ರಾಯಚೂರು,ಅ.೨೬- ಕನ್ನಡ ಬಾವುಟಕ್ಕೆ ಸರ್ಕಾರದಿಂದ ಮಾನ್ಯತೆ ನೀಡಬೇಕು ಎಂದು ಮಾನವಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಮೊಹಮ್ಮದ್ ಮುಜೀಬ್ ಒತ್ತಾಯಿಸಿದರು.
ಅವರಿಂದು ನಗರದ ಪತ್ರಿಕಾ ಭವದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,
ನಮ್ಮ ರಾಜ್ಯವು ೧೯೫೬ ರಲ್ಲಿ ಏಕೀಕರಣಗೊಂಡು ಮೈಸೂರು ರಾಜ್ಯವೆಂದು,ನಂತರ ೧೯೭೩ ರಲ್ಲಿ ನವೆಂಬರ್ ೧ ರಂದು ಅಂದಿನ ಮುಖ್ಯಮಂತ್ರಿ ದೇವರಾಜ್ ಅರಸು ಅವರ ನೇತೃತ್ವದಲ್ಲಿ ಕರ್ನಾಟಕ ಎಂದು ಮರುನಾಮಕರಣಗೊಂಡು ಇಂದಿಗೆ ೫೦ ನೇ ವರ್ಷದ ಸಂಭ್ರಮಾಚರಣೆಯಲ್ಲಿ ಇದ್ದೇವೆ. ಇಲ್ಲಿವರೆಗೆ ಸಮಸ್ತ ಕನ್ನಡಿಗರು ನವೆಂಬರ್ ೧ ರ ದಿನವನ್ನು ಕನ್ನಡದ ಹಬ್ಬವೆಂದು ಸಡಗರ ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದೇವೆ, ಆದರೆ ಇಂದಿಗೂ ಕನ್ನಡ ಧ್ವಜಕ್ಕೆ ಸರಕಾರದಿಂದ ಮಾನ್ಯತೆ ಸಿಕ್ಕಿಲ್ಲವೆಂಬುದು ನಮಗೆಲ್ಲಾರಿಗೂ ನೋವಿನ ಸಂಗತಿಯಾಗಿದೆ. ಕನ್ನಡದ ಧ್ವಜಕ್ಕೆ ಮಾನ್ಯತೆ ಸಿಕ್ಕರೆ ಅದೊಂದು ಇತಿಹಾಸವಾಗಲಿದೆ. ಕರ್ನಾಟಕದಲ್ಲಿ ಈಗ ಇರುವ ಹಳದಿ ಮತ್ತು ಕೆಲವು ಬಣ್ಣದ ಬಾವುಟಕ್ಕೆ ಸಂವಿಧಾನಾತ್ಮಕ ಮಾನ್ಯತೆ ಸಿಗುವಂತೆ ಮಾಡುತ್ತೇನೆಂದು ಈ ಹಿಂದೆ ತಾವು ಮುಖ್ಯಮಂತ್ರಿಗಳಾಗಿದ್ದಾಗ ಸಭೆಯೊಂದರಲ್ಲಿ ಹೇಳಿದ್ದರು. ಈ ಹಿಂದೆ ಒಂಬತ್ತು ಜನರ ಸಮಿತಿ ಸಲ್ಲಿಸಿದ ಕೆಂಪು, ಬಿಳಿ, ಹಳದಿಯಾಗಲಿ ಅಥವಾ ಈಗಾಗಲೇ ಕನ್ನಡಿಗರು ಒಪ್ಪಿಕೊಂಡಿರುವಂತಹ ಹಳದಿ ಮತ್ತು ಕೆಂಪು ಬಣ್ಣದ ಧ್ವಜ ಆಗಲಿ, ಒಟ್ಟಾರೆಯಾಗಿ ಕನ್ನಡಿಗರಿಗೆ ಸರಕಾರದಿಂದ ಮಾನ್ಯತೆ ಪಡೆದ ಧ್ವಜ ಬೇಕಾಗಿದೆ ಎಂದರು.
ಸಾಹಿತಿಗಳಾದ ಚಂದ್ರಶೇಖರ್ ಪಾಟೀಲ್, ವಾಟಾಳ್ ನಾಗರಾಜ್, ಕೆಂಗಲ್ ಹನುಮಂತಯ್ಯ, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಎಸ್. ನಿಜಲಿಂಗಪ್ಪ ಸೇರಿದಂತೆ ಎಲ್ಲಾ ಸಾಹಿತಿಗಳ, ತಜ್ಞರ ಅಭಿಪ್ರಾಯದಂತೆ ರಾಜ್ಯವೊಂದು ಪ್ರತ್ಯೇಕ ಧ್ವಜ ಹೊಂದುವುದರಲ್ಲಿ ತಪ್ಪಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ಅಭಿಪ್ರಾಯ ಸಮಸ್ತ ಕನ್ನಡಿಗರ ಒಕ್ಕೊರಲ್ಲಿನ ಅಭಿಪ್ರಾಯವೂ ಆಗಿದೆ. ಈ ಸುವರ್ಣ ಸಂಧರ್ಬದಲ್ಲಿ ತಮ್ಮ ಅಧಿಕಾರವಧಿಯಲ್ಲಿ ಮತ್ತು ತಾವು ಒಬ್ಬ ಕನ್ನಡದ ಕಟ್ಟಾಳು ಆಗಿರುವುದರಿಂದ ಸಮಸ್ತ ಕನ್ನಡಿಗರ ಹೆಮ್ಮೆಯ ಬಾವುಟಕ್ಕೆ ಸರಕಾರದಿಂದ ಮಾನ್ಯತೆ ಸಿಗುವಂತೆ ಮಾಡಿ ೬ ಕೋಟಿ ಕನ್ನಡಿಗರು ಜನಮಾನಸದಲ್ಲಿ ಅಜರಾಮರರಾಗಿ ಉಳಿಯುವಿರೆಂದು ನಾವು ಭಾವಿಸಿದ್ದೇವೆ, ಆದಷ್ಟು ಬೇಗ ತಾವುಗಳು ಕನ್ನಡ ಧ್ವಜಕ್ಕೆ ಮಾನ್ಯತೆ ಸಿಗುವಂತೆ ಮಾಡಬೇಕೆಂದು ಸಮಸ್ತ ಕನ್ನಡಿಗರ ಪರವಾಗಿ ಮತ್ತು ಹಲವು ಸಂಘಟನೆಗಳ ಬೆಂಬಲವಾಗಿ ಮುಖ್ಯಮಂತ್ರಿಗಲ್ಲಿ ಮನವಿ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಭೀಮನಗೌಡ ಇಟಗಿ, ಕೆ. ನರಸಪ್ಪ,ಅಮರಗುಂಡಪ್ಪ, ಬಾಲಾಸಿಂಗ್ ಸೇರಿದಂತೆ ಇತರರು ಉಪಸ್ಥಿತರಿದ್ದರು.