸಾವಿರ ರೂ.ಗಳಲ್ಲಿ ಪೂರ್ಣಗೊಳ್ಳುತ್ತಿದ್ದ ಪಿಎಚ್‍ಡಿ ಪದವಿ ಪರಿಷ್ಕೃತ ಶುಲ್ಕದಿಂದ 65 ಸಾವಿರ ರೂ.ಗಿಂತ ಹೆಚ್ಚು ವೆಚ್ಚವಾಗಲಿದೆ.
ನಿಯಮ ಮೀರಿ ಹೆಚ್ಚಳ
ರಾಜ್ಯದ ಎಲ್ಲ ವಿಶ್ವವಿದ್ಯಾಲಗಳು ವಾರ್ಷಿಕ ಶೇ.10 ರಷ್ಟು ಶುಲ್ಕವನ್ನು ಹೆಚ್ಚಿಸಲು ಅವಕಾಶ ನೀಡಲಾಗಿದೆ. ಅಲ್ಲದೇ, ವಿವಿಯಲ್ಲಿ ಹೊಸದಾಗಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿದ್ದರೆ, ಅದರ ನಿರ್ವಹಣಾ ವೆಚ್ಚವನ್ನು ಸರಿದೂಗಿಸಿಕೊಳ್ಳುವ ನಿಟ್ಟಿನಲ್ಲಿ ಅಲ್ಪ ಪ್ರಮಾಣದಲ್ಲಿ ಶುಲ್ಕ ಹೆಚ್ಚಿಸಿಕೊಳ್ಳಲು ಅವಕಾಶವಿದೆ. ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿ ಹೇಳಿಕೊಳ್ಳುವಂತ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಆದರೆ, ಕನ್ನಡ ವಿಶ್ವವಿದ್ಯಾಲಯದ ಆರ್ಥಿಕ ಸಂಪನ್ಮೂಲ ಇಲ್ಲದೇ ಸೊರಗುತ್ತಿದೆ. ಇದೇ ಕಾರಣಕ್ಕೆ ಹಲವು ಕಾರ್ಯಚಟುವಟಿಕೆಗಳು ಕುಂಟಿತವಾಗಿವೆ. ಅವುಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಂಶೋಧನಾರ್ಥಿಗಳಿಗೆ ಹೊರೆ ಹಾಕಲಾಗಿದೆ ಎಂಬುದು ಸಂಶೋಧನಾರ್ಥಿಗಳ ಆರೋಪ.
ಶುಲ್ಕ ಹೆಚ್ಚಳ ಮಾಡಿರುವುದು ಗ್ರಾಮೀಣ ಮತ್ತು ಬಡ ಅಭ್ಯರ್ಥಿಗಳಿಗೆ ಹೊರೆಯಾಗಲಿದೆ ಕರೋನಾ ನಂತರದ ಕಾಲಘಟ್ಟದಲ್ಲಿ ಇದು ಇನ್ನಷ್ಟು ಹೊರೆ ಎನಿಸುತ್ತದೆ.
ಶುಲ್ಕ ಹೆಚ್ಚಳದ ಪಟ್ಟಿ:     ಹಿಂದಿನ-ಪರಿಷ್ಕೃತ
ಪ್ರವೇಶ ಶುಲ್ಕ            600-1000
ತಾತ್ಕಾಲಿಕ ಪ್ರವೇಶ ಶುಲ್ಕ    1100-2000
ಕೋರ್ಸ್‍ವರ್ಕ್ ಶುಲ್ಕ      2500-5000
ಅರ್ಧ ವಾರ್ಷಿಕ ಶುಲ್ಕ     3000-5000
ಗ್ರಂಥಾಲಯ ಶುಲ್ಕ        1100-2000
ಅವಧಿ ವಿಸ್ತರಣೆ         6000-10,000
ಪ್ರಬಂಧ ಸಲ್ಲಿಕೆ         7000-10,000

ಬೇರಿ ವಿಶ್ವವಿದ್ಯಾಲಯಗಳಿಗಿಂತಲೂ ಕನ್ನಡ ವಿವಿಯಲ್ಲಿ ಶುಲ್ಕ ಅತ್ಯಂತ ಕಡಿಮೆ ಇದೆ. ಪಕ್ಕದ ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಶುಲ್ಕಕ್ಕಿಂತ ನಮ್ಮಲ್ಲಿ ಕಡಿಮೆಯಿದೆ. ಕಳೆದ 2016-17 ಸಾಲಿನಲ್ಲಿ ಶುಲ್ಕ ಹೆಚ್ಚಳ ಮಾಡಿತ್ತು. ಈಗ ಶುಲ್ಕ ಹೆಚ್ಚಳ ಮಾಡಲಾಗಿದೆ.
ಡಾ.ಮಹಾದೇವಯ್ಯ,
ಕನ್ನಡ ವಿವಿ ಅಧ್ಯಯನಾಂಗದ ನಿರ್ದೇಶಕ.

ವಿಶ್ವ ವಿದ್ಯಾಲಯ ಶುಲ್ಕ ಹೆಚ್ಚಳ ಒಮ್ಮಿಂದೊಮ್ಮಿಗೆ ಇಷ್ಟು ಪ್ರಮಾಣದಲ್ಲಿ ಏರಿಕೆ ಬಡ ವಿದ್ಯಾರ್ಥಿಗಳಿಗೆ ಹೊರೆಯಾಗಲಿದೆ ಕಡಿಮೆ ಮಾಡಬೇಕು
ಜಾಕೀರ್
ಸಂಶೋಧನಾ ವಿದ್ಯಾರ್ಥಿ.