ಕನ್ನಡ ಭಾಷೆಯ ಪಾವಿತ್ರ್ಯತೆಯನ್ನು ಉಳಿಸಿ ಬೆಳೆಸಿ

ಗೌರಿಬಿದನೂರು.ನ೧೩: ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದು ಬದುಕು ಸಾಗಿಸುತ್ತಿರುವ ನಾವೆಲ್ಲರೂ ಶಿಸ್ತು ಮತ್ತು ಸಂಯಮದಿಂದ ಇಲ್ಲಿನ ನೆಲ, ಜಲ, ಭಾಷೆಯನ್ನು ಪ್ರೀತಿಸುವ ಜತೆಗೆ ಅದನ್ನು ಉಳಿಸಿ ಬೆಳೆಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕರ್ನಾಟಕ ಸಂಪಾದಕರ ಹಾಗೂ ವರದಿಗಾರರ ಸಂಘದ ಅಧ್ಯಕ್ಷರಾದ ಎ.ಎಸ್.ಜಗನ್ನಾಥ್ ತಿಳಿಸಿದರು.
ತಾಲ್ಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಪ್ರತಿಯೊಬ್ಬರೂ ತಮ್ಮ ವ್ಯಕ್ತಿಯ ಜತೆಗೆ ವ್ಯಕ್ತಿತ್ವದ ಮೌಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಬೇಕಿದೆ. ಇದರಿಂದ ನಾಡು, ನುಡಿ, ನೆಲ, ಜಲವನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಇರುತ್ತದೆ. ನೆರೆಯ ಆಂಧ್ರಪ್ರದೇಶದ ತೆಲುಗು ಭಾಷೆಯ ಪ್ರಭಾವದಿಂದ ಗಡಿಭಾಗದಲ್ಲಿ ಕನ್ನಡಕ್ಕೆ ಯಾವುದೇ ತೊಂದರೆಯಾಗದಂತೆ ಯುವಕರು ಗಮನಹರಿಸಬೇಕಾಗಿದೆ. ಬರೆಯುವ ಅಕ್ಷರ, ಮಾತನಾಡುವ ಭಾಷೆ ಎಂದಿಗೂ ಕಲ್ಮಶವಾಗದಂತೆ ಜಾಗರೂಕರಾಗಬೇಕು. ಮುಂದಿನ ದಿನಗಳಲ್ಲಿ ಭಾಷೆಯ ಮಹತ್ವವನ್ನು ಅರಿತು ಬಾಳುವ ಜತೆಗೆ ಇಲ್ಲಿನ ಸಂಸ್ಕೃತಿ ಮತ್ತು ನಾಗರೀಕತೆಯ ಪರಂಪರೆಯನ್ನು ಉಳಿಸಬೇಕಾಗಿದೆ ಎಂದು ಹೇಳಿದರು.
ಯುವ ಸಾಹಿತಿ ಮಂಜುನಾಥ್ ಮಾತನಾಡಿ, ಯುವ ಪೀಳಿಗೆಯು ರಾಷ್ಟ್ರದ ಸಂಪತ್ತಾಗಿದ್ದು, ಅವರ ಪ್ರಾಮಾಣಿಕ ಪ್ರಯತ್ನದಿಂದ ರಾಷ್ಟ್ರ ಹಾಗೂ ರಾಜ್ಯದಲ್ಲಿ ಕನ್ನಡ ಭಾಷೆಯ ಪ್ರಾಮುಖ್ಯತೆಯನ್ನು ಉಳಿಸಿ, ಬಳಸಿ ಬೆಳೆಸುವ ಪ್ರಯತ್ನಕ್ಕೆ ಮುಂದಾಗಬೇಕಾಗಿದೆ. ಎಲ್ಲೆ ಇದ್ದರೂ ನಾಡಿನ ಭಾಷೆಯ ಬಗ್ಗೆ ಗೌರವ ತೋರಿ ಇತರರಿಗೂ ಇದರ ಮಹತ್ವವನ್ನು ತಿಳಿಸುವುದು ವಿದ್ಯಾರ್ಥಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಜಿಟಿಟಿಸಿ ಕೇಂದ್ರದ ವ್ಯವಸ್ಥಾಪಕರಾದ ಸಿ.ತಿಪ್ಪೇಸ್ವಾಮಿ ಮಾತನಾಡಿ, ಶಾಲಾ ಕಾಲೇಜು ಹಂತದಿಂದಲೇ ವಿದ್ಯಾರ್ಥಿಗಳು ನಾಡಿನ ಮಹತ್ವ ಹಾಗೂ ಭಾಷೆಯ ಪ್ರತಿನಿಧ್ಯತೆಯ ಬಗ್ಗೆ ತಿಳಿಯುವುದು ಅವಶ್ಯಕವಾಗಿದೆ. ತಾಂತ್ರಿಕ ವಿದ್ಯಾಸಂಸ್ಥೆಯಲ್ಲಿ ಮೊದಲ ಬಾರಿಗೆ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುವ ಮೂಲಕ ರಾಜ್ಯದ ಗಡಿಭಾಗದಲ್ಲಿ ಕನ್ನಡದ ಕಂಪನ್ನು ಪಸರಿಸುವ ಪ್ರಯತ್ನ ಮಾಡಲು ಮುಂದಾಗಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ, ಸೇರಿದಂತೆ ವಿವಿಧ ಕ್ರೀಡಾಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನವನ್ನು ವಿತರಣೆ ಮಾಡಿ ಅಭಿನಂಧಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವದ ಮಹತ್ವವನ್ನು ತಿಳಿಸುವ ಜತೆಗೆ ಕೆಲವು ಹಾಡುಗಳನ್ನು ಪ್ರಸ್ತುತ ಪಡಿಸಿದರು.
ಇದೇ ವೇಳೆ ಕಾಲೇಜಿನ ಉಪನ್ಯಾಸಕರಾದ ಪಣೀಂದ್ರ, ಚೈತ್ರ, ಮಂಜುಳಾ, ಸೋನಿಯಾ, ಪ್ರಸನ್ನ, ಶ್ರೀನಿವಾಸ್, ದರ್ಶನ್, ರಾಜೇಶ್, ಉಪೇಂದ್ರ ಭಾಗವಹಿಸಿದ್ದರು.