ಕನ್ನಡ ಮರೆತರೆ ತಾಯಿ ಮರೆತಂತೆ

ಬೆಂಗಳೂರು, ನ.೧-ಕನ್ನಡ ಭಾಷೆಯ ಮೇಲಿನ ಅಭಿಮಾನ ಕೇವಲ ನವೆಂಬರ್ ೧ ಕ್ಕೆ ಮಾತ್ರ ಸೀಮಿತವಾಗದಿರಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.ನಗರದಲ್ಲಿಂದು ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರ ಹಾಗೂ ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ ೬೮ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಅವರು ರಾಷ್ಟ್ರ ಹಾಗೂ ನಾಡಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕನ್ನಡ ಹೃದಯ ಭಾಷೆಯಾಗಲಿ ಹಾಗೂ ಮನಸ್ಸಿನ ಭಾಷೆಯಾಗಲಿ.ನಮಗೆ ಸ್ವರ್ಗ ಕರ್ನಾಟಕ ಮತ್ತು ಕನ್ನಡ ಭೂಮಿ. ಕರ್ನಾಟಕ ಏಕೀಕರಣಕ್ಕೆ ಹೋರಾಟ ಮಾಡಿದ ಲಕ್ಷಾಂತರ ಜನರನ್ನು ನೆನೆಯಬೇಕು. ಕನ್ನಡವನ್ನು ಮರೆತರೆ ತಾಯಿಯನ್ನು ಮರೆತಂತೆ ಎಂದು ಹೇಳಿದರು.
ಬಸ್‌ಗೆ, ರೈಲಿಗೆ ಬೆಂಕಿ ಹಚ್ಚುವುದಲ್ಲಿ ರಾಜ್ಯದ ಅಭಿಮಾನ ಇರುವುದಿಲ್ಲ ಎಂದ ಅವರು ಸರ್ವ ಜನಾಂಗದ ಶಾಂತಿಯ ತೋಟವನ್ನು ಮರಳಿ ಗಳಿಸಲು ಹೋರಾಡೋಣ ಎಂದರು.ಕನ್ನಡ-ಕನ್ನಡಿಗ-ಕರ್ನಾಟಕ ನಮ್ಮ ಹೃದಯದ ಹಾಗೂ ಮನದಾಳದ ಮಿಡಿತವಾಗಬೇಕು. ತುಂಗೆ,ಭದ್ರೆ,ಕಾವೇರಿ,ಕೃಷ್ಣೆಯರು ಹರಿಯುವ ಈ ನಾಡು ಪವಿತ್ರ ಭೂಮಿಯಾಗಿದೆ. ೨ ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ನಾಡನ್ನು ಮರೆತರೆ ,ನಾವು ನಮ್ಮ ಹೆತ್ತ ತಾಯಿಯನ್ನು ಮರೆತಂತೆ ಎಂದು ಎಚ್ಚರಿಸಿದರು.