ಕನ್ನಡ ಉಳಿಸಿ, ಬೆಳೆಸುವ ಹೊಣೆ‌ ನಮ್ಮ ಮೇಲಿದೆ: ಸುರೇಶ್

ಕಲಬುರಗಿ :ನ.07: ಕನ್ನಡ ಭಾಷೆ, ನಾಡು- ನುಡಿ- ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಕನ್ನಡಿಗರು ಹೊತ್ತುಕೊಳ್ಳಬೇಕು. ಅನೇಕ ಮಹನೀಯರು ಕನ್ನಡದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವುಗಳನ್ನು ಉಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾವಲುಪಡೆ, ರಾಜ್ಯಾಧ್ಯಕ್ಷ ಎಸ್. ಸುರೇಶ ಬಳ್ಳಾರಿ ಅವರು ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವಪಡೆ ಹಮ್ಮಿಕೊಂಡಿದ್ದ 66ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಪುನೀತ್ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದ ಸಂಸ್ಕೃತಿ ಎತ್ತರದ ಸ್ಥಾನ ಪಡೆದಿದೆ. ಕನ್ನಡಿಗರಲ್ಲಿ ಭಾಷಾಭಿಮಾನ ಇದೆ. ದುರಭಿಮಾನ ಇಲ್ಲ; ಆದ್ದರಿಂದ ಎಲ್ಲರೂ ಇಲ್ಲಿಗೆ ಬರಲು ಬಯಸುತ್ತಾರೆ ಎಂದು ಹೇಳಿದರು.

ಅಭಿಮಾನ ಇದ್ದಾಗ ಭಾಷಾ ಪೋಷಣೆ ಕುರಿತು ಚಿಂತಿಸುತ್ತೇವೆ. ದುರಭಿಮಾನ ಇದ್ದರೆ ಇನ್ನೊಂದು ಭಾಷೆಯನ್ನು ದ್ವೇಷಿಸಲು ಬಯಸುತ್ತೇವೆ. ಎಲ್ಲ ಭಾಷೆಯನ್ನು ಒಪ್ಪಿಕೊಂಡು ನಮ್ಮ ಭಾಷೆ ಬೆಳೆಸಲು ಮುಂದಾಗುತ್ತೇವೆ ಎಂದು ಅವರು ಎಂದರು.

ಜ್ಯು. ಪುನೀತ್ ಖ್ಯಾತಿಯ ಚಂದ್ರು ಮೌರ್ಯ ಮಾತನಾಡಿ, ಅನೇಕ ಕನ್ನಡ ಶಬ್ದಗಳು, ಕ್ರಿಯಾಪದಗಳು ಇದೀಗ ಮಾಯವಾಗುತ್ತಿವೆ. ಭಾಷೆ ಬಳಸುತ್ತಿದ್ದರೆ ಮಾತ್ರ ಅದು ಉಳಿಯುತ್ತದೆ. ಕನ್ನಡ ಭಾಷೆಯ ಬಳಕೆ, ಕನ್ನಡ ಗೊತ್ತಿಲ್ಲದವರಿಗೆ ಕನ್ನಡ ಕಲಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ವಿಜಯನಗರ, ರಾಷ್ಟ್ರಕೂಟರ ಸಾಮ್ರಾಜ್ಯ, ಅನೇಕ ಕವಿಗಳು ಕನ್ನಡ ನಾಡು ನುಡಿ ರಕ್ಷಣೆಗೆ ಶ್ರಮಿಸಿದ್ದಾರೆ. ಕನ್ನಡ ಭಾಷೆ, ನೆಲ, ಜಲ ಮತ್ತು ಸಂಸ್ಕøತಿಗೆ ನಾವು ವರ್ಷಪೂರ್ತಿ ಶ್ರಮಿಸಬೇಕು. ಕೇವಲ ನವೆಂಬರ್ ತಿಂಗಳ ಒಂದು ದಿನ ಕನ್ನಡ ನೆನಪಾದರೆ ಸಾಲದು ಎಂದು ತಿಳಿಸಿದರು.

ವೇದಿಕೆ ಮೇಲೆ ಕಸಾಪ ಗೌರವ ಕಾರ್ಯದರ್ಶಿ ಯಶವಂತ ಅಷ್ಟಗಿ, ಸುರೇಶ ಬಡಿಗೇರ, ಸಾದಿಕ್ ಅಲಿ ದೇಶಮುಖ್, ಸಚಿನ್ ಫರತಾಬಾದ್, ಎಂ.ಡಿ. ಸಿದ್ದಿಕಿ, ಗೋಪಾಲ ನಾಟೀಕಾರ, ಮಲ್ಲಿಕಾರ್ಜುನ ಕಿಳ್ಳಿ ಸೇರಿದಂತೆ ಇನ್ನಿತರರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಗೌರವಿಸಿ ಪ್ರಶಸ್ತಿ ನೀಡಲಾಯಿತು.
ಪದಾಧಿಕಾರಿಗಳಾದ ಪ್ರಲ್ಹಾದ್ ಹಡಗೀಲಕರ್, ರವಿ ವಾಲಿ, ಚರಣರಾಜ ರಾಠೋಡ, ಅರವಿಂದ ನಾಟೀಕಾರ, ನಾಗರಾಜ ಮಡಿವಾಳ, ಸೇರಿದಂತೆ ಇನ್ನಿತರರಿದ್ದರು. ವೇದಿಕೆ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ನೇತೃತ್ವ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ರಾಜಶೇಖರ ಮಾಂಗ್ ನಿರೂಪಿಸಿ, ವಂದಿಸಿದರು.