ಕನ್ನಡ ಜಾತ್ರೆಗೆ ಅದ್ಧೂರಿ ಚಾಲನೆ ಸಮ್ಮೇಳನಾಧ್ಯಕ್ಷರ ಆಕರ್ಷಕ ಮೆರವಣಿಗೆ; ಕಲಾ ತಂಡಗಳ ಭರ್ಜರಿ ಪ್ರದರ್ಶನ

ಕಲಬುರಗಿ (ಬಂಡಾಯ ಸಾಹಿತಿ ಡಾ.ಚನ್ನಣ್ಣ ವಾಲೀಕಾರ ವೇದಿಕೆ), ಫೆ.26:ಕಿಕ್ಕಿರಿದು ತುಂಬಿದ್ದ ಕನ್ನಡಾಭಿಮಾನಿಗಳ ಕಲರವದ ಮಧ್ಯೆ ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಎರಡು ದಿನಗಳ ಕಲಬುರಗಿ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ ದೊರೆಯಿತು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಪತಿ ಹಾಗೂ ಸಾಹಿತಿ ಡಾ.ಟಿ.ಎಂ.ಭಾಸ್ಕರ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನಕ್ಕೆ ಖ್ಯಾತ ಸಾಹಿತಿ ಪೆÇ್ರ.ರಾಜಪ್ಪ ದಳವಾಯಿ ಚಾಲನೆ ನೀಡಿ ಮಾತನಾಡುತ್ತಾ,
ಸಾಹಿತ್ಯ ಬೆಸೆಯುವ ಕೆಲಸ ಮಾಡಬೇಕು. ಧರ್ಮವೂ ಕೂಡ ಇದೇ ಆಶಯ ಹೊಂದಿರಬೇಕು ಎಂದು ಆಶಯ ವ್ಯಕ್ತಪಡಿಸಿದರು.ಇಂದು ಅಸಹನೆ ಎಂಬುದು ಎಲ್ಲೆಡೆ ತುಂಬಿ ತುಳುಕುತ್ತಿದೆ. ಬಾದರಾಯಣ ಸಂಬಂಧ ಕೆದಕಿ ನಮ್ಮ ಮಧ್ಯೆ ಇರುವವರ ಜಾತಿ ತಿಳಿದುಕೊಳ್ಳುವ ಕೆಟ್ಟ ಕುತೂಹಲದ ಕಾಲಘಟ್ಟದಲ್ಲಿದ್ದೇವೆ. ಒಂಬತ್ತನೇ ಶತಮಾನದ ಕವಿರಾಜ ಮಾರ್ಗ ಕೃತಿಯ ಕೇಂದ್ರ ತಿರುಳು ಹೇಳುವಂತೆ ಬೇರೆಯವರ ಧರ್ಮ ನಮಗೆ ಆದರ್ಶ ಆಗಬೇಕಿದೆ. ಆಗಲೇ ಆದರ್ಶ ಸಮಾಜ ನಿರ್ಮಾಣ ಸಾಧ್ಯ ಎಂದರು.ಕವಿರಾಜ ಮಾರ್ಗ ಕೃತಿ ನಾಡಿನ ರಾಜರಿಂದ ಹಿಡಿದು ಜನಸಾಮಾನ್ಯರಿಗೂ ಪ್ರಜ್ಞೆ ಮೂಡಿಸುವ ಚಕ್ಕುಬಂಧಿಯಂತಿದೆ. ಮೇಲಾಗಿ ಎಲ್ಲರಿಗೂ ಆದರ್ಶದ ಕೃತಿಯಾಗಿದೆ ಎಂದು ನುಡಿದರು.
ಕವಿರಾಜ ಮಾರ್ಗ ಕೃತಿಯನ್ನು ನೀಡಿದ ಈ ಭಾಗ ಚಿಂತನೆಗಳ ಪಾಲಿಗೆ ಶಿಖರಪ್ರಾಯ. ಹಾಗಾಗಿ, ಈ ಭಾಗದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಇಡೀ ನಾಡಿಗೆ ಆದರ್ಶಪ್ರಾಯದಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪಾ ಅವರು ದಿವ್ಯ ನೇತೃತ್ವ ವಹಿಸಿ ಮಾತನಾಡುತ್ತಾ, ನುಡಿ ಜಾತ್ರೆಗಳು ಸಾಹಿತ್ಯ ಜಾಗೃತಿ ಮೂಡಿಸುತ್ತವೆ. ನಮ್ಮ ಜಿಲ್ಲೆಯಲ್ಲಿ ಕನ್ನಡ ಸಾಹಿತಿಗಳ ದೊಡ್ಡ ಪಡೆಯೇ ಇದೆ. ಹೀಗಾಗಿ, ಬಹುಬಗೆಯ ಸಾಹಿತ್ಯ ಇಂದು ಜಿಲ್ಲೆಯಾದ್ಯಂತ ರಚಿಸಲ್ಪಡುತ್ತಿದೆ ಎಂದರು.ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ಹಲವು ಮಳಿಗೆಗಳ ಉದ್ಘಾಟನೆ ನಡೆಯಿತು.
ಇನ್ನು ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿದ್ದ ಗಣ್ಯರು ‘ಸಂಕಥನ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್ ಕುಮಾರ್ ಹೊಸಮನಿ ಛಾಯಾಚಿತ್ರಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು. ವೇದಿಕೆಯ ಮೇಲಿನ ಗಣ್ಯರು ‘ಜನಪದ ಕೌದಿಯ ಚಿತ್ತಾರ’, ‘ಬಹುದಾರಿ’, ‘ದಲಿತ ಸಾಹಿತ್ಯದಲ್ಲಿ ಮಹಿಳಾ ಅಸ್ಮಿತೆಯ ಸಂಘರ್ಷ’, ‘ಮಾವು ಮಲ್ಲಿಗೆ’ ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಅನುಪಸ್ಥಿತಿಯಲ್ಲಿ ನಡೆದ ಈ ಸಮಾರಂಭದಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪೆÇ್ರ.ಕಲ್ಯಾಣರಾವ್ ಪಾಟೀಲ್, ಮಾಹಿತಿ ಹಕ್ಕು ಆಯೋಗ ಕಲಬುರಗಿ ಪೀಠದ ಆಯುಕ್ತ ರವೀಂದ್ರ ಡಾಕಪ್ಪ, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ, ಪೆÇ್ರ.ಯಶವಂತರಾಯ ಅಷ್ಟಗಿ, ಸಾಹಿತಿ ಕೆ.ಗಿರಿಮಲ್ಲ, ಸಾಹಿತ್ಯ ಪರಿಷತ್ತಿನ ದಕ್ಷಿಣ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಹಾಗೂ ಹಿರಿಯ ಪತ್ರಕರ್ತ ಶಾಮಸುಂದರ ಕುಲಕರ್ಣಿ ಸೇರಿದಂತೆ ಇತರರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದರು.
ಜ್ಯೋತಿ ಕೋಟನೂರ ಹಾಗೂ ಮಂಜುಳಾ ಸುತಾರ್ ನಿರ್ವಹಿಸಿದರೆ, ಶಿವರಾಜ ಅಂಡಗಿ ಹಾಗೂ ಸಿದ್ದಲಿಂಗ ಜಿ.ಬಾಳಿ ನಿರೂಪಿಸಿದರು. ಕಲ್ಯಾಣಕುಮಾರ್ ಶೀಲವಂತ ಸ್ವಾಗತಿಸಿದರು. ಶರಣರಾಜ ಛಪ್ಪರಬಂದಿ ವಂದಿಸಿದರು.
ಸಮ್ಮೇಳನದ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ನಾಡ ಧ್ವಜಾರೋಹಣ ನೆರವೇರಿಸಿದರೆ, ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ಪರಿಷತ್ ಧ್ವಜಾರೋಹಣ ನೆರವೇರಿಸಿದರು.


ಸಮ್ಮೇಳನಾಧ್ಯಕ್ಷರ ಆಕರ್ಷಕ ಮೆರವಣಿಗೆ
ಕಲಬುರಗಿ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಟಿ.ಎಂ.ಭಾಸ್ಕರ್ ಅವರ ಆಕರ್ಷಕ ಮೆರವಣಿಗೆ ಗಮನ ಸೆಳೆಯುವಂತಿತ್ತು.ನಗರದ ಕನ್ನಡ ಭವನದಿಂದ ಆರಂಭಗೊಂಡ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ವಿವಿಧ ಸಾಂಸ್ಕøತಿಕ ತಂಡಗಳು ಸಾಥ್ ನೀಡಿದವು. ಅದರಲ್ಲೂ ಡೊಳ್ಳು ಮತ್ತು ಹಲಗೆ ತಂಡಗಳು ಮೆರವಣಿಗೆಯ ಕಳೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದವು.ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಯುವಕರು ಹಾಗೂ ಯುವತಿಯರು, ಕನ್ನಡ ಪರ ಹೋರಾಟಗಾರರು ಕನ್ನಡ ಬಾವುಟಗಳನ್ನು ಬೀಸುತ್ತಾ ಮೆರವಣಿಗೆಯಲ್ಲಿ ಸಾಗಿದ್ದು ಕನ್ನಡ ಜಾತ್ರೆ ಕಣ್ಣಿಗೆ ಕಟ್ಟುವಂತಿತ್ತು.
ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ವಿಶಾಲ ದರ್ಗಿ ಮೆರವಣಿಗೆಗೆ ಚಾಲನೆ ನೀಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ನೇತೃತ್ವದಲ್ಲಿ ನಡೆದ ಈ ಮೆರವಣಿಗೆಯಲ್ಲಿ ಉಪಮಹಾಪೌರ ಶಿವಾನಂದ ಪಿಸ್ತಿ, ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ, ಲಚ್ಚಪ್ಪ ಜಮಾದಾರ್, ಭಾನುಕುಮಾರ ಗಿರೇಗೋಳ, ಚಂದ್ರಕಾಂತ ಕಾಳಗಿ, ಬಿ.ಎನ್.ಪುಣ್ಯಶೆಟ್ಟಿ, ರಾಜುಗೌಡ ನಾಗನಹಳ್ಳಿ, ಮಾಲಾ ದಣ್ಣೂರ, ಚಂದ್ರಶೇಖರ ಪಾಟೀಲ್ ಯಳಸಂಗಿ, ಹಣಮಂತರಾಯ ಅಟ್ಟೂರ್ ಹಾಗೂ ವಿದ್ಯಾಸಾಗರ ದೇಶಮುಖ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ರಾಜಾ ವೆಂಕಟಪ್ಪ ನಾಯಕ ನಿಧನ: ಗಣ್ಯರ ಗೈರು
ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ನಿಧನದ ಹಿನ್ನೆಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಆರಂಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇನ್ನು ವೆಂಕಟಪ್ಪ ನಾಯಕ ಅವರ ಅಂತಿಮ ಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಾದ ಹಿನ್ನೆಲೆಯಲ್ಲಿ ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ.ಅಜಯಸಿಂಗ್, ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ್, ಕರ್ನಾಟಕ ರೇಷ್ಮೆ ಉದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕನೀಜ್ ಫಾತಿಮಾ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಬಸವರಾಜ ಮತ್ತಿಮೂಡ, ಎಂ.ವೈ.ಪಾಟೀಲ್, ಡಾ.ಅವಿನಾಶ ಜಾಧವ್, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ್, ಶಶಿಲ್ ಜಿ.ನಮೋಶಿ ಸೇರಿದಂತೆ ಇತರರು ಸಮ್ಮೇಳನಕ್ಕೆ ಗೈರಾಗಿದ್ದರು.


ಕನ್ನಡ ಅನ್ನ ಹುಡುಕುವ ಶಕ್ತಿ ಆಗಲಿ
ಕನ್ನಡ ಭಾಷೆ ಎಂಬುದು ಅನ್ನ ಹುಡುಕುವ ಶಕ್ತಿಯಾಗಬೇಕು ಎಂಬ ಕವಿರಾಜಮಾರ್ಗ ಕೃತಿಯ ಆಶಯ ಈಡೇರಬೇಕು ಎಂದು 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಟಿ.ಎಂ.ಭಾಸ್ಕರ್ ನುಡಿದರು.
ಈ ಭಾಗದಲ್ಲಿ ಕಾಯಕ ಜೀವಿಗಳ ವಚನೋಲ್ಲಾಸ ಕನ್ನಡ ಭಾಷೆಯನ್ನು ಸಾಂಸ್ಕøತಿಕವಾಗಿ ಜೀವಂತವಾಗಿರಿಸಿದೆ. ಮೇಲಾಗಿ, ತತ್ವಪದ ಸಾಹಿತ್ಯವೂ ಇಂಥದ್ದೇ ಹೊಣೆಗಾರಿಕೆ ನಿಭಾಯಿಸುತ್ತಿದೆ ಎಂದರು.ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಇಡೀ ಜಗತ್ತಿಗೆ ವಿಸ್ತರಿಸಿದ ಈ ಭಾಗದ ಕನ್ನಡ ಶಾಲೆಗಳನ್ನು ಸ್ಥಳೀಯ ಸಿಮೆಂಟ್ ಕಾರ್ಖಾನೆಗಳು ದತ್ತು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.