ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ದೂರಿ ಸ್ವಾಗತಕ್ಕೆ ನಿರ್ಧಾರ

ಕಲಬುರಗಿ:ಜ.12: ನಗರಕ್ಕೆ ಶುಕ್ರವಾರ ಆಗಮಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಯನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದಲ್ಲಿ ಶುಕ್ರವಾರ ನಡೆಸಿದ ಪೂರ್ವಸಿದ್ಧತಾ ಸಭೆಯಲ್ಲಿ ಪದಾಧಿಕಾರಿಗಳು ಸೇರಿದಂತೆ ಹಲವರು ಭಾಗವಹಿಸಿ ಯಶಸ್ವಿಗೆ ಪೂರಕವಾಗಿ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣಗೊಂಡು ಐವತ್ತು ವರ್ಷಗಳು ಪೂರೈಸಿರುವ ಹಿನ್ನೆಲೆ ಕರ್ನಾಟಕ ಸರ್ಕಾರವು ವರ್ಷಪೂರ್ತಿಯಾಗಿ ಹಮ್ಮಿಕೊಂಡಿರುವ `ಕನ್ನಡ ಜ್ಯೋತಿ ರಥ ಯಾತ್ರೆ’ ಶನಿವಾರ ಕಲಬುರಗಿ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಜಿಲ್ಲಾ ಕನ್ನಡ ಸಾಹಿತ್ಯ ಪರಷತ್ತಿನ ಸರ್ವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕನ್ನಡ ಹಬ್ಬದಂತಿರುವ ಈ ಸಂಭ್ರಮಕ್ಕೆ ಸಾಕ್ಷಿಯಾಗಬೇಕೆಂದು ಪೂರ್ವಸಿದ್ಧತಾ ಸಭೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮನವಿ ಮಾಡಿಕೊಂಡರು.
ನಂತರ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ನಮ್ಮ ಕನ್ನಡ ನಾಡಿನಲ್ಲಿ ಇರುವ ನಾವುಗಳು ನಮ್ಮ ದಿನನಿತ್ಯದ ಬದುಕಿನಲ್ಲಿ ಕನ್ನಡ ಬಳಸುವುದು ಅನಿವಾರ್ಯ ಎಂಬ ವಾತಾವರಣ ಮೂಡಿಸಿದಾಗ ಮಾತ್ರ ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಎಂಬುದು ಸಾಬೀತು ಮಾಡಿದಂತಾಗುತ್ತದೆ. ನಮ್ಮ ಅವಧಿಯಲ್ಲಿ ಸುವರ್ಣ ಕರ್ನಾಟಕ ಸಂಭ್ರಮ ಬಂದಿರುವುದು ನಮ್ಮ ಭಾಗ್ಯವೇ ಸರಿ ಎಂಬ ಭಾವನೆ ನಾವೆಲ್ಲರೂ ಇಟ್ಟುಕೊಳ್ಳಬೇಕು ಎಂದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಎಸ್ ಅಂಡಗಿ, ಕೋಶಾಧ್ಯಕ್ಷ ಶರಣರಾಜ್ ಛಪ್ಪರಬಂದಿ, ಸಂಘಟನಾ ಕಾರ್ಯದರ್ಶಿ ರವೀಂದ್ರಕುಮಾರ ಭಂಟನಳ್ಳಿ, ಸಹ ಕಾರ್ಯದರ್ಶಿಗಳಾದ ಶಿಲ್ಪಾ ಜೋಶಿ, ರಾಜೇಂದ್ರ ಮಾಡಬೂಳ, ಪ್ರಮುಖರಾದ ಬಾಬುರಾವ ಪಾಟೀಲ ಚಿತ್ತಕೋಟಾ, ಹೆಚ್.ಎಸ್. ಬರಗಾಲಿ, ನಾಗನ್ನಾಥ ಯಳಸಂಗಿ, ಎಸ್ ಎಂ ಪಟ್ಟಣಕರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.