
ಅಫಜಲಪುರ: ನ.2:ಕನ್ನಡ ನಾಡು ನುಡಿಯ ಅಭಿಮಾನ ಎಲ್ಲರಲ್ಲೂ ಬರಬೇಕು ಹಾಗೂ ನಾಡಿನ ಶ್ರೇಯೋಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು
ಎಂದು ಶಾಸಕ ಎಂ.ವೈ.ಪಾಟೀಲ್ ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತ ವತಿಯಿಂದ ನಡೆದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕರ್ನಾಟಕ ಎಂಬ ಹೆಸರಿಗೆ 2 ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡದ ಅಸ್ಮಿತೆ, ಭಾಷಾ ಪ್ರೇಮದ ದನಿ ಎಲ್ಲೆಡೆ ಜಾಗೃತಗೊಂಡಿದೆ. ಹಾಗೂ ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳು ಕನ್ನಡದಲ್ಲೇ ಬರುವಂತಾಗಬೇಕು ಎಂದ ಅವರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.
ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ ಸಂಜೀವಕುಮಾರ ದಾಸರ ಮಾತನಾಡುತ್ತಾ, ನಾವೆಲ್ಲರೂ ಮೊದಲು ಇಂಗ್ಲಿಷ್ ವ್ಯಾಮೋಹದಿಂದ ಹೊರಬಂದು ಕನ್ನಡ ಬೆಳೆಸಬೇಕು. ನಮ್ಮ ಕನ್ನಡ ನಾಡನ್ನು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಬೆಯ ನಾಡು ಎಂಬೆಲ್ಲ ಹೆಸರುಗಳಿಂದ ಕರೆಯಲಾಗುತ್ತದೆ. ಈ ಸುಂದರ, ಸಮೃದ್ಧ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಅದೃಷ್ಟ ಎಂದರು.
ತಹಶೀಲ್ ಕಚೇರಿಯಿಂದ ಹೊರಟ ಕನ್ನಡಾಂಬೆಯ ಮೆರವಣಿಗೆಯಲ್ಲಿ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪ್ರಥಮ ದರ್ಜೆ ಕಾಲೇಜಿನ ಕಾರ್ಯಕ್ರಮದ ವೇದಿಕೆಗೆ ತಲುಪಿತು. ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ವಿಶೇಷ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾಣಿಕರಾವ್ ಕುಲಕರ್ಣಿ, ಎಚ್.ಎಸ್.ಗಡಗಿಮನಿ, ರಮೇಶ ಸುಲ್ಪಿ , ಡಾ.ರವಿ ಪಾಟೀಲ್, ವಿಜಯಮಹಾಂತೇಶ ಹೂಗಾರ, ಕೆ.ಎಂ.ಕೋಟೆ, ಉಮೇಶ ಆಲೇಗಾಂವ, ಸಂತೋಷ ಇಂಡಿ, ಸಂಜೀವಕುಮಾರ ಪಟ್ಟಣಕರ, ಪಿ.ಎಸ್.ಐ ಮಡಿವಾಳಪ್ಪ ಬಾಗೋಡಿ, ಪ್ರಕಾಶ ಜಮಾದಾರ, ಸಿದ್ದಾರ್ಥ ಬಸರಿಗಿಡ, ರಾಜಕುಮಾರ ಉಕ್ಕಲಿ, ಸುರೇಶ್ ಅವಟೆ, ಗುರುದೇವ ಪೂಜಾರಿ, ರಾಜಕುಮಾರ ಗುಣಾರಿ ಅನೇಕರಿದ್ದರು.