
ಬಳ್ಳಾರಿ ಮೇ 05: ಕನ್ನಡ ಸಾಹಿತ್ಯ ಪರಿಷತ್ತಿಗೆ 109 ವರ್ಷಗಳ ಸಂಭ್ರಮ. ಇದರ ಸಂಸ್ಥಾಪನಾ ದಿನಾಚರಣೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಸಿರುಗುಪ್ಪದ ತಾಲೂಕು ಘಟಕದಿಂದ ಎಸ್.ಇ.ಎಸ್. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಇಂದು ರಹಮ್ಮಿಕೊಳ್ಳಲಾಗಿತ್ತು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಕೆ ಎಂ ಚಂದ್ರಕಾಂತ್ ಇವರು “ಕನ್ನಡ ಆಸ್ಮಿತೆ ಮತ್ತು ಕನ್ನಡ ಸಾಹಿತ್ಯ ಪರಿಷತ್” ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ ಕನ್ನಡ ಭಾಷೆಯ ಬಗ್ಗೆ ಅಪಾರ ಪ್ರೀತಿಯನ್ನು ಒಳಗೊಳ್ಳಬೇಕು, ಕನ್ನಡ ಆಸ್ಮಿತೆ ಎಂದರೆ ನಮ್ಮ ನಂಬಿಕೆ, ವರ್ತನೆ, ಆಚರಣೆಗಳ ಪ್ರತಿಬಿಂಬವಾಗಿದೆ. ಭಾಷೆಯು ಭಾವನಾತ್ಮಕ ವಿಷಯಗಳನ್ನು ಒಳಗೊಳ್ಳುವುದರ ಜೊತೆಗೆ ನಮ್ಮ ನಾಡಿನ ನೆಲ, ಜಲ, ಪ್ರಾಕೃತಿಕ ಸಂಪನ್ಮೂಲಗಳೊಂದಿಗೆ ಅವಿನಾವಭಾವ ಸಂಬಂಧವಿದೆ , ಅವುಗಳ ರಕ್ಷಣೆಯ ಜವಾಬ್ದಾರಿಯೊಂದಿಗೆ ನಮ್ಮಲ್ಲಿ ಐಕ್ಯತೆಯನ್ನು ಉಂಟು ಮಾಡುವುದೇ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಕೆಲಸವಾಗಿದೆ, ಪರಿಷತ್‌ಗೆ ಶತಮಾನದ ಇತಿಹಾಸವಿದ್ದು ಯಾವುದೇ ಭಾಷೆಗೆ ಇರಲಾರದಷ್ಟು ಬೃಹತ್ ಸಂಖ್ಯೆಯ ಆಜೀವ ಸದಸ್ಯರನ್ನು ಒಳಗೊಂಡಿದೆ ಎಂದು ತಿಳಿಸಿದರು. ಕನ್ನಡ ನಮ್ಮ ಬದುಕಿನ ಭಾಷೆಯಾದರೆ ಇತರ ಭಾಷೆಗಳು ಕೇವಲ ವ್ಯವಹಾರಿಕ ಭಾಷೆಗಳಾಗಿರುತ್ತವೆ, ಮಾತೃಭಾಷೆ ನಮ್ಮ ಆಸ್ಮಿತೆಯ ಪ್ರತೀಕವಾದಾಗ ಮಾತ್ರ ಕನ್ನಡ-ಕನ್ನಡಿಗ ಉಳಿಯಲು, ಬೆಳೆಯಲು ಸಾಧ್ಯವಿದೆ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಸಾಪ ಸಿರುಗುಪ್ಪ ಘಟಕದ ಅಧ್ಯಕ್ಷರಾದ ಡಾ.ಮಧುಸೂದನ ಕಾರಿಗನೂರು ಕನ್ನಡ ನಾಡು, ನುಡಿ, ಸಂಸ್ಕೃತಿ ರಕ್ಷಣೆಗಾಗಿ 1915 ರಲ್ಲಿ ಆಗಿನ ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಳಜಿ ವಹಿಸಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಪರಿಷತ್ ಸಂಸ್ಥಾಪನೆ ಗೊಳ್ಳಲು ಪ್ರಮುಖ ಕಾರಣರಾಗಿದ್ದರು. ಆಗಿನಿಂದ ಈಗಿನವರೆಗೂ ಹಲವು ಮಹನೀಯರು ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿ ಕನ್ನಡ ನಾಡು, ನುಡಿ ಬೆಳವಣಿಗೆಗೆ ನೆರವಾಗಿದ್ದಾರೆ ಎಂದು ಹೇಳಿದರು. ಕನ್ನಡ ಉಳಿಯಬೆಕಾದರೆ ಭಾಷೆಯನ್ನು ಮಾತನಾಡಬೇಕು ಮತ್ತು ದಿನನಿತ್ಯದ ವ್ಯವಹಾರದಲ್ಲಿ ನಿರಂತರವಾಗಿ ಬಳಸುತ್ತಿರಬೇಕೆಂದು ಕರೆ ನೀಡಿದರು.
ಸಮಾರಂಭದ ಮುಖ್ಯ ಆತಿಥಿಗಳಾಗಿ ಭಾಗವಹಿಸಿದ್ದ ಎಸ್.ಇ.ಎಸ್. ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ.ಮೊಹಮ್ಮದ್ ಫಯಾಜ್ ಮಾತನಾಡಿ, ಕಲೆ, ಸಾಹಿತ್ಯ, ಸಂಗೀತ, ನಾಟಕಗಳಿಂದಲೂ ಕನ್ನಡ ಉಳಿದಿದೆ. ಪರಿಷತ್ತು ಪ್ರಕಟಿಸಿರುವ, ಬೇರೆಲ್ಲೂ ಸಿಗದ ಪುಸ್ತಕಗಳು ಇಲ್ಲಿನ ಗ್ರಂಥಾಲಯದಲ್ಲಿ ಸಿಗುತ್ತವೆ. ಸಂಶೋಧಕರು, ಸಾಹಿತ್ಯಾಸಕ್ತರು ಬಂದು ಇದರ ಸದುಪಯೋಗಪಡಿಸಿಕೊಳ್ಳಬಹುದು ಎಂದು ಹೇಳಿದರು.
ಕುಮಾರಿ ಈರಮ್ಮನವರ ಪ್ರಾರ್ಥಾನಾ ಗೀತೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮವನ್ನು ಉಪನ್ಯಾಸಕರಾದ ಶ್ರೀ.ಸಿದ್ದಲಿಂಗಯ್ಯನವರು ನಿರೂಪಿಸಿ ವಂದಿಸಿದರು. ಉಪನ್ಯಾಸಕರಾದ ಶ್ರೀಮತಿ ಮಲ್ಲಮ್ಮ ಹಾಗೂ ಶ್ರೀ ವೆಂಕಟೇಶ್ ಉಪಸ್ತಿತರಿದ್ದರು.
One attachment • Scanned b