ಕನ್ನಡ ನಾಡಿಗೆ ಪಾಪು ಕೊಡುಗೆ ಹಚ್ಚಹಸಿರು

ಧಾರವಾಡ,ಜ17 : ಕೆಚ್ಚೆದೆಯ ದಿಟ್ಟ ಕನ್ನಡ ಹೋರಾಟಗಾರ, ನೇರ ನಿರ್ಭಿಡೆಯ ಧೀಮಂತ ಪತ್ರಕರ್ತರಾಗಿದ್ದ ಡಾ. ಪಾಟೀಲ ಪುಟ್ಟಪ್ಪನವರ ಆದರ್ಶ ಬದುಕು ಸಮಸ್ತ ಕನ್ನಡಿಗರಿಗೆ ಮಾದರಿ ಎಂದು ಅಥಣಿ ವಿಮೋಚನಾ ಸಂಸ್ಥೆಯ ಅಧ್ಯಕ್ಷ ಬಿ. ಎಲ್. ಪಾಟೀಲ ಹೇಳಿದರು. ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರು 103 ನೇ ಜನ್ಮ ದಿನಾಚರಣೆ ನಿಮಿತ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಲಾ ಯಲಿಗಾರ, ಶ್ರೀನಿವಾಸ ವಾಡಪ್ಪಿ, ಡಾ. ಡಿ. ಎಂ. ಹಿರೇಮಠ, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಜಿ. ಆರ್. ತಮಗೊಂಡ ಅವರು, ಅಪಾರ ಸ್ಮರಣಶಕ್ತಿ ಹೊಂದಿದ್ದ ಪಾಪು ಚಲಿಸುವ ವಿಶ್ವಕೋಶವಾಗಿದ್ದರು. ಪಾಟೀಲ ಪುಟ್ಟಪ್ಪನವರು ಇಂದು ಭೌತಿಕವಾಗಿ ನಮ್ಮ ಮಧ್ಯದಲ್ಲಿ ಇಲ್ಲದಿದ್ದರೂ, ಕನ್ನಡ ನಾಡು, ನುಡಿಗಾಗಿ ಅವರು ಅವರು ಸಲ್ಲಿಸಿದ ಅಪಾರ ಸೇವೆ ಮತ್ತು ಕೊಡುಗೆ ಹಾಗೂ ಸಾಹಿತ್ಯದಿಂದ ಸದಾ ಹಚ್ಚಹಸಿರಾಗಿದ್ದಾರೆ. ತಮ್ಮ ನೇರ, ನಿಷ್ಟುರ ಮಾತುಗಳಿಂದ ಮನೆಮಾತಾಗಿದ್ದ ಪಾಪು ಕನ್ನಡಿಗರ ಕಣ್ಮಣಿಯಾಗಿದ್ದರು ಎಂದರು.
ನಿಂಗಣ್ಣ ಕುಂಟಿ, ಶಿ. ಮ. ರಾಚಯ್ಯನವರ ಪಾಪು ಕುರಿತು ಸ್ವರಚಿತ ಕವನ ವಾಚಿಸಿದರು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ. ಪಾಟೀಲ ಪುಟ್ಟಪ್ಪನವರು ಕನ್ನಡಿಗರು ಎಂದೂ ಮರೆಯಲಾರದ ಕನ್ನಡದ ಬಹುದೊಡ್ಡ ಶಕ್ತಿಯಾಗಿದ್ದರು, ಅವರ ಕನ್ನಡಪರ ಚಿಂತನೆಗಳನ್ನು, ದೇಶಪ್ರೇಮವನ್ನು ಇಂದಿನ ಯುವಜನಾಂಗ ಅರ್ಥೈಸಿಕೊಳ್ಳಬೇಕೆಂದರು.
ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಶಂಕರ ಹಲಗತ್ತಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ. ಶೈಲಜಾ ಅಮರಶೆಟ್ಟಿ, ವೀರಣ್ಣ ಒಡ್ಡೀನ ಹಾಗೂ ಡಾ. ಎಸ್. ಎಂ. ಶಿವಪ್ರಸಾದ, ಪ್ರಿ. ಶಿವಶಂಕರ ಹಿರೇಮಠ, ಮಂಜುಳಾ ಹಾರೂಗೊಪ್ಪ, ಸವಿತಾ ಅಮರಶೆಟ್ಟಿ, ಡಾ. ಜೆ.ಎ. ಚಂದೂನವರ, ಡಾ. ಸದಾಶಿವ ಮರ್ಜಿ, ಕೆ.ಎಂ. ಕೊಪ್ಪದ, ಎಸ್.ಬಿ. ಗುತ್ತಲ, ಸೈಯದಲಿ ನರೇಗಲ್ಲ, ಜಿ. ಎಸ್. ಪಾಟೀಲ, ಎಂ.ಎಂ. ಚಿಕ್ಕಮಠ, ಮಾರ್ತಾಂಡಪ್ಪ ಕತ್ತಿ, ಮೋಹನ ಪಾಟೀಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.