ಕನ್ನಡ ರಾಜ್ಯೋತ್ಸವ ಕನ್ನಡಿಗರ ಮನೆ ಹಬ್ಬವಾಗಲಿ…


ದಾವಣಗೆರೆ. ನ.೧; ಕನ್ನಡ ನುಡಿಯು ಪ್ರತಿಯೊಬ್ಬ ಕನ್ನಡಿಗನ ನಾಲಿಗೆಯಲ್ಲಿ ಸದಾ ಇರಬೇಕು. ಕನ್ನಡ ನುಡಿಯ ರಕ್ಷಣೆಯ ಜೊತೆಗೆ ಕನ್ನಡ ನಾಡಿನ ನೆಲ, ಜಲ, ಗಡಿ, ಕಲೆ, ಸಂಸ್ಕೃತಿಯ ರಕ್ಷಣೆಯೂ  ಕನ್ನಡಿಗರ ಜವಾಬ್ದಾರಿಯಾಗಿದೆ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ.ಹೆಚ್.ಎಸ್‌‌.ಮಂಜುನಾಥ್ ಕುರ್ಕಿಯವರು ಹೇಳಿದರು‌. ಅವರಿಂದು ೬೬ ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ರಾಷ್ಟ್ರ ಧ್ವಜ ಹಾಗೂ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು. ಕರ್ನಾಟಕ ನಾಡು ಏಕೀಕರಣವಾಗಲು ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿದಂತೆ ಹಲವಾರು ವಿದ್ವಾಂಸರು, ಕವಿಗಳು, ಸಾಹಿತಿಗಳು, ಹೋರಾಟಗಾರರು, ಸಂಘಟಕರು, ನಟರು ಸೇರಿದಂತೆ ಹಲವು ಮಹನೀಯರ ಕೊಡುಗೆ ಅಪಾರವಾಗಿದೆ. ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾವ್, ಅನಕೃ, ಕೋಟ ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್,  ಬಿ.ಎಮ್‌.ಶ್ರೀಕಂಠಯ್ಯ, ಕೆಂಗಲ್ ಹನುಮಂತಯ್ಯ, ಪಾಟೀಲ್ ಪುಟ್ಟಪ್ಪ, ಎಚ್.ಎಸ್‌.ದೊರೆಸ್ವಾಮಿ ಮುಂತಾದ ನೂರಾರು ಮಹನೀಯರು ಮತ್ತು ಲಕ್ಷಾಂತರ ಕನ್ನಡಿಗರ ಹೋರಾಟದ ಫಲವಾಗಿ ನಾವಿಂದು ಏಕೀಕೃತ ಕನ್ನಡ ನಾಡನ್ನು ಕಟ್ಟಿಕೊಂಡಿದ್ದೇವೆ. ಕನ್ನಡ ನಾಡಿನ ಮರುಹುಟ್ಟಿನ ದಿನವಾದ ನವೆಂಬರ್ ೧ ನ್ನು ಕನ್ನಡ ನಾಡಿನ ಸಮಸ್ತ ಜನತೆ ಯಾವುದೇ ಜಾತಿ, ಧರ್ಮ, ಪಂಥ, ಪಕ್ಷ ಬೇಧವಿಲ್ಲದೇ ಒಗ್ಗಟ್ಟಿನಿಂದ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಬೇಕು. ಪ್ರಸ್ತುತ ದಿನಮಾನದಲ್ಲಿ ವಿದ್ಯಾವಂತರೇ ಕನ್ನಡ ನಾಡು ನುಡಿಯ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಇದು ಸಲ್ಲದು‌. ನಮ್ಮ ಯುವ ಪೀಳಿಗೆಯೇ ಹಿರಿಯರ ಮಾರ್ಗದರ್ಶನದಲ್ಲಿ ಕನ್ನಡ ನಾಡು ನುಡಿಯ ರಕ್ಷಣೆಯ ಜವಾಬ್ದಾರಿಯನ್ನು ಹೊರಬೇಕು  ಎಂದು  ಕರೆ ನೀಡಿದರು.
ಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪತಿಷತ್ತಿ‌ನ ಆಡಳಿತಾಧಿಕಾರಿ ರವಿಚಂದ್ರ ಅವರು ಮಾತನಾಡಿ ಕರ್ನಾಟಕ ರಾಜ್ಯೋತ್ಸವದ ಆಚರಣೆಯು ಕನ್ನಡಿಗರ ಮನೆ ಹಬ್ಬವಾಗಬೇಕು. ಕನ್ನಡದ ಇತಿಹಾಸ ಮತ್ತು ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮಹಾನ್ ವ್ಯಕ್ತಿಗಳ  ಹೋರಾಟದ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕಾಗಿದೆ‌. ಕನ್ನಡ ನಾಡಿನ ಮಹತ್ವವನ್ನು ಕನ್ನಡಿಗರು ಅರಿತಾಗ ಮಾತ್ರ ಕನ್ನಡ ರಾಜ್ಯೋತ್ಸವದ ಆಚರಣೆ ಅರ್ಥಪೂರ್ಣವಾಗಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸದಾ ಕಾಲ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗಿದ್ದು ಕನ್ನಡ ಭಾಷಾಭಿಮಾನ ಮೆರೆಸುವ ಕೈಂಕರ್ಯದಲ್ಲಿ ಕೈ ಜೋಡಿಸಲಿದೆ  ಎಂದು ಹೇಳಿದರು.
ರಾಜ್ಯೋತ್ಸವ ಸಮಾರಂಭದಲ್ಲಿ ಕಸಾಪ‌ ಮಾಜಿ ಅಧ್ಯಕ್ಷ ಲಯನ್ ಎ.ಆರ್.ಉಜ್ಜನಪ್ಪ, ಎಐಟಿಯುಸಿ ಜಿಲ್ಲಾಧ್ಯಕ್ಷ ಹಾಗೂ ಕನ್ನಡಪರ ಸಂಘಟಕ  ಕೆ.ರಾಘವೇಂದ್ರ ನಾಯರಿ, ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಬಿ.ವಾಮದೇವಪ್ಪ, ಗೌರವ ಕಾರ್ಯದರ್ಶಿ ಬಿ.ದಿಲ್ಯಪ್ಪ, ಬಯಲಾಟ ಅಕಾಡೆಮಿಯ ಸದಸ್ಯ ಎನ್.ಎಸ್.ರಾಜು, ಜಿ.ಆರ್. ಷಣ್ಮುಖಪ್ಪ, ಜಾನಪದ ಅಕಾಡೆಮಿಯ ಸದಸ್ಯೆ ಸಿ.ಕೆ.ರುದ್ರಾಕ್ಷಿ ಬಾಯಿ, ಲಯನ್ ಸುದರ್ಶನ್ ಕುಮಾರ್, ಚಿತ್ರ ಕಲಾವಿದ ಎ.ಮಹಾಲಿಂಗಪ್ಪ, ಬಿ.ಎಸ್.ಜಗದೀಶ್, ಪತ್ರಕರ್ತ ಬಕ್ಕೇಶ್ ನಾಗನೂರು, ಬಿ.ಎಮ್.ಮುರಿಗೆಯ್ಯ ಕುರ್ಕಿ, ಕೊಟ್ರಪ್ಪ, ಶಕುಂತಲಾ,   ರಾಜಶೇಖರ್, ಜೀವನ್ ಕೂಲಂಬಿ ಮತ್ತಿತರರು ಭಾಗವಹಿಸಿದ್ದರು.