ಕನ್ನಡ ನಾಡು-ನುಡಿ ಉಳಿಸಿದ ಮಹನೀಯರನ್ನು ಸ್ಮರಿಸೋಣ

ಧಾರವಾಡ,ನ7 : ಮುತ್ತು ರತ್ನಗಳನ್ನು ಪೇಟೆಯಲ್ಲಿಟ್ಟು ಮಾರಾಟ ಮಾಡಿದ ಶ್ರೀಮಂತ ಕನ್ನಡ ನಾಡನ್ನು ಹಾಗೂ ಬಹಳ ಸಿಹಿಯಾದ ನಮ್ಮ ಕನ್ನಡ ಭಾಷೆಯನ್ನು ಉಳಿಸಿದ ಉನ್ನತ ವ್ಯಕ್ತಿತ್ವದ ಮಹನೀಯರನ್ನು ಕೇವಲ ನವ್ಹೆಂಬರ್ ತಿಂಗಳಿಗೆ, ಅದರಲ್ಲೂ ಕೇವಲ ಒಂದನೇ ದಿನಾಂಕಕ್ಕೆ ಸೀಮಿತಗೊಳಿಸಿ ಸ್ಮರಣೆ ಮಾಡದೇ ನಿತ್ಯವೂ ಸ್ಮರಿಸೋಣ ಎಂದು ಹಿರಿಯ ನ್ಯಾಯವಾದಿ ಅರುಣ ಚರಂತಿಮಠ ಹೇಳಿದರು.
ಅವರು ಇಲ್ಲಿಯ ಕಾಮನಕಟ್ಟಿ ಬಳಿ ಇರುವ ಶ್ರೀಮತಿ ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಶಾಲಾ ಮಕ್ಕಳ ಕನ್ನಡ ನಾಡು-ನುಡಿಯ ಹಿರಿಮೆಯನ್ನೊಳಗೊಂಡ ಸಾಂಸ್ಕøತಿಕ ಸೌರಭ' ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಕರ್ನಾಟಕದ ಏಕೀಕರಣಕ್ಕಾಗಿ ನಮ್ಮ ಧಾರವಾಡದ ನೆಲದಿಂದ ಪ್ರಾರಂಭವಾದ ಹೋರಾಟವನ್ನು ಮತ್ತು ಇದರಲ್ಲಿ ಕೊಡುಗೆ ನೀಡಿದ ಪ್ರತಿಯೊಬ್ಬರನ್ನು ಕರ್ನಾಟಕದ ಪ್ರಜೆಗಳು ಯಾವಗಲೂ ಸ್ಮರಿಸಬೇಕು ಎಂದೂ ಅವರು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಸಾಹಿತಿ ನವೀನ್‍ಶಾಸ್ತ್ರಿ ಪುರಾಣಿಕ ಮಾತನಾಡಿ, ಇಂದಿನ ಪೀಳಿಗೆಗೆ ಹೊಸ ಹೊಸ ತಂತ್ರಜ್ಞಾನದೊಂದಿಗೆ ಸಂಸ್ಕಾರವನ್ನು ಬೆಳೆಯಿಸುವಂತಹ ಪ್ರಯತ್ನಗಳು ಆಗಬೇಕು. ನಮ್ಮ ನಾಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆ ನಿರಂತರವಾಗಿ ಮುಂದುವರೆಯಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದೊಟ್ಟಿಗೆ ವಿದ್ಯಾರ್ಥಿಗಳು ನಮ್ಮ ನೆಲದ ಸಂಸ್ಕøತಿ-ಸಂಸ್ಕಾರವನ್ನು ಅರಿತುಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ಆಕರ್ಷಕ ಹಾಡು, ಭಾಷಣ ನೃತ್ಯಗಳ ಮೂಲಕ, ಜೊತೆಗೆ ಕನ್ನಡ ನಾಡಿನ ಹೆಮ್ಮೆಯ ನೇತಾರರ ವೇಷಭೂಷಣ ಧರಿಸಿ ಕನ್ನಡ ಭಾಷಾಭಿಮಾನ ಹಾಗೂ ನಾಡಿನ ಘನತೆಯನ್ನು ಅಭಿವ್ಯಕ್ತಗೊಳಿಸಿದರು. ಕನ್ನಡದ ವರನಟ ಡಾ. ರಾಜ್‍ಕುಮಾರ್ ಅವರು ಹಾಡಿದಹುಟ್ಟಿದರೇ ಕನ್ನಡನಾಡಲ್ಲಿ ಹುಟ್ಟಬೇಕು’ ಹಾಡಿಗೆ ಸಂಯೋಜಿಸಿದ್ದ ಲೇಜಿಮ್ ಕವಾಯತು ಎಲ್ಲರ ಗಮನಸೆಳೆಯಿತು.
ಆಪ್ತಸಮಾಲೋಚಕ ಅಮಿತ್‍ಕುಮಾರ, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಪಾಲಕರು, ಶಿಕ್ಷಕ ಸಿಬ್ಬಂದಿ ಇದ್ದರು. ಸೋಮೇಶ ಗಂಗಣ್ಣವರ ವಂದಿಸಿದರು.