ಕನ್ನಡ ಭಾಷೆ ಉತ್ತುಂಗಕ್ಕೆ ಕೊಂಡೊಯ್ಯಲು ಕರೆ

ತುಮಕೂರು, ನ. ೫- ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಗೆ ಮಹತ್ವದ ಸ್ಥಾನವಿದ್ದು, ನಮ್ಮ ಭಾಷೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವತ್ತ ಕನ್ನಡಿಗರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ. ಎಂ.ಆರ್. ಹುಲಿನಾಯ್ಕರ್ ಹೇಳಿದರು.
ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ರಾಜ್ಯದ ಸಾಂಸ್ಕೃತಿಕ, ಪಾರಂಪರಿಕ ವೈಭವವನ್ನು ಉಳಿಸಿ, ಬೆಳೆಸಿ ಪೋಷಿಸುವ ಮತ್ತು ಉನ್ನತೀಕರಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ನಮ್ಮ ಕನ್ನಡ ಬಾವುಟ ಬಣ್ಣದ ಸಂಕೇತ ಅರಿಶಿನ ಮತ್ತು ಕುಂಕುಮವಾಗಿದೆ. ಅರಿಶಿನ ಶಾಂತಿ ಮಂತ್ರ ನೀಡಿದರೆ, ಕುಂಕುಮ ಕ್ರಾಂತಿಯ ಸಂಕೇತವಾಗಿದೆ. ಕನ್ನಡ ರಾಜ್ಯೋತ್ಸವ ಆಚರಣೆ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯಾಚರಣೆ ದಿನವಾಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಸಜ್ಜಾಗಬೇಕು ಎಂದರು.
ಶ್ರೀದೇವಿ ವೈದ್ಯಕೀಯ ಅಧೀಕ್ಷಕರಾದ ಡಾ.ಚೆನ್ನಮಲ್ಲಯ್ಯ ಮಾತನಾಡಿ, ಕನ್ನಡ ಭಾಷೆಯು ಕೇವಲ ಭಾಷೆಯಲ್ಲ, ಅದೊಂದು ನಾಡಿನ ಜನತೆಯ ಜೀವನ ಕ್ರಮ. ಸಾಂಸ್ಕೃತಿಕ ಮತ್ತು ಪರಂಪರೆಯ ಪ್ರತೀಕವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಕನ್ನಡಿಗರೂ ಕನ್ನಡ ಭಾಷೆಯನ್ನು ಉಳಿಸಿ ಮತ್ತು ಬೆಳೆಸಲು ಸಂಕಲ್ಪ ಮಾಡಬೇಕು. ಜಗತ್ತಿನ ಭಾಷೆಗಳಿಂತಲೂ ಕನ್ನಡ ಭಾಷೆಯು ವೈಜ್ಞಾನಿಕ ಮತ್ತು ಕ್ರಮಬದ್ಧ ಭಾಷೆಯಾಗಿದೆ ಎಂದರು.
ಕನ್ನಡದ ಕಂಪನ್ನು ದೇಶ ವಿದೇಶಗಳಲ್ಲಿಯೂ ಪಸರಿಸುವ ಕೆಲಸ ಎಲ್ಲರದಾಗಲಿ, ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯವನ್ನು ಉತ್ತುಂಗಕ್ಕೇರಿಸಿ ನಾಡು, ನುಡಿ ಜಲಕ್ಕಾಗಿ ಶ್ರಮಿಸಿದ ಮಹನೀಯರನ್ನು ಸ್ಮರಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ಹೇಳಿದರು.
ಶ್ರೀದೇವಿ ವೈದ್ಯಕೀಯ ನಿರ್ದೇಶಕರಾದ ಡಾ.ರಮಣ್ ಆರ್. ಹುಲಿನಾಯ್ಕರ್, ಡಾ.ಲಾವಣ್ಯ, ಶ್ರೀದೇವಿ ಚಾರಿಟಬಲ್ ಟ್ರಸ್ಟ್‌ನ ಅಂಬಿಕಾ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶ್ರೀದೇವಿ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್.ಪಾಟೀಲ್ ಮಾತನಾಡಿ, ಕನ್ನಡದ ರತ್ನತ್ರಯರರಾದ ಪಂಪ, ಪೊನ್ನ, ರನ್ನರವನ್ನು ಸ್ಮರಿಸುತ್ತಾ, ಕರ್ನಾಟಕದಂತಹ ಭವ್ಯ ನಾಡಿನಲ್ಲಿ ವಾಸಿಸುತ್ತಿರುವ ನಾವು ನಮ್ಮ ನಾಡಿನ ಏಳ್ಗೆಗೆ ದುಡಿದ ಮಹನೀಯರನ್ನು ಜ್ಞಾಪಿಸಿಕೊಂಡು ನಾಡಿನ ಇತಿಹಾಸ, ಸಂಸ್ಕೃತಿಯನ್ನು ಮೆಲುಕು ಹಾಕಿದ ಅವರು, ರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವುದು ನಮ್ಮೆಲ್ಲರ ಸೌಭಾಗ್ಯ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿದ್ದು, ಆಡಳಿತ ಭಾಷೆಯಾಗಿ ಕನ್ನಡವನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಡಿ.ಕೆ.ಮಹಾಬಲರಾಜು, ಉಪಪ್ರಾಂಶುಪಾಲರಾದ ಡಾ.ರೇಖಾಗುರುಮೂರ್ತಿ, ಶ್ರೀದೇವಿ ಮ್ಯಾರ್ಕೆಟಿಂಗ್ ಮ್ಯಾನೇಜರ್ ಪಿ.ಸತೀಶ್, ಶ್ರೀದೇವಿ ಶುಶ್ರೂಷಕ ಅಧೀಕ್ಷಕರಾದ ಆರ್.ಆನಂದ್, ಬಯೋಮೆಡಿಕಲ್ ಇಂಜಿನಿಯರ್ ಕಾಂತರಾಜು, ಸೂಪರ್‍ವೈಸರ್ ಪುನೀತ್‌ನಾಯಕ್, ಮಾರುತಿ ಪ್ರಸಾದ್, ಆಕರ್ಶ್ ಮತ್ತಿತರರು ಉಪಸ್ಥಿತರಿದ್ದರು.