ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಹೆಚ್ಚು ಜಾಣರು


(ಸಂಜೆವಾಣಿ ವಾರ್ತೆ)
 ಬಳ್ಳಾರಿ;ಮಾ,24- ವಿದ್ಯಾರ್ಥಿಗಳು ಸತತ ಅಧ್ಯಯನದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಲೆಕ್ಕ ಪರಿಶೋಧಕ ಸಿದ್ಧರಾಮೇಶ್ವರಗೌಡ ಕರೂರು ಹೇಳಿದರು.
ಅವರು ತಾಲೂಕಿನ ಡಿ.ಕಗ್ಗಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಕ್ವಿಜ್ ಸೇರಿದಂತೆ ವಿವಿಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗಿಂತಲೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹೆಚ್ಚು ಜಾಣರಿರುತ್ತಾರೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಯಾವುದೇ ಕೀಳಿರುಮೆ ಇಟ್ಟುಕೊಳ್ಳದೆ ಸಾಧನೆಯ ಹಾದಿಯಲ್ಲಿ ಸಾಗಬೇಕು. ಇಂಗ್ಲೀಷ್ ಒಂದು ಭಾಷೆಯಷ್ಟೇ. ಇಂಗ್ಲೀಷ್ ಕಲಿತವರಷ್ಟೇ ಬುದ್ಧಿವಂತರು ಎಂದುಕೊಳ್ಳಬೇಕಾಗಿಲ್ಲ. ಕನ್ನಡ ಮಾಧ್ಯಮದಲ್ಲಿ ಓದಿದ ಅದೆಷ್ಟೋ ಜನರು ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದಾರೆ ಎಂದರಲ್ಲದೆ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರುನಮಗೆಲ್ಲಾ ಆದರ್ಶವಾಗಬೇಕೆಂದರು.
ಶಾಲೆಯ ಮುಖ್ಯ ಶಿಕ್ಷಕ ಡಿ.ಕೆ.ವಿನಯ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದು ಸ್ಪರ್ಧಾತ್ಮಕ ಯುಗ. ಶೈಕ್ಷಣಿಕ ಹಂತ ಹಂತಗಳಲ್ಲಿ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಮಕ್ಕಳು ಪ್ರಾಥಮಿಕ ಹಂತದಲ್ಲಿಯೇ ಶೈಕ್ಷಣಿಕ ಸ್ಪರ್ಧೆಯನ್ನು ಎದುರಿಸುವ ಮನೋಭಾವ ಮೂಡಿಸಿಕೊಳ್ಳಬೇಕು. ಸತತ ಓದು, ಶ್ರದ್ಧೆಯಿಂದ ಸ್ಪರ್ಧೆ ಎದುರಿಸುವ ಶಕ್ತಿ ಬರುತ್ತದೆಂದರು.
ಚಾಣಕ್ಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ವಿ.ಶಿವಾಚಾರಿ, ಪತ್ರಕರ್ತಕೆ.ಎಂ.ಮಂಜುನಾಥ, ಸಹ ಶಿಕ್ಷಕ ಅನಂತಕುಮಾರ್, ಸುರೇಂದ್ರ, ಸಾಗರ್, ಬಸಪ್ಪ, ಸುದರ್ಶನ, ಮುನಿಸ್ವಾಮಿ, ಜಯಶ್ರೀ, ಶಂಕ್ರಮ್ಮ, ಬಸವರಾಜ್, ಶೃತಿ ಇತರರಿದ್ದರು.