ಕನ್ನಡ ಕಾಯಕ ಶ್ರೀ ಪ್ರಶಸ್ತಿಗೆ ಭಾಜನರಾದ ಪ್ರಭು ಚನ್ನಬಸವ ಸ್ವಾಮೀಜಿ

ಅಥಣಿ :ಆ.28: ಗಡಿನಾಡಿನ ಕನ್ನಡದ ಗುಡಿಯಂದೇ ಕರೆಯಲ್ಪಡುವ ಜಂಗಮಲಿಂಗ ಸುಕ್ಷೇತ್ರ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಅವರು ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ 2023ರ ರಾಜ್ಯಮಟ್ಟದ ಕನ್ನಡ ಕಾಯಕ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಭು ಚನ್ನಬಸವ ಸ್ವಾಮೀಜಿ ಅವರು ಸಮಾಜಸೇವಾ ದೀಕ್ಷೆಯೊಂದಿಗೆ ಸಾಹಿತ್ಯ ರಚನೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕವಿ, ಆಧುನಿಕ ವಚನಕಾರ, ಖ್ಯಾತ ಪ್ರವಚನ ವಾಗ್ಮಿ, ನೂರಾರು ಸಾಂಸ್ಕøತಿಕ ಸಮಾರಂಭಗಳ ಹರಿಕಾರ, ಸಂಘಟನಾ ಚತುರಾಗಿರುವ ಅವರು ‘ಅಥಣೀಶ’ ಎಂಬ ಕಾವ್ಯನಾಮದಲ್ಲಿ ಕೃತಿಗಳನ್ನು ರಚಿಸಿದ್ದಾರೆ.
ಕನ್ನಡ ನಾಡು, ನುಡಿ,ಕಲೆ, ಸಂಸ್ಕೃತಿ ಮತ್ತು ಆಧ್ಯಾತ್ಮ ಸಂವರ್ಧನೆಗಾಗಿ ಶ್ರಮಿಸುತ್ತಿರುವ ಮೋಟಗಿ ಮಠದ ಶ್ರೀಗಳು ಕರೋನಾ ಸಂದರ್ಭದ ವಿಶ್ರಾಂತಿ ಸಮಯದಲ್ಲಿ ಮಹಾತ್ಮರ ಚರಿತಾಮೃತ ಮಹಾಕಾವ್ಯವನ್ನು ರಚನೆ ಮಾಡಿ ನಾಡಿನ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆಗೊಳಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ವಿಶೇಷ ಕೊಡುಗೆಯನ್ನಾಗಿ ನೀಡಿದ್ದಾರೆ.
ಅಥಣಿ ಗಡಿ ಭಾಗದಲ್ಲಿ ಕನ್ನಡ ಕಾಯಕ ಮಾಡುತ್ತಿರುವ ಶ್ರೀಗಳ ಸಾಧನೆಯನ್ನು ಗುರುತಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿರುವ ನಾಡೋಜ ಡಾ. ಮಹೇಶ್ ಜೋಶಿ ಅವರು ಕಸಾಪ ವತಿಯಿಂದ ಕೊಡ ಮಾಡುವ ರಾಜ್ಯಮಟ್ಟದ ಕಾಯಕ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಬರುವ ದಿ. 31 ರಂದು ಸಾಯಂಕಾಲ 4 ಗಂಟೆಗೆ ಬೆಂಗಳೂರಿನ ಕೃಷ್ಣರಾಜ ಪರಿಷತ್ ಮಂದಿರದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿರುವ ಶ್ರೀಗಳಿಗೆ ಅಥಣಿ ಕನ್ನಡ ಅಭಿಮಾನಿಗಳು, ಸಾಹಿತಿಗಳು, ಕನ್ನಡಪರ ಹೋರಾಟಗಾರರು, ಶ್ರೀಮಠದ ಸದ್ಭಕ್ತರು ಅಭಿನಂದಿಸಿದ್ದಾರೆ.