ಕನ್ನಡ ಭಾಷೆ ತವರಿನಲ್ಲಿಯೆ ತಬ್ಬಲಿಯಾಗಿದೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ನ.29: ಹಿಂದಿ ಹೇರಿಕೆ ಮತ್ತು ಆಂಗ್ಲಭಾಷೆಯ ಯಜಮಾನಿಕೆ ದಿನೇದಿನೇ ಹೆಚ್ಚುತ್ತಿದ್ದು, ಕನ್ನಡ ತನ್ನ ನೆಲೆಯನ್ನು ಕಳೆದುಕೊಂಡು ತನ್ನ ತವರಿನಲ್ಲಿಯೇ ತಬ್ಬಲಿಯಾಗಬೇಕಾದ ಸ್ಥಿತಿ ನಿರ್ಮಾಣವಾಗುತ್ತಿರುವುದು ಆತಂಕಕಾರಿ ವಿಷಯ ಎಂದು ಗವಿಮಠ ವಸತಿ ಶಾಲೆಯ ಪ್ರಾಂಶುಪಾಲ ಕುಪ್ಪಳ್ಳಿ ಪ್ರಸನ್ನ ಅಭಿಪ್ರಾಯಪಟ್ಟರು.
ಅವರು ತಾಲ್ಲೂಕಿನ ಬೂಕನಕೆರೆ ಹೋಬಳಿಯ ಗವಿಮಠ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು
ಕನ್ನಡ ರಾಜ್ಯೊತ್ಸವ ಕನ್ನಡಿಗರ ಸಡಗರ ಸಂಭ್ರಮದ ಹಬ್ಬ. ಮತ್ತೊಂದು ಕಿರೀಟವೆಂಬಂತೆ, ಈ ಬಾರಿಯ ವಿಶೇಷವೆಂದರೆ ಮೈಸೂರು ರಾಜ್ಯ ಅಂದರೆ, ಈಗಿನ ‘ಕರ್ನಾಟಕ’ ಉದಯವಾಗಿ ಇಂದಿಗೆ 67 ವರ್ಷಗಳು ತುಂಬಿ 68ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. 1905ರಲ್ಲಿ ಕನ್ನಡ ಕುಲಪುರೋಹಿತರೆಂದೇ ಹೆಸರಾದ ಆಲೂರು ವೆಂಕಟರಾವ್‍ರವರು ಕರ್ನಾಟಕದ ಏಕೀಕರಣ ಚಳವಳಿಯನ್ನು ಪ್ರಾರಂಭಿಸಿದರು. 1956ರ ನವಂಬರ್ 1 ರಂದು ಮದ್ರಾಸ್, ಬಾಂಬೆ ಮತ್ತು ಹೈದ್ರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು. ನವಂಬರ್ 1, 1973ರಂದು ‘ಕರ್ನಾಟಕ’ ಎಂದು ಪುನರ್ ನಾಮಕರಣಗೊಂಡಿತು.
ನಾಡು, ನುಡಿ, ಜಲ ವಿಷಯದಲ್ಲಿ ಭಾವೋದ್ವೇಗ ಭಾವನಾತ್ಮಕತೆ ಮತ್ತು ತಾಯ್ನಾಡಿನ ಮೇಲಿನ ಅಪರಿಮಿತ ಪ್ರೀತಿ ಎಲ್ಲವೂ ಮುಖ್ಯ. ಆದರೆ ಇವೆಲ್ಲವೂ ಆಚರಣೆಯ ಜೊತೆ ಕೈ ತೊಳೆದ ನೀರಿನಂತೆ ಗಟಾರು ಸೇರಬಾರದು. ಇದು ನಿಂದನೆಯ ಮಾತಲ್ಲ. ಬದಲಿಗೆ ಕನ್ನಡ ಉಳಿಸಿ ಕಟ್ಟಿ ಬೆಳೆಸುವ ಮತ್ತು ಬದುಕಿನ ಜೀವನಾಡಿಯಾಗಿಸುವ ನಿಟ್ಟಿನಲ್ಲಿ ನಾವು ನವಂಬರ್‍ಗೆ ಮಾತ್ರ ಕನ್ನಡಿಗರಾಗದೇ, ವರ್ಷಪೂರ್ತಿ ಕನ್ನಡಿರಾಗಿರುವುದು ಮುಖ್ಯ. ಪ್ರಾರಂಭದಲ್ಲಿಯೇ ವರ್ಷವಿಡೀ ಕಾರ್ಯಕ್ರಮ ಕಷ್ಟವೆನಿಸಿದರೆ, ಕನಿಷ್ಠ ನವಂಬರ್ ತಿಂಗಳ ಕಾರ್ಯಕ್ರಮಗಳಿಗೊಂದು ಕಾರ್ಯಸೂಚಿ ಇಟ್ಟುಕೊಳ್ಳಬಹುದೇ ಎಂಬುದು ಮುಖ್ಯವಾದ ವಿಷಯ ನಮಗೆ ತಿಳಿದಿರುವಂತೆ ನವಂಬರ್ ಮುಗಿದ ನಂತರ ನಮ್ಮಲ್ಲಿನ ಭಾಷಾ ಪ್ರೇಮ ಕ್ರಮೇಣವಾಗಿ ಕಡಿಮೆಯಾಗುತ್ತಾ ನಿಧಾನವಾಗಿ ಮುಂದಿನ ನವಂಬರ್ 1ರವರೆಗೆ ಹಳ್ಳ ಸೇರುತ್ತದೆ. ವರ್ಷದಲ್ಲಿ ಉಳಿದ ಹನ್ನೊಂದು ತಿಂಗಳುಗಳಿರುವುದು ನಮಗೆ ಮರೆತೇ ಹೋಗಿದೆ. ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶಿಕ್ಷಣ ಸಂಯೋಜಕ ಜ್ಞಾನೇಶ್, ಶಿಕ್ಷಕರುಗಳಾದ ರವಿ, ಮಮತಾ, ದಾಕ್ಷಾಯಿಣಿ, ರೂಪ, ಪುರುಷೋತ್ತಮ್, ಮೋಸಸ್, ನಾಗೇಂದ್ರ, ಶಂಕರ್, ದಯಾನಂದ, ಹೇಮಚಂದ್ರ, ವೇಣು ಭಾಗವಹಿಸಿದ್ದರು.