ಕನ್ನಡ ನಾಡಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಮೋಘ

ಕಲಬುರಗಿ:ನ.5: ನಮ್ಮ ದೇಶವನ್ನು ಅನೇಕ ರಾಜಮನೆಗಳು ಆಳ್ವಿಕೆ ಮಾಡಿವೆ. ಅದರಲ್ಲಿ ಕೆಲವು ಸಂಸ್ಥಾನಗಳು ಈಗಿನ ಪ್ರಜಾಪ್ರಭುತ್ವ ಸರ್ಕಾರ ಮಾಡುತ್ತಿರುವ ಕಾರ್ಯಗಳನ್ನು ನೂರಾರು ವರ್ಷಗಳ ಹಿಂದೆಯೇ ಮಾಡಿತೋರಿಸಿವೆ. ಅದರಲ್ಲಿ ಮೈಸೂರು ಒಡೆಯರ್ ಸಂಸ್ಥಾನವು ಪ್ರಮುಖವಾಗಿದೆ. ಈ ಸಂಸ್ಥಾನದ ಮೂಲಕ ಅಭಿವೃದ್ಧಿ ಹೊಳೆಯನ್ನು ಹರಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ ಅವರು ಕನ್ನಡ ನಾಡಿಗೆ ಅಮೋಘವಾದ ಕೊಡುಗೆಯನ್ನು ನೀಡಿದ್ದಾರೆಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.

    ಅವರು ನಗರದ ಆಳಂದ ರಸ್ತೆಯ 'ಎಂ.ಎಂ.ಎನ್ ಟ್ಯೂಟೋರಿಯಲ್ಸ್'ನಲ್ಲಿ ಕನ್ನಡ ರಾಜ್ಯೋತ್ಸವ ಮಾಸಾಚರಣೆ ಪ್ರಯುಕ್ತ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಜಿಲ್ಲೆಯಾದ್ಯಂತ ತಿಂಗಳ ಪರ್ಯಂತ ಹಮ್ಮಿಕೊಂಡಿರುವ 'ಕನ್ನಡ ತಿಂಗಳು-ಕನ್ನಡದ ಕಣ್ಮಣಿಗಳು' ಎಂಬ ಸರಣಿ ಕಾರ್ಯಕ್ರಮದಲ್ಲಿ 'ಕನ್ನಡ ನಾಡಿಗೆ ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆ' ಎಂಬ ಸರಣಿ-2 ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

   ಸಂಸ್ಥೆಯ ಮುಖ್ಯಸ್ಥ ಅಮರ ಜಿ.ಬಂಗರಗಿ ಮಾತನಾಡಿ, ಒಡೆಯರವರ ಆಡಳಿತಾವಧಿಯನ್ನು 'ಸುವರ್ಣಯುಗ'ವೆಂದು ಕರೆಯುತ್ತಾರೆ. 'ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ', ಶಿವನ ಸಮುದ್ರದಲ್ಲಿ ಜಲವಿದ್ಯುತ್ ಯೋಜನೆ ಆರಂಭ, ಮಿಂಟೋ ಕಣ್ಣಿನ ಆಸ್ಪತ್ರೆ ಸ್ಥಾಪನೆ, ವಿದ್ಯುತ್ ದೀಪದ ಅಳವಡಿಕೆ, ವಾಣಿವಿಲಾಸ ಸಾಗರ ಅಣೆಕಟ್ಟಿನ ನಿರ್ಮಾಣ, ಮೈಸೂರಿನ ವಿಧಾನ ಪರಿಷತ್ತಿನ ರಚನೆ, 'ಭಾರತೀಯ ವಿಜ್ಞಾನ ಸಂಸ್ಥೆ' ಮತ್ತು ಎಸ್.ಬಿ.ಎಂ ಸ್ಥಾಪನೆ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ, ರೇಲ್ವೆ ಸಾರಿಗೆ ಪ್ರಾರಂಭ ಹೀಗೆ ಅವರ ಆಡಳಿತಾವಧಿಯಲ್ಲಿನ ಸಾಧನೆಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆಯೆಂದರು.

    ಕಾರ್ಯಕ್ರಮದಲ್ಲಿ ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ಅಣ್ಣಾರಾವ ಮಂಗಾಣೆ, ಬಸವರಾಜ ಎಸ್.ಪುರಾಣೆ, ಎಸ್.ಎಸ್.ಪಾಟೀಲ ಬಡದಾಳ, ಮಹಾಂತೇಶ ಬಿರಾದಾರ, ಮಹಾದೇವ, ಓಂಕಾರ ಗೌಳಿ ಸೇರಿದಂತೆ ಹಲವರಿದ್ದರು.