ಕನ್ನಡ, ನಾಡು ನುಡಿಗೆ ರಂಜಾನ್, ರಹಮಾನ್ ಕೊಡುಗೆ ಅಪಾರ

ಬೆಂಗಳೂರು, ನ.೪-ಕನ್ನಡ ನಾಡು, ನುಡಿಗಾಗಿ ರಂಜಾನ್ ಸಾಬ್ ಹಾಗೂ ರಹಮಾನ್ ಖಾನ್ ನೀಡಿರುವ ಕೊಡುಗೆ ಸದಾ ಸ್ಮರಣೀಯ. ಹೊಸ ಪೀಳಿಗೆಗೆ ಈ ಇಬ್ಬರು ಮಹನೀಯರ ಹಿನ್ನೆಲೆಯನ್ನು ಪರಿಚಯಿಸುವ ಕೆಲಸವನ್ನು ನಿರಂತರವಾಗಿ ಮಾಡಬೇಕಿದೆ ಎಂದು ಕನ್ನಡ ಶ್ರೀಸಾಮಾನ್ಯರ ಕೂಟದ ಅಧ್ಯಕ್ಷ ಶ್ರ.ದೇ.ಪಾರ್ಶ್ವನಾಥ್ ತಿಳಿಸಿದರು.
ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ ವತಿಯಿಂದ ಯಶವಂತಪುರದಲ್ಲಿರುವ ರಹಮಾನ್ ಖಾನ್ ರಸ್ತೆಯಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಏಕೀಕರಣಕ್ಕಾಗಿ ಹುತಾತ್ಮರಾದ ಏಕೈಕ ಕನ್ನಡಿಗ ರಂಜಾನ್ ಸಾಬ್, ಗೋಕಾಕ್ ಚಳವಳಿಯಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಿದ ಕನ್ನಡ ಹೋರಾಟಗಾರ ರಹಮಾನ್ ಖಾನ್ ಸ್ಮರಣೆ ಹಾಗೂ ಕನ್ನಡ ಸಂಸ್ಕೃತಿ ಉತ್ಸವವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಹಮದೀಯರ ಕನ್ನಡ ವೇದಿಕೆ ವತಿಯಿಂದ ರಂಜಾನ್ ಸಾಬ್ ಹಾಗೂ ರಹಮಾನ್ ಖಾನ್ ಹೆಸರಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣಕ್ಕಾಗಿ ನಮ್ಮ ಹಿರಿಯರು ಮಾಡಿರುವ ತ್ಯಾಗ, ಬಲಿದಾನ, ಪರಿಶ್ರಮವನ್ನು ನಾವು ಸ್ಮರಿಸಿಕೊಳ್ಳಬೇಕು. ಹಾಗೂ ಮುಂದಿನ ಪೀಳಿಗೆಗೂ ಪರಿಚಯಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆಯ ಅಧ್ಯಕ್ಷ ಸಮೀವುಲ್ಲಾ ಖಾನ್ ಮಾತನಾಡಿ, ಕೆಲವು ಬಂಡವಾಳಶಾಹಿ ಹೊರ ರಾಜ್ಯದವರ ತಂಡ ಇಲ್ಲಿರುವ ರಹಮಾನ್ ಖಾನ್ ರಸ್ತೆಯ ಫಲಕವನ್ನು ತೆರವುಗೊಳಿಸಲು ಸೂಚನೆ ಕೊಟ್ಟಿರುವ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಎಚ್ಚರಿಕೆ ನೀಡುವ ಕಾರ್ಯಕ್ರಮದ ಜೊತೆಗೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಆಯೋಜಿಸಿದ್ದೇವೆ ಎಂದರು.
ರಹಮಾನ್ ಖಾನ್ ರಸ್ತೆಗೆ ಚಿದಾನಂದಮೂರ್ತಿ, ಸಾ.ರಾ.ಗೋವಿಂದು, ವಾಟಾಳ್ ನಾಗರಾಜ್, ಅನಂತನಾಗ್, ರಘುಪತಿ ಅಡಿಗಲ್ಲು ಹಾಕಿದವರು. ಅವರು ಅಡಿಗಲ್ಲು ತೆರವುಗೊಳಿಸಲು ಮುಂದಾದರೆ ನೀವೆ ಅಲ್ಲಾಡಿ ಹೋಗುತ್ತೀರಾ ಎಂದು ಆ ಬಂಡವಾಳಶಾಹಿಗೆ ಎಚ್ಚರಿಕೆ ನೀಡಿದ್ದೇವೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಡಿವಿಜಿ ಗೆಳೆಯರ ಬಳಗದ ಅಧ್ಯಕ್ಷ ಜಗದೀಶ್ ಮುಳಬಾಗಿಲು, ಹಿರಿಯ ಕನ್ನಡ ಹೋರಾಟಗಾರ ಶೆ, ಬೋ ರಾಧಾಕೃಷ್ಣ, ಯಶವಂತಪುರ ಸ್ಪಂದನ ಸಂಘಟನೆಯ ಲಯನ್ ರಾಜಾ ನಂಜುಂಡಯ್ಯ ಮುನಿ ಕುಮಾರ್, ಪತ್ರಕರ್ತ ಎಡ್ವರ್ಡ್,ಯಶವಂತಪುರ ಜಾಮಿಯಾ ಮಸೀದಿಯ ಉಪಾಧ್ಯಕ್ಷ ಆಲಿ, ವೇದಿಕೆ ಉಪಾಧ್ಯಕ್ಷ ಶಹಜಹಾನ್, ಜಂಟಿ ಕಾರ್ಯದರ್ಶಿ ಸಾಗರ್ ಸಮೀವುಲ್ಲಾ, ಆರ್ ಆರ್ ನಗರ ವಿಧಾನಸಭಾ ಕ್ಷೇತ್ರ ಅಖಿಲ ಕರ್ನಾಟಕ ಮಹಮ್ಮದಿಯರ ವೇದಿಕೆ ಅಧ್ಯಕ್ಷ ದಸ್ತಗಿರ್, ವರ್ತಕರ ವಿಭಾಗದ ಸಂಚಾಲಕರಾದ ಅಜೀಂ ಮೊಹಮ್ಮದ್ ಫಕ್ರುದ್ದೀನ್, ಮತ್ತಿಕೆರೆ ಮಸೀದಿಯ ಆಡಳಿತ ಮಂಡಳಿಯ ಅಕ್ರಮ್ ಬಾಬು ಸಲೀಂ, ಶರೀಫ್ ನಗರದ ಮುಖಂಡರಾದ ಆಸಿಫ್ ಸಿದ್ದಿಕ್, ಗೌಸ್ ಖಾನ್ ಬೈತುಲ್ ಮಾಲ್ ಉಪಾಧ್ಯಕ್ಷ ಅಮೀರ್, ಯುವ ಘಟಕದ ಜಹೀರ್, ರಫೀಕ್ ರಾಹಿಲ್, ಶಭಾಸ್ , ವಕೀಲ ಮುಜ್ಜು ಸೇರಿದಂತೆ ಪ್ರಮುಖರಿದ್ದರು.