ಸಂಜೆವಾಣಿ ವಾರ್ತೆ
ದಾವಣಗೆರೆ.ಜು.4;ಕರ್ನಾಟಕ ಕರಾವಳಿ ಜಿಲ್ಲೆಗಳ ಐತಿಹಾಸಿಕ ಪರಂಪರೆಯ ಪುರಾಣದ ವಿಶ್ವವಿಖ್ಯಾತ ಅಪ್ಪಟ ಜನಪದ ಆರಾಧನಾ ಕಲೆ ಕನ್ನಡ ನಾಡು-ನುಡಿಯನ್ನು ವಿಶ್ವವ್ಯಾಪ್ತಿಯಲ್ಲಿ ವೈಭವೀಕರಿಸಿದ ಏಕೈಕ ಆರಾಧನ ಕಲೆ ಯಕ್ಷಗಾನ. ಈ ದೈವೀಕಲೆ ಕೇವಲ ಮನರಂಜನೆಯ ಪ್ರದರ್ಶನಕ್ಕೆ ಸೀಮಿತವಾಗದೇ ಪೂಜನೀಯ ಸಂಸ್ಕೃತಿ, ವಾಣಿಜ್ಯನಗರಿ ದಾವಣಗೆರೆಯಲ್ಲಿ ಕಳೆದ ನಾಲ್ಕು ದಶಕಗಳಿಂದ ಈ ಯಕ್ಷಗಾನವನ್ನು ಪರಿಚಯಿಸಿದ ಕಲಾಕುಂಚ, ಯಕ್ಷರಂಗಗಳ ಸಂಸ್ಥಾಪಕರೂ, ಯಕ್ಷಗಾನ ಹವ್ಯಾಸಿ ಕಲಾವಿದರಾದ ಸಾಲಿಗ್ರಾಮ ಗಣೇಶ್ ಶೆಣೈಯವರ ಕಠಿಣ ಪರಿಶ್ರಮದ ಸಾಧನೆ ಶ್ಲಾಘನೀಯ ಎಂದು ದಾವಣಗೆರೆಯ ಯಕ್ಷರಂಗದ ಅಧ್ಯಕ್ಷರಾದ ಮಲ್ಯಾಡಿ ಪ್ರಭಾಕರ ಶೆಟ್ಟಿ ಯವರು ತಮ್ಮ ಅಭಿಮತ ವ್ಯಕ್ತಪಡಿಸಿದರು. ನಗರದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ದಾವಣಗೆರೆಯ ಸವಿಡೈನ್ ಮಹೇಶ್ ಶೆಟ್ಟಿ ಗೆಳೆಯರ ಬಳಗ ಮತ್ತು ಪ್ರೇರಣಾ ಯುವ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಡೆದ ಉಡುಪಿ ಜಿಲ್ಲೆಯ ಮಂದರ್ತಿಯ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ “ಶಿವಧೂತ ಪಂಜುರ್ಲಿ” ಕಥಾನಕದ ಯಕ್ಷಗಾನ ಪ್ರದರ್ಶನವನ್ನು ಚಂಡೆ ಬಾರಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರೇರಣಾ ಯುವ ಸಂಸ್ಥೆಯ ಅಧ್ಯಕ್ಷರಾದ ಎಸ್.ಟಿ.ವೀರೇಶ್, ದಾವಣಗೆರೆ ಜಿಲ್ಲಾ ಕ್ರೀಡಾಕೂಟಗಳ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ, ಕರಾವಳಿ ಜಿಲ್ಲೆಗಳ ನಡೂರಿನ ಖ್ಯಾತ ಯಕ್ಷಗಾನ ಭಾಗವತರಾದ ಕೊಕ್ಕರ್ಣೆ ಸದಾಶಿವ ಅಮೀನ್, ಕಲಾಕುಂಚ ಸಾಂಸ್ಕೃತಿಯ ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ಮಾತನಾಡಿ ಯಕ್ಷಗಾನ ನಮ್ಮ ನಾಡಿನ ಹೆಮ್ಮೆಯ ಕಲೆ. ಅದು ಕೇವಲ ಕರಾವಳಿ ಜಿಲ್ಲೆಗಳಿಗೆ ಸೀಮಿತವಾಗದೇ ಹೊರ ನಾಡುಗಳಲ್ಲೂ ದೇಶ ವಿದೇಶಗಳಲ್ಲೂ ವ್ಯಾಪ್ತಿಯಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ದಾವಣಗೆರೆಯ ಯಕ್ಷರಂಗ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ಪ್ರಾಸ್ತಾವನೆಯಾಗಿ ಮಾತನಾಡಿ, ಸವಿಡೈನ್ ಮಹೇಶ್ ಶೆಟ್ಟಿ ಗೆಳೆಯರ ಬಳಗ ಮತ್ತು ಪ್ರೇರಣಾ ಯುವ ಸಂಸ್ಥೆಯ ಸಹಯೋಗದಲ್ಲಿ ದಾವಣಗೆರೆಯ ಶಿವಯೋಗಿ ಮಂದಿರದ ಹೊರಾಂಗಣದಲ್ಲಿ “ಶಿವಧೂತ ಗೂಳಿಗ” ಮೊಟ್ಟ ಮೊದಲ ಉಚಿತ ನಾಟಕ ಪ್ರದರ್ಶನ ಅತ್ಯಂತ ಯಶಸ್ವಿಯಾಗಿ ಅಭೂತಪೂರ್ವ ಯಶಸ್ಸು ಸಾಧಿಸಿದ್ದು ಒಂದು ದಾಖಲೆ ಎಂದು ಹೇಳಿ ಯಕ್ಷಗಾನದ ಸಂಪ್ರದಾಯದ ಪರಂಪರೆಯನ್ನು ವಿವರಿಸಿದರು. ಶ್ರೀಮತಿ ಶೀಲಾ ರವೀಚಂದ್ರನಾಯಕ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಶ್ರೀಮತಿ ಶೈಲಾ ವಿನೋದ್ ದೆವರಾಜ್‌ರವರು ಸ್ವಾಗತಿಸಿ ಅಚ್ಚುಕಟ್ಟಾಗಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.ಅತ್ಯದ್ಭುತ ಚಿತ್ತಾಕರ್ಷಕವಾದ “ಶಿವಧೂತ ಪಂಜುರ್ಲಿ” ಕಥಾನಕದ ಯಕ್ಷಗಾನ ಪ್ರದರ್ಶನವು ಕಿಕ್ಕಿರಿದು ಸೇರಿದ ಪ್ರೇಕ್ಷಕರ ಹೃನ್ಮನ ತಣಿಸಿತು.