ಕನ್ನಡಿಗ ದಯಾನಂದ್ ನಗರ ಪೊಲೀಸ್ ಆಯುಕ್ತ

ಬೆಂಗಳೂರು,ಮೇ. ೩೦- ಅಧಿಕಾರಕ್ಕೆ ಬಂದ ಬೆನ್ನಲ್ಲಿಯೇ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿರುವ ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರ ನಗರ ಪೊಲೀಸ್ ಆಯುಕ್ತರನ್ನಾಗಿ ಗುಪ್ತಚರದಳದ ಮುಖ್ಯಸ್ಥರಾಗಿದ್ದ ಬಿ.ದಯಾನಂದ್ ಅವರನ್ನು ನೇಮಕ ಮಾಡಿದೆ.ನಗರದಲ್ಲಿ ಸಿಸಿಬಿಯ ಜಂಟಿ ಆಯುಕ್ತರಾಗಿ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿರುವ ಬಳ್ಳಾರಿಯ ಹರಪ್ಪನಹಳ್ಳಿ ಮೂಲದ ೧೯೯೪ ನೇ ಸಾಲಿನ ರಾಜ್ಯ ಕೇಡರ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ.ಹಿರಿಯ ಕೆಎಎಸ್ ಅಧಿಕಾರಿ ದಿ. ಅಷ್ಟಮೂರ್ತಿ ಅವರ ಪುತ್ರರಾಗಿರುವ ದಯಾನಂದ್ ನಿಷ್ಠೆ ಪ್ರಾಮಾಣಿಕತೆ ದಕ್ಷತೆಗೆ ಹೆಸರಾದವರು.ದಯಾನಂದ ಅವರು ಮಂಗಳೂರು, ಕೋಲಾರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಯಲ್ಲಿ ಎಸ್ ಪಿಯಾಗಿ ಮೈಸೂರು ಪೊಲೀಸ್ ಆಯುಕ್ತರಾಗಿ, ಸಾರಿಗೆ ಕಮೀಷನರ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷದ ಆಡಳಿತದಲ್ಲೂ ಉತ್ತಮ ಸ್ಥಾನಗಳನ್ನು ನೀಡಲಾಗಿತ್ತು. ಎಲ್ಲರಿಗೂ ನಂಬಿಕರ್ಹ, ದಕ್ಷ ಅಧಿಕಾರಿ ಎನ್ನಿಸಿಕೊಂಡಿದ್ದಾರೆ. ಗೃಹ ಇಲಾಖೆಗೆ ಸೇರಿದ್ದರೂ ಗುಪ್ತಚರ ಇಲಾಖೆಯನ್ನು ಮುಖ್ಯಮಂತ್ರಿ ತಾವೇ ಇಟ್ಟುಕೊಳ್ಳುತ್ತಾರೆ. ಈ ಇಲಾಖೆಗೆ ತಮ್ಮ ಅತ್ಯಂತ ನಂಬಿಕರ್ಹ ಅಧಿಕಾರಿಯನ್ನಷ್ಟೆ ನೇಮಿಸಿಕೊಳ್ಳಲಾಗುತ್ತದೆ.ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಹಾಗೂ ಎಚ್.ಡಿ. ಕುಮಾರಸ್ವಾಮಿ ಇತ್ತೀಚೆಗೆ ಮುಖ್ಯಮಂತ್ರಿಯಾಗಿದ್ದ
ಬಸವರಾಜ ಬೊಮ್ಮಾಯಿ ಅವರಿಗೂ ಗುಪ್ತಚರ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆಯನ್ನು ದಯಾನಂದ ಹೊಂದಿದ್ದಾರೆ.
ಗುಪ್ತಚರ ದಳಕ್ಕೆ ಚಂದ್ರ:
ದಯಾನಂದ ಅವರಿಂದ ತೆರವಾಗಿರುವ ಗುಪ್ತಚರ ದಳದ ಮುಖ್ಯಸ್ಥರಾಗಿ ಎಡಿಜಿಪಿ ಶರತ್ ಚಂದ್ರ ಅವರನ್ನು ನಿಯೋಜಿಸಲಾಗಿದೆ.
ಮಂಡ್ಯ ಜಿಲ್ಲೆಯ ಕಿಕ್ಕೇರಿ ಮೂಲದ ಶರತ್ ಚಂದ್ರ ಅವರು ೧೯೯೭ ನೇ ಸಾಲಿನ ಐಪಿಎಸ್ ಅಧಿಕಾರಿಯಾಗಿದ್ದು ನಗರದಲ್ಲಿ ಡಿಸಿಪಿ ಬಳ್ಳಾರಿ, ಕೊಡಗು,ಹಾಸನಗಳಲ್ಲಿ ಎಸ್ ಪಿಯಾಗಿ ನಗರದಲ್ಲಿ ಜಂಟಿ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಗುಪ್ತಚರ ದಳದ ಐಜಿಪಿಯಾಗಿ ಸೇವೆ ಸಲ್ಲಿಸಿದ್ದಾರೆ.
ಸಿಐಡಿಗೆ ಸಲೀಂ:
ಶರತ್ ಚಂದ್ರ ಅವರು ದಕ್ಷ ಪ್ರಮಾಣಿಕ ನಿಷ್ಠಾವಂತ ಅಧಿಕಾರಿಯಾಗಿದ್ದು ಇಲಾಖೆಯ ಹಲವು ಸವಾಲುಗಳನ್ನು ಸಮರ್ಥ ವಾಗಿ ನಿಭಾಯಿಸಿದ್ದಾರೆ ದಯಾನಂದ ಹಾಗೂ ಶರತ್ ಚಂದ್ರ ಅವರು ಕನ್ನಡಿಗರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಇಲ್ಲಿವರೆಗೂ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಸಿಎಚ್ ಪ್ರತಾಪ್ ರೆಡ್ಡಿ ಅವರನ್ನು ಆಂತರಿಕ ಭದ್ರತಾ ವಿಭಾಗದ ಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಟ್ರಾಫಿಕ್‌ನ ವಿಶೇಷ ಆಯುಕ್ತ ಹಾಗೂ ಎಡಿಜಿಪಿ ಎಂಎ ಸಲೀಂ ಅವರಿಗೆ ಬಡ್ತಿ ನೀಡಿ ಸಿಐಡಿ ವಿಭಾಗದ ಡಿಜಿಪಿ ಆಗಿ ನೇಮಿಸಲಾಗಿದೆ.
ಒಟ್ಟಾರೆ ನಾಲ್ವರು ಪ್ರಮುಖ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.