ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಿಧಿವಶ

ಬೆಂಗಳೂರು,ಡಿ.8- ಕನ್ನಡ ಚಿತ್ರರಂಗದ  ಹಿರಿಯ ನಟಿ ಲೀಲಾವತಿ ಇಂದು ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಈ ಮೂಲಕ ಕನ್ನಡ ಚಿತ್ರರಂಗದ ಹಿರಿಯ ಕೊಂಡಿ ಕಳಚಿಬಿದ್ದಿದೆ.

ವಯೋಸಹಜ ಖಾಯಿಲೆಯಿಂದ ಹಲವು ದಿನದಿಂದ ಹಾಸಿಗೆ ಇಡಿದಿದ್ದ ಲೀಲಾವತಿ ಇಂದು ಸಂಜೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೃದಾಯಘಾತದಿಂದ ನಿಧನರಾಗಿದ್ದಾರೆ.

ಕನ್ನಡ, ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ೬೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಲೀಲಾವತಿಯ ಅವರು, ನಾಯಕಿ ಅಮ್ಮ, ಅಜ್ಜಿ ಪೋಷಕ ಪಾತ್ರಗಳಲ್ಲಿ ಜನಮಾನಸದಲ್ಲಿ ಅಚ್ಛಳಿಯದೆ ಉಳಿದಿದ್ದಾರೆ.

ನಾಗಕನ್ನಿಕಾ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು, ಮಾಂಗಲ್ಯ ಯೋಗ ಚಿತ್ರದಿಂದ ನಾಯಕಿಯಾಗಿ ಗುರುತಿಸಿಕೊಂಡಿದ್ದರು.

1938 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದ್ದ ಲೀಲಾವತಿ ಅವರು, ಡಾ.ರಾಜ್‌ಕುಮಾರ್ ಸೇರಿದಂತೆ ಅನೇಕ ಖ್ಯಾತ ನಟರ ಜೊತೆ ನಟಿಸುವ ಮೂಲಕ ತಾವು ನಟಿಸುತ್ತಿದ್ದ ಚಿತ್ರಕ್ಕೆ ಜೀವತುಂಬಿದ ಹೆಗ್ಗಳಿಕೆ ಅವರದು.

ನಾ ನಿನ್ನ ಮರೆಯಲಾರೆ, ಎರಡು ನಕ್ಷತ್ರಗಳು, ಭಕ್ತ ಕುಂಬಾರ, ಧರ್ಮ ವಿಜಯ, ರಣಧೀರ ಕಂಠೀರವ, ರಾಣಿಚೆನ್ನಮ್ಮ, ಕುಲವದು, ವೀರಕೇಸರಿ, ಮದುವೆ ಮಾಡಿ ನೋಡು, ಸೇರಿದಂತೆ ಕನ್ನಡದಲ್ಲೇ 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ, ಪರಭಾಷೆಗಳೂ ಸೇರಿದಂತೆ 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

2000 ನೇ ಸಾಲಿನಲ್ಲಿ ಜೀವಮಾನದ ಸಾಧನೆಗಾಗಿ ತುಮಕೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಧವಿ ಪಡೆದಿದ್ದರು. ಇದಲ್ಲದೇ, ಅನೇಕ ರಾಜ್ಯ ಪ್ರಶಸ್ತಿ ಮತ್ತು ಫಿಲಂ ಫೇರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.

ನೆಲಮಂಗಲ ಬಳಿಯ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಪುತ್ರ ವಿನೋದ್‌ರಾಜ್ ಜೊತೆ ವಾಸ ಮಾಡುತ್ತಿದ್ದರು. ಜೊತೆಗೆ ಆ ಭಾಗದಲ್ಲಿ ರೈತರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದ್ದರು.

 
ಚಿತ್ರರಂಗ ಸಂತಾಪ:

ಕನ್ನಡ ಚಿತ್ರರಂಗ ಹಿರಿಯ ನಟಿ ಲೀಲಾವತಿ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕ ಮಂದಿ ಸಂತಾಪ ಸೂಚಿಸಿ ಹಿರಿಯ ಜೀವಕ್ಕೆ ಸಂತಾಪ ಸೂಚಿಸಿದ್ದಾರೆ.

ಸೋಲದೇವನಹಳ್ಳಿ ತೋಟದದಲ್ಲಿ ನಾಳೆ ಅಂತ್ಯಕ್ರಿಯೆ

ವಯೋಸಹಜ ಖಾಯಿಲೆಯಿಂದ ನಿಧನರಾದ ಕನ್ನಡ ಚಿತ್ರರಂಗದ ಅಭಿಜಾತ ಕಲಾವಿದೆ ಲೀಲಾವತಿ ಅವರ ಅಂತ್ಯ ಸಂಸ್ಕಾರ ನಾಳೆ ಸೋಲದೇವನಹಳ್ಳಿಯ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ನಾಳೆ ಮದ್ಯಾಹ್ನದವರೆಗೆ ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಇಂದು ರಾತ್ರಿ ಯಿಂದಲೇ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರ ದರ್ಶನಕ್ಕೆ ಯಾವುದೇ ತೊಂದರೆ ಆಗದಂತೆ ಎಲ್ಲಾ ಸಿದ್ಸತೆ ಮಾಡಿಕೊಳ್ಳಲಾಗಿದೆ.