
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.11: ವೀರಶೈವ ಲಿಂಗಾಯತ ಸಮುದಾಯ ಕನ್ನಡನಾಡಿಗೆ ದೊಡ್ಡ ಕೊಡುಗೆ ನೀಡಿದೆಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ನಿನ್ನೆ ನಗರದ ಎಸ್ ಜಿ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ನಮ್ಮ ಜೀವನ ಪದ್ದತಿಗೆ ಉತ್ಕರ್ಷ ಪದ್ದತಿ ಇದೆ. ಇವತ್ತು ಈ ಪರಂಪರೆ ಬದಲಾವಣೆ ಆಗಿದೆ, ನಮ್ಮ ಸಮಾಜದ ಚಿಂತನೆಯಲ್ಲಿ ಬದಲಾವಣೆ ಆಗಿದೆ. ಯಾವುದೇ ಧರ್ಮ ಸಮಯವನ್ನು ಮೀರಿ ಕಾಲವನ್ನು ಮೀರಿ ತನ್ನ ಅಸ್ತಿತ್ವ ಉಳಿಸಿಕೊಳ್ಳ ಬೇಕು. ನಮ್ಮ ಸಮಾಜ ಈ ನಾಡಿಗೆ ಬಹು ದೊಡ್ಡ ಕೊಡುಗೆಯನ್ನು ನೀಡಿದೆ ಎಂದು ಹೇಳಿದರು.
ಈ ದೇಶದಕ್ಕೆ ಐದು ಸಾವಿರ ವರ್ಷಗಳ ಚರಿತ್ರೆ ಇದೆ.ವ ಚರಿತ್ರೆಯ ಜೊತೆಗೆ ಚಾರಿತ್ರ್ಯ ಇದ್ದರೆ ಮಾತ್ರ ದೇಶ ಬೆಳೆಯುತ್ತದೆ. ನಮ್ಮ ಮನೆಯಿಂದ ನಮ್ಮ ಚಾರಿತ್ರ್ಯ ಬೆಳೆಯುತ್ತದೆ. ನಮ್ಮ ಸಮಾಜಗಳ ನಡುವೆ ಸಾಮ್ಯತೆ ಬೇಕು, ಒಬ್ಬರು ಬೆಳೆಯುತ್ತಾರೆ ಎಂದಾಕ್ಷಣ ಇನ್ನೊಬ್ಬರ ಕಾಲು ಎಳೆಯುತ್ತಾರೆ. ಸಮಾಜಗಳ ನಡುವೆ ಸಮನ್ವಯತೆ ಬೇಕು, ಕೂಡಿ ಕೆಲಸ ಮಾಡಿದರೆ ಸಮಾಜ ಬೆಳೆಯುತ್ತವೆ. ಸಮಾಜ ಸಮಾಜಗಳ ನಡುವಿನ ಸಂಘರ್ಷ ಬಿಡಬೇಕು. ನಾವು ಈ ನಾಡಿನಲ್ಲಿ ಹುಟ್ಟಿದ್ದು ನಮ್ಮ ಪುಣ್ಯ, ಧರ್ಮ ಆಚರಣೆ, ವಿಚಾರ ವೈಶಾಲ್ಯತೆ ಇರುವ ಸಮಾಜದಲ್ಲಿ ನಾವು ಹುಟ್ಟಿದ್ದೆವೆ.
ಮುಂದಿನ ಸಮಾಜಕ್ಕೆ ಈ ಸಂಸ್ಕೃತಿಯನ್ನು ಉಳಿಸಿ ಕೊಡಬೇಕು.ಸಮಾಜವನ್ನು ಕಟ್ಟಿ ಬೆಳಸಲು ಯುವಕರು ಬರಬೇಕು. ಸಮಾಜ ನಿಂತ ನೀರಿನ ಹಾಗೆ ಆಗಬಾರದು. ಸಮಾಜದಲ್ಲಿ ಯುವಕರ ಪಾಲುದಾರಿಕೆ ಹೆಚ್ಚಾಗಬೇಕು. ಹಿರಿಯರಾದ ನಮ್ಮ ಮೇಲೆ ಸಮಾಜದ ಯುವಕರನ್ನು ಬೆಳೆಸುವ ಜವಾಬ್ದಾರಿ ಇದೆ ಎಂದರು.