ಕನ್ನಡ ಬೆಳೆಸುವುದು ಕನ್ನಡಿಗರ ಕರ್ತವ್ಯ

ಹುಳಿಯಾರು, ನ. ೩- ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ಕನ್ನಡಿಗರಾದ ನಮ್ಮ ಕರ್ತವ್ಯವಾಗಿದ್ದು, ಕನ್ನಡಿಗರೆಲ್ಲರೂ ಕನ್ನಡದಲ್ಲಿಯೇ ಇತರ ಭಾಷಿಕರೊಂದಿಗೆ ಮಾತನಾಡುವ ಮೂಲಕ ಕನ್ನಡ ಬೆಳೆಸಬೇಕಿದೆ ಎಂದು ತಾ.ಪಂ. ಸದಸ್ಯ ಹೆಚ್.ಎನ್. ಕುಮಾರ್ ಹೇಳಿದರು.
ಹುಳಿಯಾರಿನ ಕರವೇ ಸರ್ಕಲ್‌ನಲ್ಲಿ ಡಾ.ರಾಜಕುಮಾರ್ ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಿದ್ದ ೬೫ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯಾವುದೇ ಭಾಷೆಯ ಬಳಕೆ ಕಡಿಮೆಯಾದರೆ ಆ ಭಾಷೆಯ ಅವನತಿ ಆರಂಭವಾಗುತ್ತದೆ. ಹಾಗಾಗಿ ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ. ಅದು ಕನ್ನಡ ಎನ್ನುವಂತೆ ಜ್ಞಾನ ಮತ್ತು ವ್ಯವಹಾರಿಕ ದೃಷ್ಠಿಯಿಂದ ಎಷ್ಟು ಭಾಷೆಯನ್ನಾದರೂ ಕಲಿಯಿರಿ. ಆದರೆ ಕನ್ನಡ ಭಾಷೆಯನ್ನು ಹೆಚ್ಚು ಬಳಸುವ ಮೂಲಕ ಇತರ ಭಾಷಿಕರೂ ಕನ್ನಡ ಕಲಿಯುವಂತ ವಾತಾವರಣ ನಿರ್ಮಾಣ ಮಾಡಿ ಎಂದರು.
ಬೆಸ್ಕಾಂ ಶಾಖಾಧಿಕಾರಿ ಉಮೇಶ್‌ನಾಯ್ಕ ಮಾತನಾಡಿ, ಬ್ರಿಟಿಷ್ ಸರ್ಕಾರವು ಮೈಸೂರು ಸಂಸ್ಥಾನವನ್ನು ಮಾತ್ರ ಉಳಿಸಿ ಇತರ ಕರ್ನಾಟಕದ ಪ್ರದೇಶಗಳನ್ನು ಮರಾಠ, ತೆಲುಗು ಮತ್ತು ತಮಿಳು ರಾಜ್ಯಗಳಿಗೆ ಹಂಚಿದ್ದರು. ಭಾಷೆಯ ಆಧಾರದ ಮೇಲೆ ಪ್ರಾಂತಗಳ ಪುನರ್ ರಚನೆಯಾಗಬೇಕು ಎಂಬ ಹಲವು ದಶಕಗಳ ಹೋರಾಟದ ಫಲ ೧೯೫೬ ಕರ್ನಾಟಕ ರಾಜ್ಯ ಉದಯವಾಯಿತು. ಈ ನೆನಪಿಗಾಗಿ ನವೆಂಬರ್ ೧ ರಂದು ರಾಜ್ಯೋತ್ಸವ ಆಚರಿಸುತ್ತಾ ಬಂದಿದ್ದೇವೆ. ಈ ಸಂದರ್ಭದಲ್ಲಿ ಕರ್ನಾಟಕಕ್ಕಾಗಿ ಹೋರಾಡಿದ ಮಹಾನೀಯರನ್ನು ನೆನಪಿಸುವ ಜತೆಗೆ ಕನ್ನಡ ನಾಡು, ನುಡಿ, ಜಲದ ಉಳಿವಿಗಾಗಿ ಸಂಕಲ್ಪ ತೊಡಬೇಕಿದೆ ಎಂದರು.
ಎಎಸ್‌ಐ ಆನಂದಪ್ಪ ಮಾತನಾಡಿ, ಕನ್ನಡಿಗರ ಸಂಭ್ರಮ ಸಡಗರಗಳನ್ನು ಕೊರೊನಾ ಮಹಾಮಾರಿ ಈ ವರ್ಷ ಕಿತ್ತುಕೊಂಡಿದೆ. ಮುಂದಿನ ವರ್ಷ ಅದ್ದೂರಿಯಾಗಿ ಆಚರಿಸಬೇಕೆಂದಿದ್ದರೆ ಕೊರೊನಾ ಸರಪಳಿಯನ್ನು ತುಂಡರಿಸಿ ಕೊರೊನಾ ಮುಕ್ತ ದೇಶವನ್ನಾಗಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಅನಾವಶ್ಯಕವಾಗಿ ಓಡಾಡುವುದನ್ನು ಬಿಡಬೇಕಿದೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಪಿ.ಬಿ. ನಂದವಾಡಗಿ, ರಂಗಕರ್ಮಿ ಶಾನಬೋಗರು ರಾಜಣ್ಣ, ಡಾ. ರಾಜಕುಮಾರ್ ಅಭಿಮಾನಿಗಳ ಬಳಗದ ಟೀ ಅಂಗಡಿ ಪರಪ್ಪ, ಹೊನ್ನಪ್ಪ, ಕಂಪನಹಳ್ಳಿ ರಂಗಸ್ವಾಮಿ, ಎಚ್.ಕರಿಯಪ್ಪ, ಆಚಾರ್ ರಾಜಣ್ಣ, ಶಿಕ್ಷಕ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.