
ಕಲಬುರಗಿ:ಡಿ.31:ಕನ್ನಡ ಉಳಿಸಲು ಮತ್ತು ಬೆಳೆಸಲು ಕನ್ನಡ ಪತ್ರಿಕೋದ್ಯಮದ ಪಾತ್ರ ಮಹತ್ವದ್ದಾಗಿದೆ. ಗೋಕಾಕ ಚಳುವಳಿಯ ವರದಿಯಿಂದ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯಿತು ಎಂದು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಟಿ.ವಿ. ಶಿವಾನಂದನ್ ಅಭಿಪ್ರಾಯಪಟ್ಟರು
ಶರಣಬಸವ ವಿಶ್ವವಿದ್ಯಾಲಯದ ಕನ್ನಡ ಹಾಗೂ ಇಂಗ್ಲೀಷ್ ಅಧ್ಯಯನ ವಿಭಾಗಗಳ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕು. ಶಿವಾನಿ ಎಸ್. ಅಪ್ಪಾ ಹಾಗೂ ಕು. ಕೋಮಲ ಎಸ್. ಅಪ್ಪಾರವರ 11ನೇ ಜನ್ಮದಿನೋತ್ಸವದ ಪ್ರಯುಕ್ತ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ-2020ರ ಹಿನ್ನೆಲೆಯಲ್ಲಿ ‘ಅನ್ಯಜ್ಞಾನ ಶಿಸ್ತುಗಳು ಮತ್ತು ಕನ್ನಡ’ ಎಂಬ ವಿಷಯದ ಬಗ್ಗೆ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ(ವೆಬಿನಾರ್)ದಲ್ಲಿ ಮೊದಲನೇಯ ಗೋಷ್ಠಿಯನ್ನುದ್ದೇಶಿಸಿ ‘ಕನ್ನಡ ಮತ್ತು ಪತ್ರಿಕೋದ್ಯಮ’ ಎಂಬ ವಿಷಯದ ಬಗ್ಗೆ, ಮಾತನಾಡಿದ ಅವರು, ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಹಳ್ಳಿಯ ಕಟ್ಟ ಕಡೆಯ ವ್ಯಕ್ತಿಗೂ ಮಾಹಿತಿ ಒದಗಿಸುವಂತಹ ಮಹತ್ವದ ಮತ್ತು ಜವಬ್ದಾರಿಯುತ ಕಾರ್ಯ ಕನ್ನಡ ಪತ್ರಿಕೆಗಳು ನಿರ್ವಹಿಸಿದ್ದವು ಎಂದರು.
ವಿಜಯಸÀಂಕೇಶ್ವರರು ಕನ್ನಡ ಪತ್ರಿಕೋದ್ಯಮಕ್ಕೆ ಒಂದು ವರದಾನವಾಗಿದ್ದಾರೆ. ಕಡಿಮೆ ಬೆಲೆಯಲ್ಲಿ ಓದುಗರಿಗೆ ಪತ್ರಿಕೆಗಳನ್ನು ಒದಗಿಸುವದರಿಂದ ಕನ್ನಡ ಪತ್ರಿಕೆಗಳ ಓದುಗರ ಸಂಖ್ಯೆ ಹೆಚ್ಚಿಸಿದರು. ಈ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದರು. ಇವುಗಳ ಹಾದಿಯಲ್ಲಿ ನಾಡೋಜ, ಪ್ರಪಂಚ, ಸಂಯುಕ್ತ ಕರ್ನಾಟಕ, ಪ್ರಜಾವಾಣಿ ಪತ್ರಿಕೆಗಳು ಕರ್ನಾಟಕದಲ್ಲಿ ಕನ್ನಡ ಬೆಳೆಯಲು ಸಹಕಾರಿಯಾಗಿವೆ ಎಂದರು.
ಟಿ.ವಿ. ಶಿವಾನಂದನ್ ಮಾತುಗಳನ್ನು ಮುಂದುವರೆಸುತ್ತಾ, ಕನ್ನಡ ಭಾಷೆ ಶ್ರೀಮಂತವಾಗಿದೆ. ಕನ್ನಡ ಸಾಹಿತ್ಯ ಕ್ಷೇತ್ರ ತನ್ನ ಮುಡಿಗೇರೆಸಿಕೊಂಡಿದ್ದ ಹೆಚ್ಚಿನ ಜ್ಞಾನಪೀಠ ಪ್ರಶಸ್ತಿಗಳೇ ಇದಕ್ಕೆ ಉದಾಹರಣೆಯಾಗಿವೆ ಎಂದು ಹೇಳಿದರು.
ವಿವಿ ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರೀ ತಮ್ಮ ಆಶಯ ನುಡಿಗಳಲ್ಲಿ, ಬಂಗಾಳಿ, ಹಿಂದಿ, ತಮಿಳು, ಕನ್ನಡ ಸಾಹಿತ್ಯ ಎಲ್ಲ ಭಾಷೆಗಳಿಗೆ ಅನುವಾದಗೊಂಡಾಗ, ಮಾತ್ರ ಅದು ಶ್ರೇಷ್ಠಸಾಹಿತ್ಯವಾಗುತ್ತದೆ. ಅನುವಾದದಿಂದ ಎಲ್ಲ ಧರ್ಮದ ಅರಿವು ಮೂಡಿಸಲು ಸಾಧ್ಯವಾಗುತ್ತದೆ ಎಂದರು.
ಭಾಷಾಂತರ ಇತ್ತಿಚಿಗೆ ಕಡಿಮೆಗೊಳ್ಳುತ್ತಿದೆ. ಉದಯೋನ್ಮುಖ ಸಾಹಿತಿಗಳು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳ ಬೇಕು. ಈ ಮೂಲಕ ಕನ್ನಡ ಸಾಹಿತ್ಯ ಶ್ರೀಮಂತಗೊಳ್ಳಲು ಸಾಧ್ಯ ಎಂದರು.
ಕುವೆಂಪು ಕನ್ನಡ ಅಧ್ಯಯನ ಕೇಂದ್ರ, ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಆರ್.ವಿ.ಎಸ್.ಸುಂದರಮ್ ಅವರು, ಎರಡನೇಯ ಗೋಷ್ಠಿಯನ್ನುದ್ದೇಶಿಸಿ ‘ಕನ್ನಡ ಮತ್ತು ಭಾಷಾಂತರ’ ಎಂಬ ವಿಷಯದ ಬಗ್ಗೆ ಮಾತಾಡಿದ ಅವರು, ಕನ್ನಡ ಭಾಷೆ ಸಮರ್ಥವಾಗಿದೆ. ಯಾವುದೇ ಭಾಷೆಯನ್ನು ಅನುವಾದ ಮಾಡುವಾಗ ಆಯಾ ಸಾಹಿತ್ಯದ ಭಾಷೆಯ ಮೂಲಕ್ಕೆ ಇಳಿದು ಭಾಷಾಂತರಿಸೇಕು. ಆಗ ಮಾತ್ರ ಸಾಹಿತ್ಯದಲ್ಲಿ ಗಟ್ಟಿತನ ಉಳಿಸಲು ಸಾಧ್ಯವಾಗುತ್ತದೆ ಎಂದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಅಶ್ವಿನಿ ಎಸ್.ರೆಡ್ಡಿ ಅವರು ಮೂರನೇಯ ಗೋಷ್ಠಿಯಲ್ಲಿ ‘ಕನ್ನಡ ಮತ್ತು ಗಣಕಯಂತ್ರ’ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದ್ದ ಅವರು, ಸ್ನಾತಕೋತ್ತರ ಶಿಕ್ಷಣ ಮುಗಿಸಿದ ನಂತರ ಕಂಪ್ಯೂಟರ್ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಗಣಕಯಂತ್ರ ಮತ್ತು ತಂತ್ರಜ್ಞಾದ ಕಲಿಕೆಯಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಡಾ. ಎಲೆನೋರ ಗೀತಮಾಲಾ, ಸಮಾರೋಪ ಸಮಾರಂಭದ ಬಗ್ಗೆ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಎಮ್.ಎಸ್.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಚಿದಾನಂದ ಚಿಕ್ಕಮಠ ಕಾರ್ಯಕ್ರಮ ನಿರೂಪಿಸಿದರು. ಡಾ ಸಾರೀಕಾದೇವಿ ಕಾಳಗಿ ಸ್ವಾಗತಿಸಿದರು. ಡಾ. ನಾನಾಸಾಹೇಬ್ ಹಚ್ಚಡದ ವಂದಿಸಿದರು.