‘ಕನ್ನಡ ಮಾಧ್ಯಮ ಶಾಲೆಗಳು ಬೆಳೆಯಬೇಕು’

ಶಿವಮೊಗ್ಗ, ನ. 1:  ಪ್ರಸ್ತುತ ಜಾಗತೀಕರಣದ ಹಿನ್ನೆಲೆಯಲ್ಲಿ ಇಂಗ್ಲಿಷ್ ಭಾಷಾ ಜ್ಞಾನ
ಅವಶ್ಯಕವಾಗಿದ್ದರೂ, ಎಂದಿಗೂ ಮಾತೃ ಭಾಷೆ ಕನ್ನಡಕ್ಕೆ ಮೊದಲ ಆದ್ಯತೆ. ಕನ್ನಡ ಮಾಧ್ಯಮ
ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಸರ್ಕಾರ ಕೈಗೊಂಡಿದೆ ಎಂದು ಸಚಿವ
ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಶಿವಮೊಗ್ಗ ನಗರದ ಡಿಎಆರ್ ಮೈದಾನ ಆವರಣದಲ್ಲಿ ಸೋಮವಾರ ಬೆಳಿಗ್ಗೆ ಜಿಲ್ಲಾಡಳಿತ
ಹಮ್ಮಿಕೊಂಡಿದ್ದ ಕನ್ನಡ ರಾಜೋತ್ಸವ ಸಮಾರಂಭದಲ್ಲಿ, ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ
ನಂತರ ಸಭಿಕರನ್ನುದ್ದೇಶಿಸಿ ರಾಜೋತ್ಸವ ಸಂದೇಶ ನೀಡಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯಾದ್ಯಂತ ‘ಕನ್ನಡಕ್ಕಾಗಿ ನಾವು’ ಅಭಿಯಾನದ ಮೂಲಕ
ಕನ್ನಡ ನಾಡು ನುಡಿ ಸಂಸ್ಕೃತಿ ಭಾಷೆಯ ಸಿರಿಯನ್ನು ಹೆಚ್ಚಿಸಿ ಪಸರಿಸುವ ಅನೇಕ
ಸಾಂಸ್ಕೃತಿಕ  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ವರ್ಷ ದೇಶಕ್ಕೆ
ಸ್ವಾತಂತ್ರ್ಯ ಲಭಿಸಿ 75 ವರ್ಷ ಪೂರ್ಣಗೊಂಡಿರುವುದು ಅತ್ಯಂತ ಸಂತಸದ ವಿಚಾರ. ಈ ಅಮೃತ
ಮಹೋತ್ಸವವನ್ನು ದೇಶಾದ್ಯಂತ ಒಂದು ವರ್ಷ ಕಾಲ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ
ಎಂದರು.
ಸರ್ವ ಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸಿದ ನಮ್ಮ ನಾಡು ಇಂದು, ಮುಂದು, ಎಂದೆಂದೂ
ಎಲ್ಲಾ ಜಾತಿ, ಧರ್ಮ, ಶ್ರದ್ಧೆಗಳ ಜನರೂ ಸಾಮರಸ್ಯದಿಂದ ಬದುಕುವ ಒಂದು ಸುಂದರ
ತೋಟವಾಗಿಯೇ ಉಳಿಯಬೇಕು ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಆಯ್ಕೆ: ಸ್ವಾತಂತ್ರ್ಯದ ಅಮೃತೋತ್ಸವದ ಸವಿನೆನಪಿಗೆ, ರಾಜ್ಯದ ಪ್ರತಿ ತಾಲೂಕಿನಲ್ಲಿ
ಅಮೃತ ಗ್ರಾಮ ಪಂಚಾಯತ್ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ
ಜಿಲ್ಲೆಯ 32 ಗ್ರಾಮ ಪಂಚಾಯತ್ಗಳನ್ನು ಆಯ್ಕೆ ಮಾಡಲಾಗಿದ್ದು, ಮೂಲಸೌಲಭ್ಯ
ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು.
ಈ ಯೋಜನೆಯಡಿ ಮಾರ್ಚ್ ಅಂತ್ಯದವರೆಗೆ ಎಲ್ಲಾ ಯೋಜನೆಗಳಲ್ಲಿ ಉತ್ತಮ ಸಾಧನೆ ಮಾಡಿದ
ಗ್ರಾಪಂಗಳಿಗೆ 25 ಲಕ್ಷ ರೂ. ಅನುದಾನ ಒದಗಿಸಲಾಗುವುದು. ಪ್ರದೇಶದಲ್ಲಿ ಉದ್ಯೋಗಾವಕಾಶ
ಕಲ್ಪಿಸಲು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿ ವೃತ್ತಿ ತರಬೇತಿ ಕೊಡಲಾಗುವುದು
ಎಂದು ಹೇಳಿದರು.
ಈಗಾಗಲೇ 30 ಜನ ಸ್ವಸಹಾಯ ಸಂಘದ ಮಹಿಳೆಯರಿಗೆ ವಾಹನ ಚಾಲನಾ ತರಬೇತಿ ನೀಡಿಲಾಗಿದ್ದು,
ಕಸ ವಿಲೇವಾರಿ ಘಟಕದ ವಾಹನವನ್ನು ಚಲಾಯಿಸುವ ಉದ್ಯೋಗ ಕಂಡುಕೊಂಡಿದ್ದಾರೆ.
ಮುಂದಿನ ತಿಂಗಳಲ್ಲಿ ಇನ್ನೂ 185 ಮಹಿಳೆಯರಿಗೆ ತರಬೇತಿ ನೀಡಲಾಗುವುದು. ಸ್ವ ಉದ್ಯೋಗ
ಆರಂಭಿಸಲು 151 ಗ್ರಾಮ ಪಂಚಾಯತ್ ಒಕ್ಕೂಟಗಳಿಗೆ 16.22 ಕೋಟಿ ರೂ. ಸಮುದಾಯ ಬಂಡವಾಳ
ನಿಧಿ ಸಾಲ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.