ಕನ್ನಡ ಜ್ಯೋತಿ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲು ತೀರ್ಮಾನ

ಸಿರವಾರ.ಡಿ.೦೮- ಕರುನಾಡಿಗೆ ಕರ್ನಾಟಕವೆಂದು ನಾಮಕರಣವಾಗಿ ೫೦ ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವರ್ಷಪೂರ್ತಿ ಕನ್ನಡ ಕಾರ್ಯಕ್ರಮ ನಡೆಸಲಿದೆ, ಅದಕ್ಕಾಗಿ “ಜ್ಯೋತಿ ರಥ ಯಾತ್ರೆ” ಆರಂಭವಾಗಿದ್ದು ಡಿ೧೬ ಮತ್ತು೧೭ ರಂದು ಯಾತ್ರೆ ತಾಲೂಕಿಗೆ ಆಗಮಿಸಲಿದೆ. ಅದನ್ನು ಅದ್ದೂರಿಯಾಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸ್ವಾಗತಿಸಿ ವಿವಿಧ ವಾದ್ಯಮೇಳ, ಹಾಗು ವಿವಿಧ ಕಲಾ ತಂಡಗಳೊಂದಿಗೆ, ವಿವಿಧ ಕನ್ನಡ ಪರ ಸಂಘಟನೆಗಳೊಂದಿಗೆ ಮೆರವಣಿಗೆ ಮೂಲಕ ಬೀಳ್ಕೊಡಲು ನಿರ್ಧರಿಸಲಾಯಿತು.
ತಹಶಿಲ್ದಾರರ ಕಚೇರಿಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತಹಶಿಲ್ದಾರ ರವಿ ಎಸ್ ಅಂಗಡಿ ನೇತೃತ್ವ ವಹಿಸಿದ್ದರು. ಬೆರಳೆಣೆಯಷ್ಟು ಇಲಾಖೆ ಗಳು ಭಾಗಿ:
ಕರ್ನಾಟಕ೫೦ ಸುವರ್ಣ ಸಂಭ್ರಮದ ಜ್ಯೋತಿ ರಥ ಯಾತ್ರೆಯ ಪೂರ್ವ ಭಾವಿ ಸಭೆಗೆ ಕೇವಲ ಬೆರಳೆಣಿಕೆಯಷ್ಟು ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದು, ಉಳಿದವರು ತಮ್ಮ ಇಲಾಖೆಯ ಸಹಾಯಕರನ್ನು ಕಳಿಸಿ ಕೈ ತೊಳೆದುಕೊಂಡಿದ್ದರು. ಪ್ರತಿ ಸಭೆಗೂ ಗೈರು ಹಾಜರಿ ಎದ್ದು ಕಾಣುತ್ತಿದ್ದು, ತಹಶಿಲ್ದಾರರು ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳಿಗೆ ವರವಾಗಿ ಪರಿಣಮಿಸಿದೆ ಎಂಬುದು ಸಾರ್ವಜನಿಕ ವಲಯದ ಮಾತು.
ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ತಿಮ್ಮಪ್ಪ ಜಗಲಿ, ನೀರಾವರಿ ಇಲಾಖೆಯ ಎಇಇ ವಿಜಯಲಕ್ಷ್ಮಿ ಪಾಟೀಲ, ಕೃಷಿ ಇಲಾಖೆಯ ಅಧಿಕಾರಿ ಅಯ್ಯನಗೌಡ ಏರಡ್ಡಿ, ಪೊಲೀಸ್ ಇಲಾಖೆಯ ಎಎಸ್‌ಐ ಬಸನಗೌಡ, ಶಿಶು ಅಭಿವೃದ್ಧಿ ಇಲಾಖೆಯ ಶ್ರೀದೇವಿ, ಮುಖ್ಯ ಗುರುಗಳಾದ ದೇವೇಂದ್ರ ನಾಯ್ಕ್, ಕೇಶಪ್ಪ ಕಮ್ಮಾರ, ಕರವೇ ಯ.ಡಿ.ಯಮನೂರಪ್ಪ, ಜೆ.ಕೆ ಭಜಂತ್ರಿ, ಚಿದಾನಂದ ಕರಿಗೂಳಿ, ಶಿರಸ್ತೆದಾರ ಫಕ್ರುದ್ದೀನ್, ಪಶು ಇಲಾಖೆಯ ಬೇಗ್, ತಾ.ಪಂ.ನ ಸಹರಾ ಬೇಗಂ, ಕಂದಾಯ ಅಧಿಕಾರಿ ಶ್ರೀನಾಥ, ವಿಲ್ಸನ್ ಕುಮಾರ, ಕೆ.ಈರೇಶ, ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿ ಇದ್ದರು.