ಕನ್ನಡ ನಾಡಿನ ಸಮಗ್ರ ಅಭಿವೃದ್ಧಿಗೆ ಎಲ್ಲರು ಶ್ರಮಿಸೋಣ

ಕಲಬುರಗಿ: ನ.1:ಕನ್ನಡ ಭಾಷೆ, ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಭವ್ಯವಾದ ಇತಿಹಾಸವಿದೆ. ಕೇವಲ ಸರ್ಕಾರದ ಆದೇಶಗಳಿಂದ ಮಾತ್ರ ಕನ್ನಡ ಉಳಿದು, ಬೆಳೆಯುವುದಿಲ್ಲ. ಪ್ರತಿಯೊಬ್ಬರು ಕನ್ನಡದಲ್ಲಿ ಮಾತನಾಡುವ, ಬರೆಯುವ, ಓದುವ, ವ್ಯವಹರಿಸುವಂತಹ ಕನ್ನಡತನ ಪ್ರವೃತ್ತಿ ಮೈಗೂಡಿಸಿಕೊಂಡು, ಕನ್ನಡ ಭಾಷೆ, ಸಾಹಿತ್ಯ, ನೆಲ, ಜಲ, ಸಂಸ್ಕøತಿ, ಭವ್ಯ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕಾದದ್ದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದ್ದು, ನಾಡಿನ ಸಮಗ್ರ ಅಭಿವೃದ್ಧಿಗೆ ಎಲ್ಲರು ಶ್ರಮಿಸೋಣ ಎಂದು ಪ್ರಾಂಶುಪಾಲ ಮೊಹ್ಮದ್ ಅಲ್ಲಾವುದ್ದೀನ ಸಾಗರ ಹೇಳಿದರು.

ಜೇವರ್ಗಿ ಪಟ್ಟಣದ ಬಸವೇಶ್ವರ ಚೌಕ್ ಹತ್ತಿರವಿರುವ ‘ಸರ್ಕಾರಿ ಪಿಯು ಕಾಲೇಜು’, ‘ಸರ್ಕಾರಿ ಪ್ರೌಢಶಾಲೆ’, ‘ಮೌಲಾನಾ ಆಜಾದ ಪ್ರೌಢಶಾಲೆ’ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ’67ನೇ ಕನ್ನಡ ರಾಜ್ಯೋತ್ಸವ’ದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ, ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

   ಮುಖ್ಯ ಶಿಕ್ಷಕ ಮಹೇಶಕುಮಾರ ಚಿಂಚೋಳಿ, ಸಹ ಶಿಕ್ಷಕ ಸದ್ದಾಮ್ ಅವರು ಮಾತನಾಡಿದರು. ವಿದ್ಯಾರ್ಥಿಗಳಿಂದ ಭಾಷಣ, ಗಾಯನ ಜರುಗಿತು. ಭಾರತಾಂಬೆ, ಕನ್ನಡಾಂಬೆ, ಸ್ವಾತಂತ್ರ್ಯ ಹೋರಾಟಗಾರರ ಮತ್ತು ದೇಶದ ಮಹನೀಯರ ವೇಷಭೂಷಣ ಧರಿಸಿ ಸಂಭ್ರಮಿಸಿದರು.
     ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಚಂದ್ರಪ್ರಭಾ ಕಮಲಾಪುರಕರ್, ರವೀಂದ್ರಕುಮಾರ ಬಟಗೇರಿ, ನಯಿಮಾ ನಾಹಿದ್, ಎಚ್.ಬಿ.ಪಾಟೀಲ, ಶಂಕ್ರೆಪ್ಪ ಹೊಸದೊಡ್ಡಿ, ರೇಣುಕಾ ಚಿಕ್ಕಮೇಟಿ, ಅತಿಥಿ ಉಪನ್ಯಾಸಕಿ ಸಮೀನಾ ಬೇಗಂ, ಮುಖ್ಯ ಶಿಕ್ಷಕಿ ಲಕ್ಷ್ಮೀ ನಾಯಕ ಸೇರಿದಂತೆ ಕಾಲೇಜು, ಪ್ರೌಢಶಾಲೆ, ಮೌಲಾನಾ ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.