‘ಕನ್ನಡಿಗ’ ನಾಗಿ ಕನಸುಗಾರ ರವಿಚಂದ್ರನ್

ಬೆಂಗಳೂರು,ಅ 27 – ಕನಸುಗಾರ ರವಿಚಂದ್ರನ್ ಈಗ ಕನ್ನಡಿಗನಾಗಿದ್ದಾರೆ.
ಓಂಕಾರ್ ಮೂವೀಸ್ ಲಾಂಛನದಲ್ಲಿ ಎನ್.ಎಸ್. ರಾಜ್ ಕುಮಾರ್ ನಿರ್ಮಾಣದ, ಜಟ್ಟ, ಮೈತ್ರಿ, ಅಮರಾವತಿಯಂತಹ ಸದಭಿರುಚಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ ಬಿ.ಎಂ. ಗಿರಿರಾಜ್ ನಿರ್ದೇಶನದಲ್ಲಿ ‘ಕನ್ನಡಿಗ’ ಅರಂಭವಗೊಂಡಿದೆ.

ಕೇಜ್ರಿಸ್ಟಾರ್ ವಿ.ರವಿಚಂದ್ರನ್ ಅಭಿನಯದ ಈ ಚಿತ್ರ, ಐತಿಹಾಸಿಕ ಕಥಾಹಂದರ ಹೊಂದಿದ್ದು, ಡಾ. ಶಿವರಾಜ್ ಕುಮಾರ್ ಆರಂಭ ಫಲಕ ತೋರಿ, ರಾಘವೇಂದ್ರ ರಾಜ್ ಕುಮಾರ್ ಕ್ಯಾಮೆರಾ ಸ್ವಿಚ್ ಆನ್ ಮಾಡುವ ಮೂಲಕ ʻಕನ್ನಡಿಗʼ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ
ಸಾಮಾನ್ಯವಾಗಿ ಆಳ್ವಿಕೆ ನಡೆಸಿದ ರಾಜ-ರಾಣಿಯರ ಕಥೆಗಳು ಎಲ್ಲೆಡೆ ದಾಖಲಾಗಿರುತ್ತವೆ. ಆದರೆ ಪ್ರಜೆಗಳ ಕೊಡುಗೆಗಳು ನೆನಪಿಗೇ ಬರುವುದಿಲ್ಲ. ಈ ನಾಡಿನ ಇತಿಹಾಸವನ್ನು ದಾಖಲಿಸುವಲ್ಲಿ ಲಿಪಿಕಾರರ ವಂಶದ ಕೊಡುಗೆ ಅಪಾರ. 1858ರ ನಂತರದ ಕಾಲಘಟ್ಟವನ್ನು ʻಕನ್ನಡಿಗʼನೊಂದಿಗೆ ಮರುಸೃಷ್ಟಿಸಲಾಗುತ್ತಿದೆ. ಇಲ್ಲಿ ರವಿಚಂದ್ರನ್ ಲಿಪಿಕಾರ ಗುಣಭದ್ರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯಾಗಿ ಪಾವನಾ ನಟಿಸುತ್ತಿದ್ದಾರೆ. ಸಂಕಮ್ಮಬ್ಬೆಯಾಗಿ ಸ್ವಾತಿ ಚಂದ್ರಶೇಖರ್, ಕಿಟ್ಟಲ್ ಪಾತ್ರಕ್ಕೆ ಜೆಮಿ ವಾಲ್ಟರ್ ಅವರನ್ನು ಕರೆತರಲಾಗುತ್ತಿದೆ. ಕಮರೀಲ ಭಟ್ಟನಾಗಿ ಚಿ. ಗುರುದತ್, ಮಲ್ಲಿನಾಥನಾಗಿ ಬಾಲಾಜಿ ಮನೋಹರ್, ಮಠದ ಸ್ವಾಮಿಯ ಪಾತ್ರದಲ್ಲಿ ದತ್ತಣ್ಣ ಮತ್ತು ಅಚ್ಯುತ್ ಕುಮಾರ್ ಹರಿಗೋಪಾಲನ ಪಾತ್ರ ನಿರ್ವಹಿಸುತ್ತಿದ್ದಾರೆ. ರಾಣಿ ಚಿನ್ನಬೈರಾದೇವಿ ಎನ್ನುವ ಪ್ರಮುಖ ಪಾತ್ರದಲ್ಲಿ ನಟಿ ಸುಮಲತಾ ಅಂಬರೀಶ್ ಕಾಣಿಸಿಕೊಳ್ಳಲಿದ್ದಾರೆ.
ʻಪ್ರತಿ ಸಿನಿಮಾ ಕೂಡಾ ನನಗೆ ಹೊಸದೇ. ಕನ್ನಡಿಗನಾಗಿ ಕಾಣಿಸಿಕೊಳ್ಳುತ್ತಿರುವುದು ನನಗೆ ನಿಜಕ್ಕೂ ಸವಾಲಿನ ಕೆಲಸವೇ ಆಗಿದೆʼ ಎನ್ನುವುದು ರವಿಚಂದ್ರನ್ ಅವರ ಅಭಿಪ್ರಾಯ.

ಚಿತ್ರದಲ್ಲಿ ಗಟ್ಟಿಗಿತ್ತಿಯ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಗಿರಿರಾಜ್ ಅವರ ಈ ಹಿಂದಿನ ಸಿನಿಮಾಗಳಲ್ಲೂ ನಟಿಸಿದ್ದೇನೆ. ನನಗಾಗಿ ಈ ಚಿತ್ರದಲ್ಲೂ ಪಾತ್ರ ಸೃಷ್ಟಿಸಿರುವುದು ಸಂತಸ ತಂದಿದೆ ಎಂದು ಪಾವನಾ ಹೇಳಿದ್ದಾರೆ.

ಸಿನಿಮಾ ಪ್ರಪಂಚದ ಅದ್ಭುತ ತಂತ್ರಜ್ಞ ರವಿ ಚಂದ್ರನ್. ಕನ್ನಡಿಗ ಸಿನಿಮಾದ ಮೂಲಕ ಮೊದಲ ಬಾರಿಗೆ ಅವರೊಂದಿಗೆ ಬಣ್ಣ ಹಚ್ಚುತ್ತಿದ್ದೇನೆ. ಅವರ ತಮ್ಮನ ಪಾತ್ರ ನನಗೆ ದಕ್ಕಿರುವುದು ನನ್ನ ಪಾಲಿನ ಹೆಮ್ಮೆ ಎಂದು ನಟ ಬಾಲಾಜಿ ಮನೋಹರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನೂರೈವತ್ತು ವರ್ಷಕ್ಕೂ ಹಿಂದಿನ ಕಥೆ ʻಕನ್ನಡಿಗʼನದ್ದಾಗಿದ್ದು, ಪಾತ್ರಗಳ ಜೊತೆಗೆ ಅಂದಿನ ಪರಿಸರ, ಕಟ್ಟಡಗಳನ್ನು ಮರುಸೃಷ್ಟಿ ಮಾಡುವುದು ನಿಜಕ್ಕೂ ಸವಾಲಿನ ಸಂಗತಿಯಾಗಿದೆ. ಹಲವಾರು ಕೃತಿಗಳನ್ನು ಪರಾಮರ್ಶಿಸಿ ಸೆಟ್ ಗಳನ್ನು ರೂಪಿಸುತ್ತಿದ್ದಾರೆ. ಸಾಗರ, ಚಿಕ್ಕಮಗಳೂರಿನ ಸುತ್ತಮುತ್ತಲಿನ ಕೆಲವು ಪ್ರದೇಶಗಳನ್ನು ಹಾಗೆಯೇ ಬಳಸಿಕೊಳ್ಳಲಾಗುತ್ತಿದೆ. ನವೆಂಬರ್ ತಿಂಗಳಲ್ಲಿ ಮೂವತ್ತು ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಸಿ, ಬಹುತೇಕ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುವುದು ಚಿತ್ರತಂಡದ ಸದ್ಯದ ಯೋಜನೆ.
ಜಿ.ಎಸ್.ವಿ ಸೀತಾರಾಮ್ ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತ, ಅರ್ಜುನ್ ಕಿಟ್ಟು ಸಂಕಲನ, ಹೊಸ್ಮನೆ ಮೂರ್ತಿ ಅವರ ಕಲಾ ನಿರ್ದೇಶನ ʻಕನ್ನಡಿಗʼ ಚಿತ್ರಕ್ಕಿದೆ.

-:ಮೂವತ್ತು ವರ್ಷಗಳ ಹಿಂದೆ ನೊಂದಾಯಿಸಿದ್ದ ಶೀರ್ಷಿಕೆ:-
ರವಿಚಂದ್ರನ್ ಕನ್ನಡ ಚಿತ್ರರಂಗದ ಅಪ್ರತಿಮ ಕನಸುಗಾರ. ದಶಕಗಳು ಉರುಳಿದರೂ ಅವರ ಕಲ್ಪನೆ ಮಾಸುವುದಿಲ್ಲ ಅನ್ನೋದಕ್ಕೆ ಇದೂ ಕೂಡಾ ಒಂದು ನಿದರ್ಶನ. ಬರೋಬ್ಬರಿ ಮೂವತ್ತು ವರ್ಷಗಳ ಹಿಂದೆ ರವಿಚಂದ್ರನ್ ಅವರು ʻಕನ್ನಡಿಗʼ ಹೆಸರಿನ ಶೀರ್ಷಿಕೆಯನ್ನು ರಿಜಿಸ್ಟರ್ ಮಾಡಿಸಿಟ್ಟಿದ್ದರು. ಅದಾಗಿ ಇಪ್ಪತ್ತು ವರ್ಷಗಳು ಕಳೆದನಂತರ ಇದೇ ಎನ್.ಎಸ್. ರಾಜ್ ಕುಮಾರ್ ರವಿಚಂದ್ರನ್ ಅವರ ಬಳಿ ಹೋಗಿ ʻಕನ್ನಡಿಗʼ ಶೀರ್ಷಿಕೆಯನ್ನು ನನ್ನ ಸಂಸ್ಥೆಗೆ ಬಿಟ್ಟುಕೊಡಿ, ನಾನೊಂದು ಸಿನಿಮಾ ಮಾಡಬೇಕು ಎಂದು ವಿನಂತಿಸಿದ್ದರು. ಆದರೆ, ರವಿಚಂದ್ರನ್ ʻಕನ್ನಡಿಗ ಎನ್ನುವ ಹೆಸರನ್ನು ಬಹಳ ವರ್ಷಗಳಿಂದಲೂ ಕಾಪಾಡಿಕೊಂಡು ಬಂದಿದ್ದೀನಿ. ಆ ಟೈಟಲ್ಲಿನ ಸಿನಿಮಾದಲ್ಲಿ ನಾನೇ ನಟಿಸಬೇಕು. ಕೊಡಲು ಸಾಧ್ಯವಿಲ್ಲʼ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟಿದ್ದರು. ಬೇಸರಿಸಿಕೊಳ್ಳದ ರಾಜ್ ಕುಮಾರ್ ʻವೀರಕನ್ನಡಿಗʼ ಹೆಸರಿನಲ್ಲಿ ಚಿತ್ರ ನಿರ್ಮಾಣ ಮಾಡಿದ್ದರು. ಈಗ ಇದೇ ಎನ್.ಎಸ್. ರಾಜ್ ಕುಮಾರ್ ಅವರ ನಿರ್ಮಾಣದಲ್ಲಿ, ರವಿಚಂದ್ರನ್ ಅವರೇ ನಟಿಸುತ್ತಿರುವ ʻಕನ್ನಡಿಗʼ ಚಿತ್ರ ಸೆಟ್ಟೇರಿದೆ.