ಕನ್ನಡ ರಾಜ್ಯೋತ್ಸವ ನಿತ್ಯದ ಉತ್ಸವದಂತಾಗಬೇಕು – ಮಾಜಿ ಶಾಸಕ

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ನ. 23 : – ಕನ್ನಡ ರಾಜ್ಯೋತ್ಸವವು ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೇ ನಿತ್ಯದ ಉತ್ಸವದಂತೆ ಆದಾಗ ಮಾತ್ರ ಕನ್ನಡದ ಅಭಿಮಾನ ಹೆಚ್ಚಲಿದೆ ಎಂದು ಮಾಜಿ ಶಾಸಕ ಕೆ.ವಿ.ರವೀಂದ್ರನಾಥ ಬಾಬು ತಿಳಿಸಿದರು.
ಕನ್ನಡ ರಾಜ್ಯೋತ್ಸವ ನಿಮಿತ್ತ ತಾಲೂಕಿನ ಎಂ.ಬಿ.ಅಯ್ಯನಹಳ್ಳಿಯ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯಿಂದ ಚಿಕ್ಕಜೋಗಿಹಳ್ಳಿಯ ನವೋದಯ ವಿದ್ಯಾಲಯದಲ್ಲಿ ಇತ್ತೀಚಿಗೆ  ಆಯೋಜಿಸಿದ್ದ ” ಕನ್ನಡದ ತೇರ – ಎಳೆಯೋಣ ಬಾರಾ” ಕಾರ್ಯಕ್ರಮದಲ್ಲಿ ಕನ್ನಡದ ತೇರಿಗೆ ಚಾಲನೆ ನೀಡಿ ಮಾತನಾಡುತ್ತಾ  ಕನ್ನಡ ಭಾಷೆಯು ನಮ್ಮ ಅನ್ನದ ಭಾಷೆ. ಅದನ್ನು ಎಲ್ಲರೂ ಉಳಿಸಿ ಬೆಳೆಸಬೇಕಿದೆ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಚ್.ಕೆ. ಅರುಣ್ ಕುಮಾರ್ ಮಾತನಾಡಿ, ಬಳಸಿದಷ್ಟು ಬೆಳೆಯುವಂಥದ್ದು ಭಾಷೆ ಕನ್ನಡವಾಗಿದೆ. ಕನ್ನಡ ಭಾಷೆಯ ಬಳಕೆಯಿಂದ ಕನ್ನಡದ ಮಹತ್ವ ಸಾರಬೇಕಿದೆ ಎಂದರು.
ಕನ್ನಡ ತೇರಿನಲ್ಲಿ ಕನ್ನಡಾಂಬೆ, ಅಪ್ಪು, ಕುವೆಂಪು ಭಾವಚಿತ್ರ ಸೇರಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳು ಹಾಗೂ ರಾಷ್ಟ್ರ ಸೇವೆಗೈದು ಹುತಾತ್ಮರಾದ ಕರ್ನಾಟಕ ಯೋಧರ ಭಾವಚಿತ್ರಗಳು ಇರುವುದು  ಗಮನ ಸೆಳೆದವು.
ಗ್ರಾಮದಾದ್ಯಂತ ಸಕಲ ವಾದ್ಯಗಳ ಮೂಲಕ ವಿದ್ಯಾರ್ಥಿಗಳು, ಗ್ರಾಮಸ್ಥರ ಸಮ್ಮುಖದಲ್ಲಿ ಕನ್ನಡ ತೇರಿನ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ನವೋದಯ ವಿದ್ಯಾಲಯದ ಪ್ರಾಚಾರ್ಯ ಎಂ.ಸುಂದರ್, ಮಾಕನಡಕು ಗ್ರಾಮ ಪಂಚಾಯಿತಿ ಅಧ್ಯಕ್ಷ ಹೇಮೇಶ್, ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಕೊಟ್ರೇಶ್, ಶರಣೇಶ್, ಕೊಟ್ರೇಶ್ ಎಸ್, ಗಣೇಶ್ ಇತರರು ಉಪಸ್ಥಿತರಿದ್ದರು.