ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಲಿ:ಸುರೇಶ ಲೇಂಗಟಿ

ಕಲಬುರ್ಗಿ,ನ, 01: ಕನ್ನಡ ಭಾಷೆ ಕನ್ನಡದ ಉತ್ಸವ ಕೇವಲ ಒಂದೇ ದಿನಕ್ಕೆ ಸೀಮಿತಗೊಳಿಸದೇ ಪ್ರತಿನಿತ್ಯ ಆಚರಣೆ ಮಾಡುವ ಮೂಲಕ ರಾಜ್ಯೋತ್ಸವನ್ನು ನಿತ್ಯೋತ್ಸವ ಮಾಡಿದರೆ ಮಾತ್ರ ಕನ್ನಡದ ಬೆಳವಣಿಗೆ ಸಾಧ್ಯ ಎಂದು ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಸುರೇಶ ಲೇಂಗಟಿ ಹೇಳಿದರು. ಕಮಲಾಪುರ ತಹಶಿಲ್ದಾರ ಕಛೇರಿಯ ಆವರಣದಲ್ಲಿ ತಾಲೂಕು ಆಡಳಿತ ಮತ್ತು ಕಸಾಪ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡ 67 ನೇ ಕನ್ನಡ ರಾಜ್ಯೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಅವರು ಕರ್ನಾಟಕದಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಹೋರಾಟ ಮಾಡುವ ಸ್ಥಿತಿ ಬಂದಿದ್ದು, ದುರ್ದೈವದ ಸಂಗತಿ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ನಾವು ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ, ನಿಮ್ಮೆಲ್ಲರ ಸಹಕಾರವಿರಲಿ ಎಂದು ಮನವಿ ಮಾಡಿದರು.

ಕಸಾಪ ಗೌರವ ಕಾರ್ಯದರ್ಶಿ ರವೀಂದ್ರ ಬಿಕೆ ಮಾತನಾಡಿ ದೇಶದಲ್ಲೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಏಕೈಕ ಭಾಷೆ ಎಂದರೆ ಅದು ನಮ್ಮ ಕನ್ನಡ ಭಾಷೆ, ಕನ್ನಡ ಕೇವಲ ಒಂದು ಭಾಷೆಯಲ್ಲ ನಮ್ಮೆಲ್ಲರ ಉಸಿರಾಗಿದೆ ಎಂದರು. ಈ ವೇಳೆಯಲ್ಲಿ ಗ್ರೇಡ್ 2 ತಹಶಿಲ್ದಾರ ಗಂಗಾಧರ ಪಾಟೀಲ, ರವೀಂದ್ರ ಬಿಕೆ, ಆನಂದ ವಾರಿಕ, ರಘುನಂದನ ದ್ಯಾಮಣಿ, ಮಂಜುನಾಥ ಬಿರಾದರ, ವೆಂಕಟೇಶ ಅಧೋನಿ ಇತರರು ಇದ್ದರು.