ಕನ್ನಡ ರಾಜ್ಯೋತ್ಸವ: ನಕ್ಕು ನಲಿಸಿದ ಹಾಸ್ಯ ಕಲಾವಿದರುನೌಕರರ ಮನ ತಣಿಸಿದ ನೃತ್ಯ, ಸಂಗೀತ

ಬೀದರ್:ನ.20: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕವು ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಹಾಗೂ ನೃತ್ಯೋತ್ಸವವು ನೌಕರರ ಮನ ತಣಿಸುವಲ್ಲಿ ಯಶಸ್ವಿಯಾಯಿತು.

ಕಾರ್ಯಕ್ರಮದಲ್ಲಿ ನೃತ್ಯ ವೈಭವವೇ ಸೃಷ್ಟಿಯಾಯಿತು. ನೃತ್ಯದ ಹೊಸ ಲೋಕ ತೆರೆದುಕೊಂಡಿತು. ಹಾಸ್ಯದ ಹೊನಲು ಹರಿಯಿತು.

ಬಿದರಿ ಬೀದರ್ ಜಿಲ್ಲೆಯ ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷೆ ರೇಖಾ ಅಪ್ಪಾರಾವ್ ಸೌದಿ, ವೀಣಾಪಾಣಿ ಸಂಗೀತ ವಿದ್ಯಾಲಯದ ಶಿವಕುಮಾರ ಪಾಂಚಾಳ, ಸಾರೆಗಮಪ ಸಾಂಸ್ಕøತಿಕ, ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಹೇಶಕುಮಾರ ಕುಂಬಾರ, ಸ್ಫೂರ್ತಿ ಸೌಂಡ್ ಆ್ಯಂಡ್ ಮೆಲೊಡೀಸ್‍ನ ನಾಗರಾಜ ಜೋಗಿ, ಸಂಜೀವಕುಮಾರ ಸ್ವಾಮಿ, ಶಿವಾನಿ ಸ್ವಾಮಿ ಅವರು ಕನ್ನಡ ಗೀತೆಗಳನ್ನು ಸುಮಧುರವಾಗಿ ಹಾಡಿ ಸಭಿಕರ ಕರತಾಡನಕ್ಕೆ ಪಾತ್ರರಾದರು.

ನೂಪುರ ನೃತ್ಯ ಅಕಾಡೆಮಿಯ ಉಷಾ ಪ್ರಭಾಕರ, ನಾಟ್ಯಶ್ರೀ ನೃತ್ಯಾಲಯದ ರಾಣಿ ಸತ್ಯಮೂರ್ತಿ, ನೃತ್ಯಂಗನ ನಾಟ್ಯ ಮತ್ತು ಕಲಾ ಕೇಂದ್ರದ ಪೂರ್ಣಚಂದ್ರ ಮತ್ತು ತಂಡದವರು ನೃತ್ಯದ ರಸದೌತಣ ಉಣಬಡಿಸಿದರು. ಹಾಸ್ಯ ಕಲಾವಿದರಾದ ನವಲಿಂಗ ಪಾಟೀಲ ಹಾಗೂ ವೈಜಿನಾಥ ಸಜ್ಜನಶೆಟ್ಟಿ ನಗೆ ಚಟಾಕಿಗಳನ್ನು ಹಾರಿಸಿ ನಕ್ಕು ನಲಿಸಿದರು.

ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಎಂ. ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರಬಾಬು ಕಲಾವಿದರನ್ನು ಸನ್ಮಾನಿಸಿದರು.

ಜಿಲ್ಲೆಯ ಸಂಗೀತ, ನೃತ್ಯ ಹಾಗೂ ಹಾಸ್ಯ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡುವ ದಿಸೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಶರಣಪ್ಪ ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಹಿರಿಯ ಉಪಾಧ್ಯಕ್ಷ ಮಾಣಿಕರಾವ್ ಪಾಟೀಲ ಉಪಸ್ಥಿತರಿದ್ದರು.

ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ ಸ್ವಾಗತಿಸಿದರು. ಜಿಲ್ಲಾ ಸಂಘದ ಕಾರ್ಯಾಧ್ಯಕ್ಷ ಡಾ. ರಾಜಕುಮಾರ ಹೊಸದೊಡ್ಡೆ ನಿರೂಪಿಸಿದರು.

ಉಪಾಧ್ಯಕ್ಷೆ ಡಾ. ವೈಶಾಲಿ ದೇವಪ್ಪ ವಂದಿಸಿದರು. ನೌಕರರು ಹಾಗೂ ಅವರ ಕುಟುಂಬದ ಸದಸ್ಯರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.