ಕನ್ನಡ ಜಾನಪದ ಪರಿಷತ್ತಿನ ಕಾರ್ಯ ಶ್ಲಾಘನೀಯ-ಶ್ರೀಗಳು

ರಾಯಚೂರು.೧೮-ಅತ್ತನೂರಿನ ಮಠದಲ್ಲಿ ಸೋಮವಾರಪೇಟೆ ಹಿರೇಮಠ ರಾಯಚೂರು, ಕನ್ನಡ ಜಾನಪದ ಪರಿಷತ್ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಪೇಟೆ ಹಿರೇಮಠ ಅತ್ತನೂರು ಪುರಾಣ ಮಂಗಲ ಕಾರ್ಯಕ್ರಮದಲ್ಲಿ ರಾಯಚೂರು ತಾಲೂಕ ಕನ್ನಡ ಜಾನಪದ ಪರಿಷತ್ ವತಿಯಿಂದ ಮಠಕ್ಕೊಂದು ಜಾನಪದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಅಭಿನವ ರಾಚೋಟಿ ಶ್ರೀಗಳು ಮಾತನಾಡುತ್ತ ಕನ್ನಡ ಜಾನಪದ ಪರಿಷತ್ತು ಮಠಕ್ಕೊಂದು ಜಾನಪದ ಕಾರ್ಯಕ್ರಮ ಹಮ್ಮಿಕೊಂಡು ನಮ್ಮ ಮಠದಲ್ಲಿ ಪ್ರಪ್ರಥಮವಾಗಿ ಜಾನಪದ ಕಾರ್ಯಕ್ರಮಗಳನ್ನು ಮಾಡುವುದು ಸಂತೋಷ ತಂದಿದೆ. ನಶಿಸಿ ಹೋಗುವ ಜಾನಪದ ಕಲೆಗಳನ್ನು, ಕಲಾವಿದರನ್ನು ಗುರುತಿಸಿ ನಮ್ಮ ಮಠಕ್ಕೆ ಕರೆದು ತಂದು ಜಾನಪದ, ತತ್ವಪದ, ಸೋಬಾನ ಪದಗಳಂತಹ ಕಾರ್ಯಕ್ರಮಗಳನ್ನು ನೆರೆದಂತ ಭಕ್ತರಿಗೆಲ್ಲ ಕಾರ್ಯಕ್ರಮಗಳನ್ನು ನೀಡಿ ಸಂತೃಪ್ತಿಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಅನೇಕ ಪ್ರಕಾರದ ಜಾನಪದ ಕಲಾವಿದರನ್ನು, ಕಲಾತಂಡಗಳನ್ನು ಡಾ.ಶರಣಪ್ಪ ಗೋನಾಳರವರು ಅವರ ಪರಿಷತ್ತಿನ ಪದಾಧಿಕಾರಿಗಳು ಇಂತಹ ಕಾರ್ಯಕ್ರಮಗಳನ್ನು ನೀಡಲಿ ಎಂದು ತಿಳಿಸಿದರು. ಸೋಮವಾರಪೇಟೆಯ ಹಿರೇಮಠ ಯಾವಾಗಲೂ ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಬಂದಿದೆ ಎಂದು ಹೇಳುತ್ತಾ ಹಿಂದಿನ ಕಾಲದ ಅನೇಕ ಜಾಣಪದ ಉದಾಹರಣೆಗಳನ್ನು ಅವರ ಆಶೀರ್ವಚನದಲ್ಲಿ ತಿಳಿಸಿ ಹೇಳುತ್ತ, ಕನ್ನಡ ಜಾನಪದ ಪರಿಷತ್ತು ಇಂತಹ ಅನೇಕ ಕಾರ್ಯಕ್ರಮಗಳನ್ನು ನೀಡಿ ಜಿಲ್ಲೆಗೆ, ರಾಜ್ಯಕ್ಕೆ ಮಾದರಿಯಾಗಲಿ ಎಂದು ತಮ್ಮ ಆಶೀರ್ವಾದದ ಮೂಲಕ ತಿಳಸಿದರು.
ಇದೇ ಸಂದರ್ಭದಲ್ಲಿ ಸಾನಿಧ್ಯವನ್ನು ವಹಿಸಿಕೊಂಡಂತಹ ನೀಲಗಲ್ ಪೂಜ್ಯರಾದ ಪಂಚಾಕ್ಷರಿ ಶ್ರೀಗಳು ಮಾತನಾಡುತ್ತ ಸೋಮವಾರ ಪೇಟೆ ಮಠ ಶ್ರೀಗಳು ಇಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನಪದ ಕಲಾವಿದರನ್ನು, ಕಲಾತಂಡಗಳನ್ನು ಕರೆಸಿ, ಕಲಾವಿದರನ್ನು ಪ್ರೋತ್ಸಾಹಿಸುವುದು ಹೆಮ್ಮೆ ಪಡುವಂತಹದ್ದು. ಶ್ರೀಗಳು ರಾಯಚೂರು ಮತ್ತು ಅತ್ತನೂರು ಮಠಗಳನ್ನು ಅಭಿವೃದ್ಧಿಪಡಿಸುವ ಮೂಲಕ ಭಕ್ತರ ಮನದಲ್ಲಿ ಧಾರ್ಮಿಕತೆ ಹೆಚ್ಚಿಸಿದ್ದಾರೆ. ಇನ್ನೂ ಇಂತಹ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ಮಾಡಲಿ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಜಾಗಟಗಲ್‌ದ ಬೆಟ್ಟದಯ್ಯಪ್ಪ ತಾತಾನವರು ಕಿರಿಯ ಶ್ರೀಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರು ಕಲ್ಯಾಣ ಕರ್ನಾಟಕ ವಿಭಾಗೀಯ ಸಂಚಾಲಕರಾದ ಡಾ.ಶರಣಪ್ಪ ಗೋನಾಳರವರು ಪ್ರಾಸ್ತವಿಕವಾಗಿ ಮಾತನಾಡುತ್ತ ನಶಿಸಿ ಹೋಗುವ ಜಾನಪದ ಕಲೆಗಳಿಗೆ ಪುನಶ್ಚೇತನ ನೀಡಲು ಹಳ್ಳಿ-ಹಳ್ಳಿಗೆ ಕನ್ನಡ ಜಾನಪದ ಪರಿಷತ್ತು ಮಠಕ್ಕೊಂದು ಜಾನಪದ ಕಾರ್ಯಕ್ರಮ, ಬೆಳದಿಂಗಳ ಬುತ್ತಿ ಕಾರ್ಯಕ್ರಮ, ಮನೆಯಂಗಳದಲ್ಲಿ ರಂಗೋಲಿ ಕಾರ್ಯಕ್ರಮ, ಶಾಲಾ ಕಾಲೇಜುಗಳಿಗೆ ಜಾನಪದ ಸಂಭ್ರಮ ಕಾರ್ಯಕ್ರಮ, ಜಿಲ್ಲಾ ಹಾಗೂ ತಾಲೂಕುಗಳಲ್ಲಿ ಜಿಲ್ಲಾ ತಾಲೂಕ ಜಾನಪದ ಸಮ್ಮೇಳನಗಳನ್ನು ಮಾಡುವುದರ ಮೂಲಕ ಕನ್ನಡ ಜಾನಪದ ಪರಿಷತ್ತಿನ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿ ನಮ್ಮ ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ.ಎಸ್.ಬಾಲಾಜಿ ಅವರು ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ಯಾವುದೇ ಸರಕಾರದ ಅನುದಾನವಿಲ್ಲದೆ ರಾಜ್ಯದ ೩೦ ಜಿಲ್ಲೆಗಳಲ್ಲಿ ಸುಮಾರು ೪೫ ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಹಳ್ಳಿ-ಹಳ್ಳಿಗಳಲ್ಲಿ ಜಾನಪದ ಕಲೆಗಳನ್ನು ಗುರುತಿಸುವ ಕೆಲಸ ಕನ್ನಡ ಜಾನಪದ ಪರಿಷತ್ ಮಾಡುತ್ತದೆ ಎಂದು ಹೇಳುತ್ತ ಪೂಜ್ಯರ ಆಶೀರ್ವಾದ ನಮ್ಮ ಪರಿಷತ್ತಿಗೆ ಇರಲಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ತಿನ ಸಿರವಾರ ತಾಲೂಕ ಘಟಕದ ಗೌರವಾಧ್ಯಕ್ಷರಾದ ಬಸ್ಸಪ್ಪ ಹೆಗ್ಗಡದಿನ್ನಿಯವರು ಜಾನಪದ ವಾದ್ಯಗಳಾದ ೬ ವಾದ್ಯಗಳನ್ನು ಏಕಕಾಲಕ್ಕೆ ನುಡಿಸುವುದರ ಮೂಲಕ ತತ್ವಪದ ಜಾನಪದ ಗೀತೆಗಳನ್ನು ಹಾಡಿ ಭಕ್ತಾದಿಗಳನ್ನು ಸಂತೃಪ್ತಿ ಪಡಿಸಿದರು. ಖ್ಯಾತ ಜಾನಪದ ಗಾಯಕರಾದ ಡಾ.ಶರಣಪ್ಪ ಗೋನಾಳರವರು ಮೂಲ ಜಾನಪದ ಗೀತೆಗಳಾದ ಸೀಮಂತ ಕಾರಣದ ಹಾಡು, ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದವ್ವ ಎಂಬ ಗೀತೆ ಹಾಗೂ ಭಾಗ್ಯದ ಬಳೇಗಾರ ಹೋಗಿ ಬಾ ನನ್ನ ತವರಿಗೆ ಎಂಬ ಹಾಡು ಮತ್ತು ಯಾರ ಹೊಲ ಯಾರ ಮನೆ ನೆಚ್ಚಿಕುಂತೆ ಸುಳ್ಳೆಯಲ್ಲ ಎಂಬ ಗೀತೆಗಳನ್ನು ಹಾಡುವುದರ ಮೂಲಕ ನೆರೆದ ಜನಸ್ತೋಮವನ್ನು ಮಂತ್ರಮುಗ್ಧರನ್ನಾಗಿಸಿದರು.
ಇದೇ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಮಹಿಳಾ ಘಟಕದ ಶ್ರೀಮತಿ ದಾನಮ್ಮ ಕಡಗಂಚಿ, ಸುಮಂಗಲಾ ಸಕ್ರಿ, ಶರಣಮ್ಮ ಬಳೆ, ಅಕ್ಕಮ್ಮ ಖೇಣೆದ್, ಕಲಾವಿದರಾದ ವೀರೇಂದ್ರ ಕುರ್ಡಿ, ರಾಘವೇಂದ್ರ ಆಶಾಪೂರು, ಛಾಯಾಗ್ರಾಹಕ ಅಯ್ಯಪ್ಪ ಪಿಕಳಿಹಾಳ ಉಪಸ್ಥಿತರಿದ್ದರು. ರಾಯಚೂರು ತಾಲೂಕ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಸಿದ್ಧಯ್ಯ ಸ್ವಾಮಿ ಚೇಗುಂಟ, ತಾಲೂಕ ಘಟಕದಿಂದ ಮಠಕ್ಕೊಂದು ಜಾನಪದ ಕಾರ್ಯಕ್ರಮ ಅದ್ಧೂರಿಯಾಗಿ ನಡೆಸಿಕೊಟ್ಟರು. ಅತ್ತನೂರು ಮಠದ ವತಿಯಿಂದ ಹಮ್ಮಿಕೊಂಡ ಕಲಬುರ್ಗಿ ಶರಣಬಸವೇಶ್ವರ ೯ ದಿವಸಗಳ ಪ್ರವಚನದ ಮುಕ್ತಾಯ ಸಮಾರಂಭದ ಪ್ರವಚನವನ್ನು ಮಲ್ಲಿಕಾರ್ಜುನ ಶಾಸ್ತ್ರಿಗಳು ಸಂಗೀತಗಾರರಾದ ಮನೋಹರ ಸಂಕಲಿಮಠ, ತಬಲಾ ವಾದಕರಾದ, ಮೌನೇಶ ಆಲವಿ, ಪ್ರವಚನ ಕಾರ್ಯಕ್ರಮದ, ಮುಕ್ತಾಯ ಹಾಗೂ ಪ್ರಾರಂಭವನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು ವೀರಭದ್ರಯ್ಯ ಸ್ವಾಮಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಊರಿನ ಗಣ್ಯರು, ಸಕಲ ಸದ್ಭಕ್ತರು ಉಪಸ್ತಿತರಿದ್ದರು.