ಕನ್ನಡ ನಾಡು-ನುಡಿಯ ಪುನರಜ್ಜೀವನಕ್ಕೆ ಬಿ.ಎಂ.ಶ್ರೀ ಕೊಡುಗೆ ಅವಿಸ್ಮರಣೀಯ

ಕಲಬುರಗಿ: ಜ.7:ನವೋದಯ ಕನ್ನಡ ಸಾಹಿತ್ಯದ ಆಚಾರ್ಯ ಪುರುಷ ಬಿ.ಎಂ.ಶ್ರೀಕಂಠಯ್ಯನವರು ಪ್ರತಿಭಾವಂತ ಅಧ್ಯಾಪಕರು, ಸಾಹಿತಿಗಳು, ವಿದ್ವಾಂಸರು, ಅನುವಾದಕರು, ಉತ್ತಮ ಆಡಳಿತಾಧಿಕಾರಿಗಳು, ಕನ್ನಡ ನಾಡಿನ ಚರಿತ್ರೆಯಲ್ಲಿ ಸ್ಮರಣೀಯರು. ಕನ್ನಡ ಸಾಹಿತ್ಯದಲ್ಲಿ ಜನತೆಯ ಆಸಕ್ತಿಯನ್ನು ಮೂಡಿಸುವಲ್ಲಿ ಶ್ರಮಿಸಿದವರಲ್ಲಿ ಪ್ರಮುಖರು. ಕನ್ನಡ ಸಾಹಿತ್ಯವನ್ನು ಜನರ ಬಳಿಗೆ ತೆರಳಿ ಮುಟ್ಟಿಸುವಲ್ಲಿ ಪಾತ್ರ ವಹಿಸಿದ್ದಾರೆ. ಕನ್ನಡ ಸಾಹಿತ್ಯ, ನಾಡು-ನುಡಿಯ ಪುನರಜ್ಜೀವನಕ್ಕೆ ಬಿ.ಎಂ.ಶ್ರೀ ಅವರ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.

 ನಗರದ ಆಳಂದ ರಸ್ತೆಯ ಜೆ.ಆರ್.ನಗರದಲ್ಲಿರುವ 'ಕೊಹಿನೂರ ಕಂಪ್ಯೂಟರ ತರಬೇತಿ ಕೇಂದ್ರ'ದಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಶುಕ್ರವಾರ ಸಂಜೆ ಏರ್ಪಡಿಲಾಗಿದ್ದ 'ಬಿ.ಎಂ.ಶ್ರೀಕಂಠಯ್ಯನವರ ಜನ್ಮದಿನಾಚರಣೆ, ಸ್ಮರಣೋತ್ಸವ' ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
      ತಮ್ಮ 'ಇಂಗ್ಲೀಷ್ ಗೀತೆಗಳು' ಎಂಬ ಗ್ರಂಥದ ಮೂಲಕ ಇಂಗ್ಲೀಷ್ ಭಾಷೆಯಲ್ಲಿರುವ ಅನೇಕ ಅಂಶಗಳನ್ನು ಕನ್ನಡಕ್ಕೆ ತರುವ ಮೂಲಕ, ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಶ್ರೀಯುತರ ಕೃತಿಗಳು ಗಾತ್ರದಲ್ಲಿ ಚಿಕ್ಕವಾದರೂ ತೂಕದಲ್ಲಿ ದೊಡ್ಡವು. ಹೊಸಗನ್ನಡದ ಕವಿತೆಯ ಕಣ್ಣು ತೆರಯುವಂತೆ ಮಾಡಿದವರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಮಹಿಳಾ ಶಾಖೆಯ ಆರಂಭ, ಕನ್ನಡ ಬಾವುಟ ಪ್ರಕಟಣೆ, ಕನ್ನಡ ಅಣುಗ, ಕನ್ನಡ ಕಾವ, ಕನ್ನಡ ಜಾಣ ಪರೀಕ್ಷೆಗಳ ಪ್ರಾರಂಭಿಸಿ ಕನ್ನಡ ಸಾಹಿತ್ಯವನ್ನು ಶಾಲಾ-ಕಾಲೇಜುಗಳಲ್ಲಿ ಓದಲಾರದವರಿಗೆ ಓದುವಂತೆ ಮಾಡಿದ ಕೀರ್ತಿ ಬಿ.ಎಂ.ಶ್ರೀ. ಅವರಿಗೆ ಸಲ್ಲುತ್ತದೆ. 'ರಾಜಸೇವಾಸಕ್ತ' ಬಿರುದಾಂಕಿತ ಶ್ರೀಯುತರು, ಕಲಬುರಗಿಯಲ್ಲಿ 1928ರಲ್ಲಿ ಜರುಗಿದ 14ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಎಂದು ಹೇಳಿದರು.
 ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಸತೀಸ್ ಟಿ.ಸಣಮನಿ, ಶಿಕ್ಷಕ ದತ್ತು ಹಡಪದ, ಪ್ರಮುಖರಾದ ದೇವೇಂದ್ರಪ್ಪ ಗಣಮುಖಿ, ಬಸಯ್ಯಸ್ವಾಮಿ ಹೊದಲೂರ, ಶಿವಯೋಗಪ್ಪ ಬಿರಾದಾರ, ರಾಹುಲ್, ಆದರ್ಶ, ಸಿದ್ದರಾಮ, ಪ್ರದೀಪ, ಪರಮಾನಂದ, ಶ್ರೀಶೈಲ್, ಅನಿತ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.