ಕನ್ನಡ ಬಿಟ್ಟು, ಅನ್ಯ ಭಾಷೆ ಬಳಕೆ ಖಂಡನೀಯ

ಕೋಲಾರ,ಮಾ,೯- ಕೋಲಾರ ಜಿಲ್ಲೆಯ ವಿವಿಧ ತಾಲೂಕುಗಳ ಜನಪ್ರತಿನಿಧಿಗಳು ಕನ್ನಡ ಭಾಷೆಯನ್ನು ಬಿಟ್ಟು, ತೆಲಗು, ತಮಿಳು ಭಾಷೆಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗ ಸಭೆಗಳಲ್ಲಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಬಳಕೆ ಮಾಡುತ್ತಿರುವುದನ್ನು ಗಮನಿಸುತ್ತಿದ್ದೇವೆ. ಅವರು ಯಾವ ರಾಜ್ಯದಲ್ಲಿ ಇದ್ದೇವೆ ಎಂಬುದನ್ನು ಮರೆತಿದ್ದಾರೆ ಎಂಬ ಭಾವನೆ ವ್ಯಕ್ತವಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲತಾಬಾಯಿ ಮಾಡಿಕ್ ಕಳವಳ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೋಲಾರ ಜಿಲ್ಲೆಯು ಆಂದ್ರ, ತಮಿಳುನಾಡು ರಾಜ್ಯಗಳ ಗಡಿಯಲ್ಲಿದೆ. ಇಲ್ಲಿ ತೆಲಗು, ತಮಿಳು ಭಾಷೆಗಳು ಕನ್ನಡದ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲಿನವರು ಏನು ಕನ್ನಡವನ್ನು ಬಳಕೆ ಮಾಡುವುದಿಲ್ಲ. ಇಲ್ಲಿನವರು ತಮ್ಮ ತೆವಲಿಗೆ ಬಳಕೆ ಮಾಡುವುದನ್ನು ಬಿಟ್ಟು ಕನ್ನಡವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಒತ್ತಾಯಿಸಿದರು.
ಶ್ರೀನಿವಾಸಪುರ ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ, ಮಾಲೂರು ಶಾಸಕರಾದ ಕೆ.ವೈ.ನಂಜೇಗೌಡ, ಬಂಗಾರಪೇಟೆ ಶಾಸಕರಾದ ಎಸ್.ಎನ್.ನಾರಾಯಣಸ್ಟಾಮಿ ಕೋಲಾರ ಶಾಸಕ ಕೊತ್ತೂರು ಮಂಜುನಾಥ ಹಾಗೂ ಕೆಜಿಎಫ್ ಶಾಸಕರಾದ ರೂಪಕಲಾ ಅವರು ಕನ್ನಡಕ್ಕೆ ಅಪಮಾನ ಮಾಡುವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಈ ಹಿಂದೆ ವೇದಿಕೆಯ ಕಾರ್ಯಕ್ರಮದಲ್ಲಿ ಶಾಸಕರಾಗಿ ಭಕ್ತವತ್ಸಲಂ ಗಣ್ಯರಾಗಿ ಪಾಲ್ಗೊಂಡಿದ್ದಾಗ ತಮಿಳು, ಕನ್ನಡ ಮಿಶ್ರಿತ ಭಾಷೆಯಲ್ಲಿ ಭಾಷಣ ಮಾಡಿದ್ದರು. ಆ ಸಂದರ್ಭದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಪ್ರತಿರೋಧ ವ್ಯಕ್ತಪಡಿಸಿ ಕನ್ನಡದಲ್ಲಿ ಮಾತನಾಡಿ ಎಂದು ಒತ್ತಾಯಿಸಿದ್ದರು. ಇದಕ್ಕೆ ಭಕ್ತವತ್ಸಲಂ ತಮಿಳು ಕಲಿತು ಕೆಜಿಎಫ್‌ಗೆ ಬರುವಂತೆ ನಾರಾಯಣಗೌಡರಿಗೆ ತಿಳಿಸಿದ್ದರು. ಇದಕ್ಕೆ ಬೆಂಗಳೂರಿಗೆ ಬನ್ನಿ ಕನ್ನಡ ಕಲಿಸುತ್ತೆವೆ ಎಂದು ತಾಕೀತು ಮಾಡಿದ್ದರು. ಅದರಂತೆ ಭಕ್ತವತ್ಸಲಂ ವಿಧಾನಸೌಧದ ಬಳಿಗೆ ಬಂದು ನಾರಾಯಣಗೌಡರಿಗೆ ದೂರವಾಣಿ ಕರೆ ಮಾಡಿ ಬೆಂಗಳೂರಿಗೆ ಬಂದಿದ್ದೆನೆ ಬನ್ನಿ ಎಂದು ಆಹ್ವಾನ ನೀಡಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ್ದ ನಾರಾಯಣಗೌಡರು ಹೋರಾಟ ಕೈಗೆತ್ತಿಕೊಂಡು ಭಕ್ತವತ್ಸಲಂ ಕನ್ನಡ ಕಲಿಯುವಂತೆ ಮಾಡಿದರು. ಜೊತೆಗೆ ಕೆಜಿಎಫ್‌ನಲ್ಲಿ ಆಗ ೧೦೩ ತಮಿಳು ಶಾಲೆಗಳು ಇದ್ದನ್ನು ಮುಚ್ಚಿಸಿದರು.
ಇತ್ತೀಚಿಗೆ ಕೆಜಿಎಫ್‌ನಲ್ಲಿ ನಡೆದ ಗಣಿ ಕಾರ್ಮಿಕರಿಗೆ ಸ್ವಾಧೀನ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಶಾಸಕರಾದ ರೂಪಕಲಾ ಅವರು ತಮಿಳು ನಾಡಿನಲ್ಲಿ ಭಾಷಣ ಮಾಡಿದ್ದು ಅಲ್ಲದೆ, ಅಧಿಕಾರಿಗಳು ಸಹ ತಮಿಳು ಭಾಷೆಯಲ್ಲಿ ಮಾತನಾಡಲು ತಾಕೀತು ಮಾಡಿದ್ದರು. ವರ್ತನೆಯನ್ನು ಬದಲಾಯಿಸಿಕೊಂಡು ರೂಪಕಲಾ ಅವರು ಕನ್ನಡದಲ್ಲಿ ಭಾಷಣ ಮಾಡುವುದನ್ನು ಕಲಿಯಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಶೇ.೬೦ರಷ್ಟು ಜಾಹೀರಾತು, ಖಾಸಗಿ ಅಂಗಡಿ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯವಾಗಿ ಬಳಕೆ ಮಾಡಲು ಕರ್ನಾಟಕ ರಕ್ಷಣಾ ವೇದಿಕೆಯಿಂದ ಹೋರಾಟ ನಡೆಯುತ್ತಿದೆ. ಇದರ ಜೊತೆಗೆ ಜನಪ್ರತಿನಿಧಿಗಳು ಅನ್ಯ ಭಾಷೆಯ ಭಾಷಣವನ್ನು ಬದಲಾಯಿಸಿ ಕೊಳ್ಳಬೇಕು. ಇಲ್ಲದಿದ್ದರೆ ನೀವು ಸಹ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.