ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ
 ಪೂರಕವಾದ ಕನ್ನಡ ಭವನ ನಿರ್ಮಾಣ:ಸಚಿವ ಆನಂದ್ ಸಿಂಗ್


ಸಂಜೆವಾಣಿ ವಾರ್ತೆ
ಹೊಸಪೇಟೆ, ಮಾ.12: ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಪೂರಕವಾಗಿ ಕನ್ನಡ ಭವನ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ಶೀಘ್ರವೇ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸಾಹಿತಿಗಳು ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳ ಜೊತೆಗೆ ಸಭೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಹೊಸಪೇಟೆ ತಾಲೂಕು ಘಟಕ ನಗರದ ಪುನೀತ್ ರಾಜಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಇನ್ನೂ ಹದಿನೈದರಿಂದ ಇಪ್ಪತ್ತು ದಿನಗಳಲ್ಲಿ ಚುನಾವಣೆ ಅಧಿಸೂಚನೆ ಜಾರಿಯಾಗಲಿದೆ. ಅಷ್ಟರಲ್ಲಿ ಕನ್ನಡದ ಕೆಲಸ ಮಾಡುವೆ. ಕನ್ನಡ ಭವನದ ಸ್ವರೂಪ, ಅನುದಾನದ ಬಗ್ಗೆಯೂ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ತಮಿಳುನಾಡಿನಲ್ಲಿ ತಮಿಳಿಗೆ ಆದ್ಯತೆ ಇದೆ. ಕೇರಳದಲ್ಲಿ ಮಳಯಾಲಂ ಭಾಷೆಗೆ ಹೆಚ್ಚಿನ ಪ್ರಾಧ್ಯಾನ್ಯತೆ ಇದೆ. ನಾವು ಕನ್ನಡಿಗರು ಎಲ್ಲಾ ಭಾಷೆಗೂ ಸೈ ಎನ್ನುತ್ತೇವೆ. ಹಾಗಾಗಿ ವೇದಿಕೆಯಲ್ಲಿ ಮಾತ್ರ ಕನ್ನಡಾಭಿಮಾನ ತೋರಿ, ಆ ಬಳಿಕ ಮಕ್ಕಳನ್ನು ಕಾನ್ವೆಂಟ್ ಸ್ಕೂಲ್‍ಗಳಿಗೆ ಕಳುಹಿಸುವುದಕ್ಕಿಂತ ನಾವು ಭಾಷಾಭಿಮಾನ ಬೆಳೆಸಿಕೊಳ್ಳುವುದು ಉತ್ತಮ. ಅದರಲ್ಲೂ ನಾವು ಎಲ್ಲಾ ಭಾಷೆಯಲ್ಲಿ ವ್ಯವಹರಿಸುತ್ತೇವೆ, ತಮಿಳಿರಿಗಿಂತ ನಾವು ಬುದ್ಧಿವಂತರೋ ಅಥವಾ ಭಾಷಾಪ್ರೇಮ ಮೆರೆಯುವ ತಮಿಳರು ಉತ್ತಮರೋ ಎಂಬುದನ್ನು ವಿದ್ವಾಂಸರು, ಸಾಹಿತಿಗಳೇ ಚರ್ಚಿಸಿ ಹೇಳಬೇಕು. ಆದರೂ ನಾವು ಕನ್ನಡ ಭಾಷಾಭಿಮಾನ ಹೊಂದಬೇಕಿದೆ ಎಂದರು.
ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳು ಅಭಿವೃದ್ಧಿಯಲ್ಲಿ ಮುಂದುವರೆದಿವೆ. ಶಿಕ್ಷಣ ಕ್ಷೇತ್ರದಲ್ಲೂ ಕರ್ನಾಟಕ ಮುಂದಿದೆ, ಇನ್ನೂ ನಾಗರಿಕತೆಯಲ್ಲೂ ಅಭಿವೃದ್ಧಿ ಸಾಧಿಸಿದ್ದೇವೆ. ಉತ್ತರ ಭಾರತ ಇನ್ನೂ ಸುಧಾರಿಸಬೇಕಿದೆ. ಹಾಗಾಗಿ ಕನ್ನಡ ಸಾಹಿತ್ಯ ರಂಗದಲ್ಲೂ ನಾವು ಮುಂದಿದ್ದೇವೆ ಎಂದರು.
ವಿಜಯನಗರ ಸಾಮ್ರಾಜ್ಯದಲ್ಲೇ ದಾಸ ಸಾಹಿತ್ಯ ಜನ್ಮತಳೆದಿದೆ. ಪುರಂದರದಾಸರು, ವ್ಯಾಸರಾಯರು, ಕನಕದಾಸರು ನೆಲದಲ್ಲಿ ಓಡಾಡಿದ್ದಾರೆ. ರೋಮ್ ಸಾಮ್ರಾಜ್ಯದ ಬಳಿಕ ಅತಿ ದೊಡ್ಡ ಸಾಮ್ರಾಜ್ಯ ವಿಜಯನಗರ ಆಗಿದೆ. ಈಗ ಐತಿಹಾಸಿಕ ವಿಜಯನಗರ ಜಿಲ್ಲೆ ರಚನೆಯಾಗಿದೆ. ಕನ್ನಡಾಂಬೆ ಭುವನೇಶ್ವರಿದೇವಿ ಇರುವ ನೆಲ ಹಂಪಿಯಾಗಿದೆ. ಹಾಗಾಗಿ ಈ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಇದೆ ಎಂದರು.
ಹಂಪಿ ಹೇಮಕೂಟ ಶೂನ್ಯ ಸಿಂಹಾಸನಾಧೀಶ್ವರ ಜ.ಶ್ರೀ ಕೊಟ್ಟೂರು ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಕನ್ನಡ ಭಾಷೆ ಉಚ್ಚಾರಣೆಯಲ್ಲೂ ನಾವು ಸುಧಾರಿಸಬೇಕಿದೆ. ಪದಗಳ ಬಳಕೆಯನ್ನು ಸಂದರ್ಭನುಸಾರ ಮಾಡಬೇಕಿದೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಶರಣ ಸಾಹಿತ್ಯ ಪರಂಪರೆ ಮಹತ್ತರ ಕೊಡುಗೆ ನೀಡಿದೆ. ವಿಜಯನಗರದ ಅರಸ ಪ್ರೌಢದೇವರಾಯನ ಕಾಲದಲ್ಲಿ ವಿರಕ್ತರಿಗೆ ಹೆಚ್ಚಿನ ಆದ್ಯತೆ ದೊರೆಯಿತು. ಭಕ್ತಿ ಸಾಹಿತ್ಯ ಜನ್ಮ ತಳೆದಿರುವುದು ವಿಜಯನಗರ ನೆಲದಲ್ಲಿ, ರಾಜ, ಮಹಾರಾಜರು ಮಾಯವಾಗಬಹುದು. ಆದರೆ, ಸಾಹಿತ್ಯ ಹಾಗೂ ಸಾಹಿತಿಗಳು, ಕಲೆ, ವಾಸ್ತುಶಿಲ್ಪ ಶಾಶ್ವತವಾಗಿ ಉಳಿಯಲಿದೆ ಎಂದರು. ಸಮ್ಮೇಳನಾಧ್ಯಕ್ಷ ಡಾ. ಎಚ್. ಬಾಲರಾಜು ಮತ್ತಿತರರಿದ್ದರು. ಬಳಿಕ ವಿಚಾರಗೋಷ್ಠಿ ಮತ್ತು ಕವಿಗೋಷ್ಠಿಗಳು ನಡೆದವು.