ಕನ್ನಡ ಭಾಷೆ ಅನ್ನದ ಭಾಷೆಯಾಗಬೇಕು : ಗುರುಶಾಂತ ಶಿವಾಚಾರ್ಯರು

ವಿಜಯಪುರ:ಮೇ.6: ಕನ್ನಡ ಭಾಷೆ ಶ್ರೀಮಂತವಾಗಿದೆ ಅಲ್ಲದೇ ಮಾತೃಭಾಷೆಯಾಗಿ ಓದುತ್ತಿದ್ದೇವೆ ಆದರೆ ಇದನ್ನು ಅನ್ನದ ಭಾಷೆಯಾಗಿ ಕಡ್ಡಾಯ ಮಾಡುವ ಅಗತ್ಯತೆ ಇದೆ ಎಂದು ಬೊಮ್ಮನಹಳ್ಳಿಯ ಗವಿಮಠದ ಗುರುಶಾಂತ ಶಿವಾಚಾರ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಆಯೋಜಿಸಿದ್ದ 109ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಗುರುಶಾಂತ ಸ್ವಾಮೀಜಿ ಅವರು ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಮೂರು ಪ್ರಕಾರಗಳಲ್ಲಿ ಎತ್ತರೆತ್ತರಕ್ಕೆ ಬೆಳೆಯಲು ಆಯಾ ಸಂದರ್ಭದಲ್ಲಿ ಕನ್ನಡದ ಅಭಿರುಚಿವುಳ್ಳ ರಾಜರು ಹಾಗೂ ಸರ್ಕಾರಗಳು ಉತ್ತೇಜನ ನೀಡಿದ್ದರಿಂದಲೇ ಕನ್ನಡ ಅಸ್ತಿತ್ವದಲ್ಲಿ ಉಳಿದುಕೊಂಡಿದೆ. ನಾಲ್ವಡಿ ಕೃಷ್ಣರಾಜ ಒಡೆಯರು ತಮ್ಮ ಆಡಳಿತದ ಅವಧಿಯಲ್ಲಿ ದಿವಾನರಾದ ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ಅವರ ಆಸಕ್ತಿಯಿಂದ ಬೆಳೆದು ಬಂದ ಕನ್ನಡ ಸಾಹಿತ್ಯ ಪರಿಷತ್ತಿನ ಚರಿತ್ರೆ ಉಳಿದುಕೊಂಡಿದೆ ಎಂದರು.
ಸಿದ್ಧೇಶ್ವರ ತರಬೇತಿ ಸಂಸ್ಥೆ ವಿಜಯಪುರದ ಮುಖ್ಯಸ್ಥರಾದ ಸುರೇಶ ಜತ್ತಿ ಉಪನ್ಯಾಸ ನೀಡಿ ಕವಿಗಳು, ವಿಮರ್ಶಕರು, ಲೇಖಕರು, ಚಿಂತಕರು ಮುಂತಾದವರ ಶ್ರಮದಿಂದ ಸಾಹಿತ್ಯ ಪರಿಷತ್ತು ತನ್ನ ಮೌಲ್ಯವನ್ನು ಕಾಪಾಡಿಕೊಂಡಿದೆ. ಕಾರ್ಮಿಕರ, ಕುಟುಂಬದ, ಆಡಳಿತದ, ಅನ್ನದ ಭಾಷೆಯಾಗಿರುವ ಕನ್ನಡ ಭಾಷೆ ನಮ್ಮೆಲ್ಲರಿಗೂ ಹೆಮ್ಮೆ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಶ್ರೇಷ್ಠ ರಾಜ್ಯ ನಮ್ಮ ಕರ್ನಾಟಕ. ನಮ್ಮ ಭಾಷೆ ಅನೇಕ ಭಾಷೆಗಳ ಜೊತೆಗೆ ತುಲನೆ ಮಾಡಿದಾಗ ಕನ್ನಡ ಮೇಲ್ಪಂಕ್ತಿಯಲ್ಲಿ ಬರುತ್ತದೆ. ಭಾಷೆಗೆ ಜಾತಿ, ಮತ, ಪಂಥ ಕಟ್ಟಳೆಗಳಿಲ್ಲ. ವಿಶಾಲವಾದ ಕರ್ನಾಟಕದಲ್ಲಿ ಹಾಗೂ ಸುತ್ತಮುತ್ತಲಿನ ರಾಜ್ಯಗಳಲ್ಲಿ ದೇಶಗಳಲ್ಲಿ ಕನ್ನಡದ ಕೃಷಿ ನಿರಂತರವಾಗಿ ಜರುಗುತ್ತಿರುವುದು ನಮಗೆ ಹೆಮ್ಮೆ ಎಂದರು.
ತಾಲೂಕು ಘಟಕದ ಅಧ್ಯಕ್ಷರಾದ ಡಾ. ಆನಂದ ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರ ಮುಂದಾಲೋಚನೆಯ ಕೊಡುಗೆ ಕನ್ನಡ ಸಾಹಿತ್ಯ ಪರಿಷತ್ತು. ಶತಮಾನಗಳನ್ನು ದಾಟಿದ ಕನ್ನಡ ಸಾಹಿತ್ಯ ಪರಿಷತ್ತು ನಾಡಿನಲ್ಲಿ ಭಾಷೆ ಉಳಿಯಲು ಸಾವಿರಾರು ಕನ್ನಡದ ಅಭಿಮಾನಿಗಳ ಶ್ರಮವಿದೆ. ವಚನ ಸಾಹಿತ್ಯ ಮತ್ತು ಜಾನಪದ ಸಾಹಿತ್ಯ ಕನ್ನಡ ಸಾಹಿತ್ಯದ ಮೂಲ ಎಂದರು. ಆಕಾಶವಾಣಿ ವಿಜಯಪುರದ ನಿವೃತ್ತ ಅಭಿಯಂತರರಾದ ಬಸವರಾಜ ವಂಟಗೋಡಿ ಮಾತನಾಡಿದರು. ರವಿ ಕಿತ್ತೂರ ಮುಖ್ಯ ಅತಿಥಿ ಸ್ಥಾನ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಸಿಂಪೀರ ವಾಲೀಕಾರ ಅಧ್ಯಕ್ಷತೆಯನ್ನು ವಹಿಸಿದ್ದರು. ನಗರ ಘಟಕದ ಅಧ್ಯಕ್ಷೆ ಸಂಗೀತಾ ಮಠಪತಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಕೆ ಸುನಂದಾ ಪ್ರಾರ್ಥಿಸಿದರು.
ಪದಾಧಿಕಾರಿ ಅಭಿಷೇಕ ಚಕ್ರವರ್ತಿ ಸ್ವಾಗತಿಸಿ ಪರಿಚಯಿಸಿದರು. ರಾಜೇಸಾಬ ಶಿವನಗುತ್ತಿ ವಂದಿಸಿದರು. ವಿಜಯಲಕ್ಷ್ಮಿ ಕವಲಗಿ, ಅರ್ಜುನ ಶಿರೂರ, ಅಹಮ್ಮದ್ ವಾಲೀಕಾರ, ಎಸ್ ಎಲ್ ಇಂಗಳೇಶ್ವರ, ರೋಹಿಣಿ ಜತ್ತಿ, ಬಸವರಾಜ ಕುಂಬಾರ, ಕೆ ಜಿ ಕೋಟ್ಯಾಳ, ಗೀತಾ ಕುಲಕರ್ಣಿ, ಶಿವಾನಂದ ಶಿಂಹಾಸನಮಠ, ಪರಶುರಾಮ ಬಗಲಿ, ಮಲ್ಲಿಕಾರ್ಜುನ ಬಿರಾದಾರ, ಕಾಶಿನಾಥ ಹೊಸೂರ, ಎಂ ಬಿ ಸಿಂಧೆ, ಪ್ರದೀಪ ನಾಯ್ಕೋಡಿ ಮುಂತಾದವರು ಉಪಸ್ಥಿತರಿದ್ದರು.