ಕನ್ನಡ ಚಿತ್ರರಂಗದ ಹೃದಯವಂತ ಡಾಕ್ಟರೇಟ್ ವಿಷ್ಣುವರ್ಧನ

ರಾಯಚೂರು.ಸೆ.16- ” ಸೆಪ್ಟೆಂಬರ್18 ಕನ್ನಡ ಚಿತ್ರರಂಗದ ಸಾಹಸ ಸಿಂಹ ವಿಷ್ಣುವರ್ಧನ ರವರ ಜನ್ಮ ದಿನ ರಾಜ್ಯಾದ್ಯಂತ ಅವರ ಅಭಿಮಾನಿಗಳು ಹುಟ್ಟು ಹಬ್ಬವನ್ನು ಆಚರಿಸುತ್ತಾರೆ ಹೀಗಾಗಿ ನಾ ಕಂಡ ನನ್ನ ಅಭಿಮಾನದ ದೇವರು ವಿಷ್ಣುವರ್ಧನ ರವರ ಕುರಿತು ಈ ಲೇಖನ ನಿಮಗಾಗಿ…”
ಅದೊಂದು ಸುಂದರ ಕ್ಷಣ ಕನಸಲ್ಲೂ ನೆನಸಿರಲಿಲ್ಲ ನನ್ನ ಆರಾಧ್ಯ ನಟ ಸಾಹಸ ಸಿಂಹ ವಿಷ್ಣುವರ್ಧನ್ ರವರನ್ನು ನೋಡುವೆನೆಂದು .1987 ರ ಸಮಯ ಕೆಲಸದ ನಿಮಿತ್ತ ಮೊದಲ ಬಾರಿಗೆ ಬೆಂಗಳೂರಿಗೆ ಹೋಗಿದ್ದೆ ಅಲ್ಲಿಗೆ ಹತ್ತಿರವಿದ್ದ ನಂದಿ ಬೆಟ್ಟ ನೋಡಲು ನನ್ನ ಸೋದರ ಮಾವ ಪಾಂಡುರಂಗ ಆಲ್ಕೋಡ ರವರು ಕರೆದುಕೊಂಡು ಹೋಗಿದ್ದರು ಅಲ್ಲಿ ಸುತ್ತಾಡುವಾಗ ಅನಿರೀಕ್ಷಿತವಾಗಿ ನನಗೊಂದು ಸುವರ್ಣ ಅವಕಾಶ ಒದಗಿಬಂತು ವಿಷ್ಣುವರ್ಧನ್ ರವರ ಚಿತ್ರ ಚಿತ್ರೀಕರಣ ನಡೆಯುತ್ತದೆ ಎನ್ನುವ ಸುದ್ದಿ ತಿಳಿಯಿತು ತಕ್ಷಣವೇ ನಾಗಾಲೋಟದಲ್ಲಿ ಓಡಿದೆ ನನ್ನ ಕಣ್ಣುಗಳು ನಂಬಲೇ ಆಗಲಿಲ್ಲ ನಿಜವೋ ? ಕನಸೋ ? ಆಶ್ಚರ್ಯ ಆದರೆ ಅದು ಸತ್ಯವಾಗಿತ್ತು ವಾಸ್ತವಕ್ಕೆ ಬಂದೆ ಕನ್ನಡಿಗರ ಸಾಹಸ ಸಿಂಹ ನನ್ನ ಕಣ್ಮುಂದೆ ಶುಭ ಮಿಲನ ಚಿತ್ರದ ಶೂಟಿಂಗ್ ನಡೀತಾ ಇತ್ತು ನಟಿ ಅಂಬಿಕಾ ರೊಡನೆ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು ಜೀವನದಲ್ಲಿ ಮೊದಲ ಬಾರಿಗೆ ಚಿತ್ರವೊಂದರ ಶೂಟಿಂಗ್ ನೋಡತಾ ಇರೋದು ಅದು ನನ್ನ ಮೆಚ್ಚಿನ ಹೀರೋ ಜೊತೆಗೆ ಅದೇನೋ ಖುಷಿ ಸ್ವಲ್ಪ ಹಾಗೇ ನೋಡುತ್ತಲೇ ಇರುವಾಗ ಶೂಟಿಂಗ್ ಬಿಡುವು ಕೊಟ್ಟರು ಆಗ ಅಲ್ಲಿ ನೆರದಿದ್ದ ಜನರು ವಿಷ್ಣುವರ್ಧನ್ ರವರನ್ನು ಭೇಟಿಗೆ ಮುಂದಾದರು. ನಾನೂ ಹತ್ತಿರಕ್ಕೆ ಹೋದೆ ಬಿಳಿ ಪ್ಯಾಂಟ್ , ಕೆಂಪು ಶರ್ಟ್ ಜೊತೆಗೆ ಹಳದಿ ಕೋಟ್ ನಲಿ ನನ್ನ ಮೆಚ್ಚಿನ ನಟ ಕಣ್ತುಂಬಿಕೊಂಡೆ ಹತ್ತಿರಕ್ಕೆ ಹೋದೆ ಆತ್ಮೀಯವಾಗಿ ಬರಮಾಡಿಕೊಂಡರು ನಾನು ರಾಯಚೂರಿನಿಂದ ಬಂದಿರುವದಾಗಿ ಹೇಳಿದೆ ಹೌದಾ… ಬನ್ನಿ ಎಂದರು ಕೈ ಕುಲುಕಿದೆ ಒಂದು ಕ್ಷಣ ಸಂತೋಷ ಮತ್ತೊಂದಡೆ ದಿಗಿಲು ಆದರೂ ಸಾವರಿಸಿಕೊಂಡು ಮಾತನಾಡಿದೆ 1981 ರಿಂದ ನಿಮ್ಮ ಅಭಿಮಾನಿ ಎಂದು ಪರಿಚಯಿಸಿಕೊಂಡೆ ಖುಷಿಯಿಂದ ಓಹ್… ಹೌದಾ ರಾಯಚೂರಿನಲ್ಲಿ ನೀರಿಗೆ ಬರಗಾಲ ಎಂದು ಕೇಳಿರುವೆ ನನ್ನ ಅಭಿಮಾನಿಗಳಾದ ನೀವು ಅಲ್ಲಿ ಕುಡಿಯುವ ನೀರಿನ ಸೇವೆ ಮಾಡಬಹುದಲ್ಲ ಎಂದಾಗ ಖಂಡಿತ ಮಾಡುವೆ ಸರ್ ಎಂದಸ ಗುಡ್ ಅಭಿಮಾನಿಗಳೆಂದರೆ ಹೀಗಿರಬೇಕು ಎಂದು ಬೆನ್ನು ಚೆಪ್ಪರಿಸಿದರು ನಾನು ಅವರ ಜೊತೆಗೆ ಫೋಟೋ ತೆಗೆಸಿಕೊಳ್ಳುವ ಬಯಕೆ ತಿಳಿಸಿದೆ ಆಗ ವಿಷ್ಣು ರವರು ಕ್ಯಾಮರಾ ತಂದಿದೀರಾ ಎಂದಾಗ ನಾನು ಅಸಹಾಯಕನಾದೆ ಆಗ ಪಕ್ಕದಲ್ಲಿದ್ದ ಚಿತ್ರಿಕರಣದ ಫೋಟೋಗ್ರಾಫರ್ ಪ್ರಸಾದ್ ಗಾಂಧಿ ರವರನ್ನು ಕರೆದು ಫೋಟೋ ತೆಗೆಯಲು ಸೂಚಿಸಿದರು ಅಲ್ಲದೇ ಹತ್ತಿರಕ್ಕೆ ನಿಲ್ಲಿಸಿ ಫೋಟೋಗೆ ಸಹಕರಿಸಿ ನನಗೆ ಫೋಟೋ ಕಳುಹಿಸಲು ಅವರಿಗೆ ಸೂಚಿಸಿದರು ಆಗ ನನಗೆ ಆ ನಟನ ಸ್ಪರ್ಶ ಕಂಡು ಸ್ವರ್ಗ ಮೂರೇ ಗೇಣು ಎಂಬಂತೆ ಇತ್ತು ಅಷ್ಟರಲ್ಲೇ ನಟಿ ಅಂಬಿಕಾ ರವರು ಬಂದರು ಆಗ ಅಂಬಿಕಾ ರವರಿಗೆ ನನ್ನ ಪರಿಚಯಿಸಿದರು ಅಲ್ಲದೇ ಶೂಟಿಂಗ್ ನೋಡಿಕೊಂಡು ಹೋಗಲು ತಿಳಿಸಿ ಪುನಃ ಚಿತ್ರೀಕರಣಕ್ಕೆ ಅಣಿಯಾದರು ಸುಮಾರು ಅರ್ಧ ಗಂಟೆಗಳ ಕಾಲ ಶೂಟಿಂಗ್ ನೋಡಿ ಮರಳಿದೆ. ಈ ಘಟನೆ ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಅಲ್ಲದೇ ಅವರ ಮೇಲೆ ನನ್ನ ಅಭಿಮಾನ ಇನ್ನೂ ಹೆಚ್ಚಾಯಿತು.
ರಾಯಚೂರಿಗೆ ಬಂದ ನಂತರ ಅಭಿಮಾನದ ಮಿತ್ರ ಕೆ.ಗೋವಿಂದ ರೆಡ್ಡಿ, ನಾಗರಾಜ, ವೀರೇಶ , ವೆಂಕಟೇಶ, ರಂಗಾರೆಡ್ಡಿ ರವರೊಡನೆ ಕುಡಿಯುವ ನೀರು ಕಾರ್ಯಕ್ರಮ ಕುರಿತು ಚರ್ಚಿಸಿದೆ ಖುಷಿಯಿಂದ ಎಲ್ಲರೂ ಒಪ್ಪಿಕೊಂಡರು ಮೇ ತಿಂಗಳ ಆಗಿದ್ದರಿಂದ ರಾಯಚೂರಿನಲ್ಲಿ ಬಿಸಿಲು ಜೋರಾಗಿತ್ತು ಹೀಗಾಗಿ ಮರು ದಿನವೇ ಗಂಜ್ ಸರ್ಕಲ್ ಹತ್ತಿರ ಕುಡಿಯುವ ನೀರಿನ ಅರವಟಿಗೆ ಆರಂಭಿಸಿದೆವು ಆಗ ನಿಜಕ್ಕೂ ಬಹಳ ಸಂತೋಷವಾಗಿತ್ತು ಕಾರಣ ವಿಷ್ಣುವರ್ಧನ್ ರವರು ಹೇಳಿದ ಕೆಲಸ ಕಾರ್ಯಗತ ಮಾಡಿದ ತೃಪ್ತಿ. ನಂತರ ಬೆಂಗಳೂರಿನಿಂದ ಅಂಚೆಯಲ್ಲಿ ಪ್ರಸಾದ್ ಗಾಂಧಿ ರವರು ವಿಷ್ಣುವರ್ಧನ್ ಜೊತೆಗೆ ಇರುವ ಫೋಟೋ ಕಂಡು ಸ್ವರ್ಗವೇ ಸಿಕ್ಕಷ್ಟು ಸಂತೋಷವಾಗಿತ್ತು. ಹೀಗೆ ನನ್ನ ವಿಷ್ಣುವರ್ಧನ್ ಅಭಿಮಾನ ಹೆಚ್ಚುತ್ತಲೇ ಹೋಯಿತು ನಾವೆಲ್ಲರೂ ಸೇರಿ ವಿಷ್ಣುವರ್ಧನ್ ರವರ ಜನ್ಮದಿನವನ್ನು ಆಚರಿಸುತ್ತಿದ್ದೆವು ಕ್ರಮೇಣ ಬೆಂಗಳೂರಿಗೆ ಹೋದಾಗಲೆಲ್ಲ ವಿಷ್ಣುವರ್ಧನ್ ರವರ ಮನೆಗೆ ಹೋಗುತ್ತಿದ್ದೆ ಜೊತೆಗೆ ರಾಯಚೂರಿನಲ್ಲಿ ಕುಡಿವ ನೀರಿನ ಕಾರ್ಯಕ್ರಮದ ಪತ್ರಿಕೆಯಲ್ಲಿ ಬಂದ ವರದಿ ತೋರಿಸಿದಾಗ ವಿಷ್ಣುವರ್ಧನ್ ರವರು ಬಹಳ ಖುಷಿ ಪಟ್ಟರು ಆಗ ಅವರ ಮನೆಯ ಫೋನ್ ನಂಬರ ಸಹ ನೀಡಿದರು ಆಗ ನಮಗೆ ಇನ್ನೂ ವಿಷ್ಣುವರ್ಧನ್ ಹತ್ತಿರವಾದರು ರಾತ್ರಿ ಹನ್ನೊಂದರ ನಂತರ ಅವರೊಂದಿಗೆ ಮಾತನಾಡುತ್ತಿದ್ದೆ ಅವರೂ ಸಹ ಅಷ್ಟೇ ಪ್ರೀತಿಯಿಂದ ಮಾತನಾಡುತ್ತಿದ್ದರು . ಆಗಲೇ ನಾನು ಪತ್ರಿಕೆಗಳಲ್ಲಿ ಕತೆ , ಕವನಗಳನ್ನು ಬರೆಯುತ್ತಿದ್ದೆ ಹೀಗಾಗಿ ಪತ್ರಿಕೆಯಲ್ಲಿ ವಿಷ್ಣುವರ್ಧನ್ ಜನ್ಮ ದಿನದ ಅಂಗವಾಗಿ ಲೇಖನಗಳನ್ನು ಬರೆಯತೊಡಗಿದೆ ಪತ್ರಿಕೆಯಲ್ಲಿ ಬಂದ ಲೇಖನಗಳನ್ನು ಅವರಿಗೆ ಕಳಿಸುತ್ತಿದ್ದೆ ಹೀಗಾಗಿ ಅಷ್ಟೊಂದು ದೊಡ್ಡ ನಟ ನನಗೆ ಬಹಳ ಹತ್ತಿರವಾಗಿದ್ದರು. ಅದೆಷ್ಟೋ ಸಾರಿ ಅವರೊಂದಿಗೆ ಭೇಟಿ ಮಾಡಿರುತ್ತೇನೆ ನಂತರ ಮೊಬೈಲ್ ಯುಗ ಬಂತು ಆಗಲೂ ಅವರು ತಮ್ಮ ಮೊಬೈಲ್ ನಂಬರ್ ನನಗೆ ಕೊಟ್ಟರು ಬಹುಶಃ ನನ್ನಂತಹ ಅದೃಷ್ಟದ ಅಭಿಮಾನಿ ನಾನೇ ಅಂದರೂ ತಪ್ಪಲ್ಲ.
ನಂತರ ವಿಷ್ಣುವರ್ಧನ್ ರವರ ಹಿರಿಯ ಅಭಿಮಾನಿಗಳಾದ ಶ್ಯಾಮರಾವ್ , ಗುರುರಾಜ ಕುಲಕರ್ಣಿ, ಚಂದ್ರಹಾಸ ನಂತರ ಹನುಂತ್ರಾಯ ನಾಡಗೌಡ್ರು, ಸುರೇಶ ಪಾಟೀಲ, ಚಂದ್ರಶೇಖರ ರೆಡ್ಡಿ, ಈರಣ್ಣ , ರಾಘವೇಂದ್ರ ಮಠದ ,ನರಸಪ್ಪ,ಕೆ.ಗೋಪಿ ,ಪಿ.ಪ್ರಕಾಶ ವಕೀಲರು ಕೆ.ಶ್ರೀನಿವಾಸ ಹೀಗೆ ಒಂದೊಂದು ತಂಡದೊಂದಿಗೆ ನಗರದಲ್ಲಿ ವಿಷ್ಣುವರ್ಧನ್ ರವರ ಹುಟ್ಟು ಹಬ್ಬವನ್ನು ಅನಾಥ ಮಕ್ಕಳೊಂದಿಗೆ ,ಅಂಧ ಮಕ್ಕಳೊಂದಿಗೆ , ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸುವುದು ಮಾಡುತ್ತಿದ್ದವು. ಅವರ ಚಿತ್ರಗಳು ಬಂದಾಗ ಹತ್ತಾರು ಸಲ ನೋಡುತ್ತಿದ್ದೆ ಬಂಧನ ಚಿತ್ರ ರಾಯಚೂರಿನಲ್ಲಿ ಬಂದಾಗ ಆ ಚಿತ್ರವನ್ನು 50 ಸಲ ನೋಡಿದ್ದುಂಟು, ಅವರ ಚಿತ್ರ ಬಿಡುಗಡೆ ಆದಾಗ ಬೆಂಚ್ ನಲ್ಲಿ ಕೂತು ಕಾಸು ಎಸೆದದ್ದುಂಟು , ಸ್ಟಾರ್ ಗಳನ್ನು ಮಾಡಿ ಮೆರವಣಿಗೆ ಮಾಡಿದ್ದುಂಟು .
ಹೌದು ಬಾಲ್ಯದಿಂದಲೂ, ಯಜಮಾನ ಚಿತ್ರ ರಾಯಚೂರಿನಲ್ಲಿ 220 ದಿನಗಳ ಐತಿಹಾಸಿಕ ದಾಖಲೆ ಮಾಡಿದಾಗ ಆ ಕಾರ್ಯಕ್ರಮ ಅಂದಿನ ಚಂದ್ರಕಾಂತ ಚಿತ್ರ ಮಂದಿರದಲ್ಲಿ ದೊಡ್ಡ ಮಟ್ಟದ ಸಮಾರಂಭ ಮಾಡಿದ್ದುಂಟು. ವಿಷ್ಣುವರ್ಧನ್ ಅಂದರೆ ಪಂಚ ಪ್ರಾಣ ಆದರೆ ಇಂದು ಆ ಪ್ರಾಣ ಭುವಿಯಲ್ಲಿ ಇಲ್ಲ ಅಷ್ಟೇ ಈ ಪ್ರಾಣದಲ್ಲಿದ್ದಾರೆ . 1972 ರಲ್ಲಿ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕ ಪುಟ್ಟಣ್ಣ ಕಣಗಾಲರ “ನಾಗರ ಹಾವು ” ಚಿತ್ರದಲ್ಲಿ ಮೂಲಕ ಚಿತ್ರದುರ್ಗದ ಕಲ್ಲಿನ ಕೋಟೆ ಸುತ್ತುತ್ತ ಕನ್ನಡ ನಾಡಿನ ಚರಿತೆಯ ಹೇಳುತ್ತ ಕನ್ನಡಿಗರಿಗೆ ಪರಿಚಯವಾದರು ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿ ಮುಂಚಿದರು. ನಂತರ ತೆರೆಕಂಡ ಹೊಂಬಿಸಿಲು , ಭೂತಯ್ಯನ ಮಗ ಅಯ್ಯು , ಬಂಧನ , ಮುತ್ತಿನ ಹಾರ , ಲಾಲಿ , ಸುಪ್ರಭಾತ , ಕರ್ಣ , ಸಾಹಸ ಸಿಂಹ, ದಿಗ್ಗಜರು,ಯಜಮಸನ, ಆಪ್ತ ಮಿತ್ರ ಹೀಗೆ ನೂರಾರು ಯಶಸ್ವಿ ಚಿತ್ರಗಳನ್ನು ನೀಡಿದರು.
ಕನ್ನಡ ಚಿತ್ರರಂಗ ಕಂಡ ಅಪರೂಪದ ನಾಯಕ , ಸ್ಪುರದ್ರೂಪಿ ನಟ, ಚಿನ್ನದಂಥಾ ಮಗ ,ಕರುಣಾಮಯಿ, ಸಾಹಸ ಸಿಂಹ ವಿಷ್ಣುವರ್ಧನ್ ಅಂದರೆ ತಪ್ಪಲ್ಲ ತಮ್ಮ ನೈಜ ಅಭಿನಯದ ಮೂಲಕ ಬೆಳ್ಳಿ ತೆರೆಯಲ್ಲಿ ಬಂಗಾರದ ನಾಯಕನಾಗಿ ಮೆರೆದರು 200 ಕ್ಕೂ ಅಧಿಕ ಚಿತ್ರಗಳು,ರಾಜ್ಯ ,ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರಗಳಲ್ಲಿನ ಅಭಿನಯ , ಸಾಮಾಜಿಕ, ಕೌಟುಂಬಿಕ, ಚಿತ್ರಗಳಿಗೆ ಹೇಳಿ ಮಾಡಿಸಿದ ನಟ, ಶ್ರೇಷ್ಠ ನಟ ಪ್ರಶಸ್ತಿ ಪಡೆದ ವಿಷ್ಣುವರ್ಧನ್ ರವರಿಗೆ ಹುಡುಕಿಕೊಂಡು ಬಂದ ಪ್ರಶಸ್ತಿ, ಬಿರುದು ಗಳಿಗೆ ಲೆಕ್ಕವಿಲ್ಲ , ಡಾಕ್ಟರೇಟ್, ಫಿಲ್ಮ್‌ಫೇರ್ ನಂತಹ ಅತ್ಯುತ್ತಮ ಪ್ರಶಸ್ತಿಗಳು ವಿಷ್ಣುವರ್ಧನ್ ಮುಡಿಗೇರಿವೆ ಅವರ ಚಿತ್ರಗಳು ಒಂದೊಂದು ಇತಿಹಾಸ ಹೇಳುತ್ತಿವೆ ಆದರೆ ಕನ್ನಡಿಗರ ಅಭಿಮಾನದ ನಟ ಈಗಿಲ್ಲ ಇದ್ದರೆ 70 ನೆಯ ವರ್ಷದ ಹುಟ್ಟು ಹಬ್ಬ ರಾಜ್ಯದಲ್ಲಿ ಸಂಭ್ರಮ ಇರುತ್ತಿತ್ತು ಅದೇನಿದ್ದರು ಈಗ ನೆನಪು ಮಾತ್ರ , ಬಣ್ಣದ ಬದುಕಿನಲ್ಲಿ ಎಂದೂ ಕಪ್ಪು ಚುಕ್ಕಿ ಇಟ್ಟು ಕೊಂಡವರಲ್ಲ ಒಬ್ಬ ಆದರ್ಶ ಕಲಾವಿದರಾಗಿ ಬಾಳಿದರು ಅದೆಷ್ಟೋ ಕಷ್ಟಕಾಲದಲ್ಲಿರು ಜನರಿಗೆ ಗುಪ್ತವಾಗಿ ಸಹಾಯ ಮಾಡಿರುವಂತ ಗುಣವಂತ ವಿಷ್ಣುವರ್ಧನ್. ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೋ…ಎಂಬಂತೆ ದಶಕಗಳ ಕಾಲ ವಿವಿಧ ಪಾತ್ರಗಳಲಿ ಜೀವ ತುಂಬಿ ಅಭಿನಯಿಸಿದರು ಅವರ ಚಿತ್ರಗಳು ಇಂದಿಗೂ ಜೀವಂತ ಕತೆಗಳಾಗಿವೆ ಈ ಕನ್ನಡ ಚಿತ್ರರಂಗ ಇರೋವರೆಗೆ ಶಾಶ್ವತವಾಗಿ ವಿಷ್ಣುವರ್ಧನ್ ಕನ್ನಡಿಗರಲ್ಲಿ ಇರುತ್ತಾರೆ . ಸರಕಾರಗಳು ಇನ್ನೂ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಮೀನಾ ಮೇಷ ಮಾಡುತ್ತಿವೆ ರಾಜಕೀಯ ಬದಿಗೊತ್ತಿ ಒಬ್ಬ ಅಪ್ರತಿಮ ಕಲಾವಿದನ ಸ್ಮಾರಕ ನಿರ್ಮಾಣ ಮಾಡಿ ಹೊಸ ಪೀಳಿಗೆಗೆ ಅವರ ಚಿತ್ರ ಜೀವನ ಆದರ್ಶ ಕತೆ ಹೇಳುವಂತಾಗಬೇಕು ಆಗಲೇ ವಿಷ್ಣುವರ್ಧನ್ ಆತ್ಮಕ್ಕೆ ಶಾಂತಿ ಅಲ್ಲವೇ…?

ಪಲುಗುಲ ನಾಗರಾಜ
ರಾಯಚೂರು